Advertisement

ಸ್ವಾಮೀಜಿಗಳ ವಿರೋಧಕ್ಕೆ ಸರ್ಕಾರ ಮಣಿಯದಿರಲಿ

05:28 PM May 16, 2022 | Team Udayavani |

ಕೊಪ್ಪಳ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆಗೆ ವಿರೋಧ ವ್ಯಕ್ತಪಡಿಸುವ ಸ್ವಾಮಿಗಳ ನಡೆಗೆ ಎಸ್‌ಎಫ್‌ಐ ತೀವ್ರ ವಿರೋಧ ವ್ಯಕ್ತಪಡಿಸಿ ತಮ್ಮ ಅಸಮಾಧಾನ ಹೊರ ಹಾಕಿದ್ದಲ್ಲದೇ, ಮೊಟ್ಟೆ ವಿತರಣೆ ಮುಂದುವರಿಯಲಿ ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

Advertisement

ರಾಜ್ಯದಲ್ಲಿ ಶಾಲಾ ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗಾಗಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ವಿಜಯಪುರ ಜಿಲ್ಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಅಪೌಷ್ಟಿಕತೆ ಮತ್ತು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆಯ ಸಮೀಕ್ಷಾ ವರದಿ ಹಿನ್ನೆಲೆಯಲ್ಲಿ ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರದಲ್ಲಿ 3 ದಿನ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡುತ್ತಿದೆ. ಆದರೆ ಕೆಲ ಸ್ವಾಮಿಗಳು ಜಾತಿ ಮತ್ತು ಧಾರ್ಮಿಕತೆ, ನಂಬಿಕೆ ಹೆಸರಿನಲ್ಲಿ ಮೊಟ್ಟೆ ವಿತರಣೆ ವಿರೊಧೀಧಿಸಿ, ಸಿಎಂ ಮೂಲಕ ಮೊಟ್ಟೆ ವಿತರಣೆ ತಡೆಯಬೇಕೆಂದು ಒತ್ತಡ ಹೇರುತ್ತಿದ್ದಾರೆ.

ಸರ್ಕಾರದ ಆದೇಶವನ್ನು ವಾಪಸ್‌ ಪಡೆಯಬೇಕೆಂದು ಸಿಎಂ ಮೇಲೆ ಒತ್ತಡ ಹಾಕುತ್ತಿರುವುದು ಸರಿಯಲ್ಲ. ಮೊಟ್ಟೆ ತಿನ್ನುವುದು ಹಾಗೂ ತಿನ್ನದಿರುವುದು ಮಕ್ಕಳ ಆಯ್ಕೆಯಾಗಿರುತ್ತದೆ. ಇದನ್ನೇ ತಿನ್ನಬೇಕು, ಇದನ್ನೇ ತಿನ್ನಬಾರದೆಂದು ಆಹಾರದ ಹಕ್ಕಿನ ಮೇಲೆ ಸ್ವಾಮಿಗಳು ದಾಳಿ ಮಾಡುವುದನ್ನು ಎಸ್‌ಎಫ್‌ಐ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮಕ್ಕಳ ಅಪೌಷ್ಟಿಕತೆ ಪ್ರಮಾಣ ಯಾದಗಿರಿ-ಶೇ.74, ಕಲಬುರಗಿ-ಶೇ.72.4, ಬಳ್ಳಾರಿ-ಶೇ. 72.3, ಕೊಪ್ಪಳ-ಶೇ.70.7, ರಾಯಚೂರು-ಶೇ.70.6, ಬಿದರ್‌-ಶೇ.69.1, ವಿಜಯಪುರ-ಶೇ.68ರಷ್ಟು ಇದೆ. ಈ ಸಮಸ್ಯೆ ನಿವಾರಣೆಗೆ ಸ್ವಾಮಿಗಳು ಶ್ರಮ ವಹಿಸಲಿ.

ಅದನ್ನು ಬಿಟ್ಟು ಜಾತಿ, ಧರ್ಮದ ಹೆಸರಿನಲ್ಲಿ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಇವರ ಕ್ಷುಲ್ಲಕ ಮನಸ್ಥಿತಿಯನ್ನು ಎಸ್‌ಎಫ್‌ಐ ಸಂಘಟನೆ ವಿರೋ ಧಿಸುತ್ತದೆ. ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ನಂತರ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯಲ್ಲಿ ಶೇ. 10ರಿಂದ 12ರಷ್ಟು ಏರಿಕೆ ಕಂಡು ಬಂದಿದೆ. 80ರಷ್ಟು ಮಕ್ಕಳು ಮೊಟ್ಟೆ ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಸುಮಾರು 14,44,000 ಮಕ್ಕಳ ಅಪೌಷ್ಟಿಕತೆ ನಿವಾರಣೆಗೆ ಮೊಟ್ಟೆ ಸಹಾಯವಾಗಲಿದೆ. ಇದನ್ನು ಸ್ವಾಮಿಗಳು ಅರಿಯಬೇಕೆಂದು ಒತ್ತಾಯಿಸಿದರು.

ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳಲ್ಲಿ ವಿವಿಧ ಜಾತಿ-ಧರ್ಮದ ತುಳಿತಕ್ಕೆ ಒಳಗಾದ ಸಮುದಾಯದ, ಬಡವರ, ಹಿಂದುಳಿದ ವರ್ಗ ಸಮುದಾಯದ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ರಾಜ್ಯದ ಎಲ್ಲ ಶಾಲೆಗಳಿಗೂ ಅಪೌಷ್ಟಿಕತೆ ನಿವಾರಣೆಗಾಗಿ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡಲು ಸರ್ಕಾರ ಮುಂದಾಗಬೇಕೆಂದು ಎಸ್‌ಎಫ್‌ಐ ಸಂಘಟನೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು. ಅಮರೇಶ ಕಡಗದ, ನಾಗರಾಜ ಉತ್ತನೂರು, ರಾಜಬಕ್ಷಿ, ಅಮರೇಶ ಪೂಜಾರ, ಭೀಮೇಶ, ಶಂಕರ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next