ಹುಬ್ಬಳ್ಳಿ: ಕಪ್ಪತಗುಡ್ಡವನ್ನು ಸಂರಕ್ಷಿತ ಅರಣ್ಯ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು ಸ್ವಾಗತಾರ್ಹ. ಆದರೆ ಕಪ್ಪತಗುಡ್ಡದ ಸಂಪನ್ಮೂಲ ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಪೂರಕ ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್. ಹಿರೇಮಠ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಭದ್ರ ಹಿತಾಸಕ್ತಿಗಳು ಕಪ್ಪತಗುಡ್ಡವನ್ನು ಗಣಿಗಾರಿಕೆಗೆ ಬಳಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಆದರೆ ತೋಂಟದ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟಕ್ಕೆ ಫಲ ಲಭಿಸಿದೆ. ಜನರಲ್ಲಿ ಜಾಗೃತಿ ಮೂಡಿ ಹೋರಾಟದಲ್ಲಿ ಪಾಲ್ಗೊಂಡಿದ್ದರಿಂದ ಹಾಗೂ ಕಪ್ಪತಗುಡ್ಡ ಉಳಿಸಿ ಹೋರಾಟ ಸಮಿತಿ ಮಾಡಿದ ಹೋರಾಟದಿಂದ ಜಯ ಲಭಿಸಿದೆ ಎಂದರು.
ಒಟ್ಟು 33067 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ 17,872 ಹೆಕ್ಟೇರ್ ಮಾತ್ರ ಕಪ್ಪತಗುಡ್ಡ ಸಂರಕ್ಷಿತ ಪ್ರದೇಶಕ್ಕೆ ಒಳಪಡುತ್ತದೆ. ಕಪ್ಪತಗುಡ್ಡದ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಸ್ಥಳೀಯರಿಗೆ ಅವಕಾಶ ಸಿಗಬೇಕು. ಅಲ್ಲಿನ ಕಾಡಿನಲ್ಲಿ ಬೆಳೆಯುವ ಹಣ್ಣು, ಕಾಯಿ, ಬೀಜ ಸ್ಥಳೀಯರಿಗೆ ಬಳಕೆಗೆ ಲಭ್ಯವಾಗಬೇಕು.
ವೈಜ್ಞಾನಿಕ ರೀತಿಯಲ್ಲಿ ಬಳಕೆ ಮಾಡಿಕೊಳ್ಳುವ ವ್ಯವಸ್ಥೆಯಾಗಬೇಕು. ಕಾಡಿನಲ್ಲಿ ಸಾಕಷ್ಟು ಔಷಧ ಸಸ್ಯಗಳಿದ್ದು, ಅವುಗಳ ಉಪಯೋಗ ಪಡೆಯಲು ಅವಕಾಶ ಸಿಗಬೇಕು. ಅಲ್ಲಿನ ಜೈವಿಕ ವೈವಿಧ್ಯತೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಇದು ನಮ್ಮೆಲ್ಲರ ಆಸ್ತಿಯಾಗಿದ್ದು, ಇದರ ರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಮನೋಭಾವ ಸ್ಥಳೀಯರಲ್ಲಿ ಮೂಡಬೇಕು ಎಂದರು.
ಮುಖ್ಯ ನ್ಯಾಯಾಧೀಶರಿಗೆ ಪತ್ರ: ಮೆಗಾಸಿಟಿ ಹಗರಣದ ಮುಖ್ಯ ಸೂತ್ರದಾರ ಶಾಸಕ ಸಿ.ಪಿ. ಯೋಗೇಶ್ವರ ವಿರುದ್ಧ ಸಲ್ಲಿಸಲಾದ ಚಾರ್ಜ್‌ಶೀಟ್ ಕ್ರಿಮಿನಲ್ ಪಿಟಿಶನ್ ಸಂಖ್ಯೆ 206/2017 ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿದ್ದು, ಅದಕ್ಕೆ ಸಂಬಂಧಿತ ಅರ್ಜಿ 2017 ಜನವರಿ 4ರಂದು ವಿಚಾರಣೆಗೆ ಬಂದಾಗ ಜಸ್ಟಿಸ್ ಆನಂದ ಭೈರಾರೆಡ್ಡಿ ಸಂದೇಹಾಸ್ಪದ ತಡೆಯಾಜ್ಞೆ ನೀಡಿದ್ದಾರೆ. ಹೀಗಾಗಿ, ಅವರನ್ನು ಕ್ರಿಮಿನಲ್ ಮೇಲ್ವಿಚಾರಣೆಯಿಂದ ಕೈಬಿಡಬೇಕೆಂದು ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆಯಲಾಗಿದೆ ಎಂದರು.