Advertisement

ಬಡ್ತಿ ಮೀಡಲು ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸಲಿ ಸರ್ಕಾರ

11:19 AM Jul 01, 2017 | Team Udayavani |

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಎದುರಾದ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಅಭಿಪ್ರಾಯಪಟ್ಟಿದ್ದಾರೆ. 

Advertisement

“ಕರ್ನಾಟಕ ದಲಿತ ಸಂಘರ್ಷ ಸಮಿತಿ’ಯು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರ 79ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, “ಸರ್ಕಾರಿ ನೌಕರರ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಆದ ದೊಡ್ಡ ಅನ್ಯಾಯ.

ತೀರ್ಪು ಮರುಪರಿಶೀಲನೆ ಒಂದೆಡೆಯಾದರೆ, ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ರಾಜ್ಯ ಸರ್ಕಾರ ತಕ್ಷಣಕ್ಕೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕು,’ ಎಂದು ಹೇಳಿದರು. 

ತಿದ್ದುಪಡಿ ತರಲಿ: ಬಡ್ತಿ ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಕೇವಲ ಕರ್ನಾಟಕಕ್ಕೆ ಅಲ್ಲ; ದೇಶಕ್ಕೆ ಅನ್ವಯ ಆಗಲಿದೆ. ಆದ್ದರಿಂದ ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಈ ವಿಷಯವನ್ನು ಮಂಡಿಸಿ, ಅನುಮೋದನೆ ಪಡೆದು, ಸಂವಿಧಾನದ 117ನೇ ಕಲಂಗೆ ತಿದ್ದುಪಡಿ ತರಬೇಕು.

ಇದಕ್ಕೆ ಎಲ್ಲ ಸಂಸದರು ಪಕ್ಷಾತೀತವಾಗಿ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು. 1972ರಿಂದ ಈವರೆಗೆ ಬಡ್ತಿ ಮೀಸಲಾತಿ ವಿಚಾರದಲ್ಲಿ ಹಲವು ತಿದ್ದುಪಡಿಗಳಾಗಿವೆ. ಮತ್ತೂಂದು ತಿದ್ದುಪಡಿಯ ಅಗತ್ಯವೂ ಇದೆ. ಸುಪ್ರೀಂ ಕೋರ್ಟ್‌ ಕೂಡ ತನ್ನ ತೀರ್ಪನ್ನು ಮರುಪರಿಶೀಲನೆ ಮಾಡಬೇಕು ಎಂದರು. 

Advertisement

ಮರುಪರಿಶೀಲನೆಗೆ ಸಿದ್ಧತೆ; ಸಚಿವ
ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಮಾತನಾಡಿ, “ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಕೆಗೆ ಸರ್ಕಾರ ತಯಾರಿ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕಾನೂನು ತಜ್ಞರಿಂದ ಸಲಹೆಗಳನ್ನೂ ಪಡೆಯಲಾಗಿದೆ,’ ಎಂದರು. ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಸದಸ್ಯ ಶ್ರೀಧರ ಕಲಿವೀರ, ಸಂಚಾಲಕರಾದ ಎಂ. ಸೋಮಶೇಖರ್‌, ವೆಂಕಟಗಿರಿಯಯ್ಯ, ದಾಸ್‌ ಪ್ರಕಾಶ್‌ ಮತ್ತಿತರರು ಉಪಸ್ಥಿತರಿದ್ದರು. 

ಬಾಯ್ಮುಚ್ಕೋಂಡ್ ಇರ್ಬೇಕು ಅಂತ ಅಲ್ಲ 
ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ ಎಂದಾಕ್ಷಣ ಬಾಯಿಮುಚ್ಚಿಕೊಂಡು ಕೂರಬೇಕು ಎಂದರ್ಥವಲ್ಲ; ಸಾಂವಿಧಾನಾತ್ಮಕ ವಿಮರ್ಶೆಗೆ ಅವಕಾಶ ಇದೆ. ಆದ್ದರಿಂದ ಬಾಯಿಬಿಡಬೇಕಾಗುತ್ತದೆ. “ಬಡ್ತಿ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್‌ ತೀರ್ಪಿನ ಬಗ್ಗೆ ಮಾತನಾಡುವಂತಿಲ್ಲ’ ಎಂಬ ಸಚಿವ ಆಂಜನೇಯ ಅವರ ಮಾತಿಗೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಅವರ ತೀಕ್ಷಣ್ಣ ಪ್ರತಿಕ್ರಿಯೆ ಇದು. 

ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಸಚಿವ ಆಂಜನೇಯ, “ಬಡ್ತಿ ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿರುವುದರಿಂದ ಈ ಬಗ್ಗೆ ಯಾವುದೇ ಟೀಕೆ-ಟಿಪ್ಪಣಿ ಅಥವಾ ಪ್ರತಿಕ್ರಿಯೆ ನೀಡುವುದಿಲ್ಲ,’ ಎಂದು ಹೇಳಿ, ಕಾರ್ಯನಿಮಿತ್ತ ಕಾರ್ಯಕ್ರಮದಿಂದ ನಿರ್ಗಮಿಸಿದರು. 

ನಂತರ ಮಾತನಾಡಿದ ನ್ಯಾ. ನಾಗಮೋಹನದಾಸ್‌, “ನ್ಯಾಯಾಂಗದ ತೀರ್ಪುಗಳನ್ನು ಸಾಂವಿಧಾನಾತ್ಮಕವಾಗಿ ವಿಮರ್ಶೆಗೊಳಪಡಿಸುವ ಹಕ್ಕು ಪ್ರತಿಯೊಬ್ಬ ನಾಗರಿಕರಿಗೂ ಇದೆ. ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ ಎಂದರೆ, ಬಾಯಿಮುಚ್ಚಿಕೊಂಡು ಕೂರಬೇಕು ಎಂದರ್ಥವಲ್ಲ; ಅನ್ಯಾಯವಾದಾಗ ಬಾಯಿಬಿಡಬೇಕಾಗುತ್ತದೆ,’ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next