ರಾಮನಗರ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಜನಸಾಮಾನ್ಯರು, ರೈತರು, ಕೂಲಿ ಕಾರ್ಮಿಕರು, ಸಣ್ಣ ಕೈಗಾರಿಕೆಗಳಿಗೆ ಆರ್ಥಿಕ ಶಕ್ತಿ ತುಂಬುವಂತೆ ತಾವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿರುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ರಾಮನಗರದಲ್ಲಿ ಕುಟುಂಬ ಸಮೇತರಾಗಿ ಬಂದು ಆಹಾರ ಕಿಟ್‌ಗಳ ವಿತರಣೆಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು. ಆರ್ಥಿಕ ಪರಿಸ್ಥಿತಿ ವಿಚಾರದಲ್ಲಿ ತಾವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಟ್ವೀಟ್ ಮಾಡಿ ರುವುದಾಗಿ ತಿಳಿಸಿದರು. ಜನಸಾಮಾನ್ಯರು, ರೈತರು, ಕೂಲಿ ಕಾರ್ಮಿಕರು, ಸಣ್ಣ ಕೈಗಾರಿಕೆಗಳು ಆರ್ಥಿಕ ಸಹಕಾರಕ್ಕೆ ಮಾಡಿ ಕೊಂಡ ಮನವಿಗೆ ಸರ್ಕಾರಗಳು ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಿರ್ಧಾರಗಳು ಬಡವರ ಪರವಾಗಿರಲಿ:
ಮ್ಯೂಚ್ಯುಯಲ್ ಫಂಡ್‌ಗಳಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸುಮಾರು 50 ಸಾವಿರ ಕೋಟಿ ರೂ. ನೆರವಿಗೆ ಮುಂದಾಗಿದೆ. ಈ ಕ್ರಮ ದೊಡ್ಡ ಕಂಪನಿಗಳಿಗೆ ಉಪಕಾರ
ವಾಗುತ್ತದೆ, ಹೊರತು ಜನಸಾಮಾನ್ಯರಿಗಲ್ಲ. ಸರ್ಕಾರದ ನಿರ್ಧಾರಗಳು ಬಡವರ ಪರ ಇರಬೇಕು ಎಂದು ಟೀಕಾ ಪ್ರಹಾರ ನಡೆಸಿದರು. ವಾಟ್ಸ್‌ಆ್ಯಪ್ ಮೂಲಕ ಒಬ್ಬ ರೈತ ಹೆಣ್ಣು ಮಗಳು ಈರುಳ್ಳಿ ಮಾರಾಟಕ್ಕೆ ನೆರವು ಕೋರಿದ್ದಾರೆ. ಸಿಎಂ ಈ ಹೆಣ್ಣುಮಗಳ ಮನವಿಗೆ ಸ್ಪಂದಿಸುವುದಾಗಿ ತಿಳಿಸಿದ್ದಾರೆ. ಇಂತಹ ಅನೇಕ ರೈತರಿದ್ದಾರೆ ಅವರೆಲ್ಲರಿಗೂ ರಕ್ಷಣೆ ಬೇಕಾಗಿದೆ. ಲಾಕ್‌ಡೌನ್ ಇನ್ನು 15 ದಿನ ಮುಂದುವರಿಯುವ ಸಾಧ್ಯತೆಯಿದೆ. ಬಾಡಿಗೆ ವಿನಾಯ್ತಿ, ವಿದ್ಯುತ್ ಬಿಲ್ ಪಾವತಿ ವಿಚಾರದಲ್ಲಿ ಸರ್ಕಾರ ಜನಸಾಮಾನ್ಯರ ನೆರವಿಗೆ ಬರಬೇಕು ಎಂದರು.
ಬೆಂದ ಮನೆಗೆಗಳ ಇರಿಯುವ ಕೆಲಸ ಬೇಡ: ಖಜಾನೆ ತುಂಬಿಸಿಕೊಳ್ಳಲು ಸರ್ಕಾರವೇ ಮುಂದಾಗಬೇಕು. ನಿರೀಕ್ಷಿಯಂತೆ ತೆರಿಗೆಗಳು ಸರ್ಕಾರದ ಬೊಕ್ಕಸ ತುಂಬುತ್ತಿಲ್ಲ ನಿಜ. ಆದರೆ ಸರ್ಕಾರ ದುಂದು ವೆಚ್ಚ ನಿಲ್ಲಿಸಬೇಕು ಎಂದು ರ್ಯಾಪಿಡ್ ಟೆಸ್ಟ್ ಉದಾಹರಣೆ ನೀಡಿದರು. ಒಂದು ಕಂಪನಿಗೆ ಗುತ್ತಿಗೆ 12 ಕೋಟಿ ರೂ.ಗೆ ಸರ್ಕಾರ ನೀಡಿದೆ. ಇದು ಕೊನೆಗೆ 30 ಕೋಟಿ ರೂ.ಗೆ ಬಂದು ನಿಂತಿದೆ. ಸ್ಯಾನಿಟೈಸರ್ ಖರೀದಿಯಲ್ಲಿ ಗೋಲ್‌ಮಾಲ್ ಆಗಿದೆ ಎಂದು ಪತ್ರಿಕೆ ಯೊಂದರಲ್ಲಿ ವರದಿ ಬಂದಿದೆ. ಬೆಂದ ಮನೆಗೆಗಳ ಇರಿಯುವ ಕೆಲಸ ಬೇಡ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಿಖಿಲ್ ನೇತೃತ್ವದಲ್ಲಿ 2 ಮೊಬೈಲ್ ಕ್ಲಿನಿಕ್‌ಗಳು
ರಾಮನಗರ ಮತ್ತು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಲ್ಲಿ ಜನಸಮಾನ್ಯರ ಆರೋಗ್ಯದ ವಿಚಾರದಲ್ಲಿ ನೆರವಿಗೆ ಧಾವಿಸಲು ತಾವು ಚಿಂತನೆ ನಡೆಸಿದ್ದು ಸದ್ಯದಲ್ಲೇ ಎರಡು ಮೊಬೈಲ್ ಕ್ಲಿನಿಕ್‌ಗಳನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಅಗತ್ಯವಿರುವವರಿಗೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗೂ ಅವಕಾಶವಿದೆ. ಈ ಕಾರ್ಯಕ್ರಮದ ನೇತೃತ್ವವನ್ನು ಪುತ್ರ ನಿಖಿಲ್ ನಿರ್ವಹಿಸಲಿದ್ದಾನೆ ಎಂದು ಕುಮಾರಸ್ವಾಮಿ ತಿಳಿಸಿದರು.