ವಾಡಿ: ಸರಕಾರಿ ಉರ್ದು ಶಾಲೆ ಮೈದಾನ ಕೆಸರು ಗದ್ದೆಯಂತಾಗಿದ್ದು, ನಿಂತ ನೀರಿನ ಗಲೀಜಿನಲ್ಲಿ ಗ್ರಾಮದ ಮಕ್ಕಳು ಮೀನು ಹಿಡಿಯುತ್ತಿದ್ದಾರೆ. ಮುಳ್ಳುಕಂಟಿಯಿಂದ ಕೂಡಿರುವ ಶಾಲೆ ಪರಿಸರದಲ್ಲಿ ಮಕ್ಕಳ ಆಟೋಟಗಳು ಮರೀಚಿಕೆಯಾಗಿವೆ.
ನಾಲವಾರ ಗ್ರಾಮದ ಹೊರ ವಲಯದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯಡಿ ನಿರ್ಮಿಸಲಾಗಿರುವ ಸರಕಾರಿ ಉರ್ದು ಪ್ರೌಢಶಾಲೆ ಹೊಸ ಕಟ್ಟಡ ಉದ್ಘಾಟನೆಗೊಂಡು ಮಕ್ಕಳು ತರಗತಿಗೆ ಹಾಜರಾಗಿದ್ದು, ಇಡಿ ಶಾಲಾ ಕಟ್ಟಡ ಅವ್ಯವಸ್ಥೆಯಲ್ಲಿ ನಿಂತಿದೆ.
ಗ್ರಾಮದ ಮಧ್ಯೆ ಭಾಗದಲ್ಲಿದ್ದ ಉರ್ದು ಪ್ರೌಢಶಾಲೆಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಕಟ್ಟಡ ಕಲಿಕೆಗೆ ಪೂರಕವಾಗಿದೆ. ಅಗತ್ಯಕ್ಕೆ ತಕ್ಕಷ್ಟು ಕೋಣೆಗಳ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಸುಸಜ್ಜಿತ ಈ ಕಟ್ಟಡದಲ್ಲಿ ಅಭ್ಯಾಸಕ್ಕೆ ಅಣಿಯಾಗಿರುವ ವಿದ್ಯಾರ್ಥಿಗಳಿಗೆ ಕಲುಷಿತ ಪರಿಸರ ಕಿರಿಕಿರಿ ಉಂಟುಮಾಡುತ್ತಿದೆ.
ಶಾಲಾ ಕಟ್ಟಡ ಸುತ್ತ ಬೆಳೆ ಮುಳ್ಳು ಕಂಟಿಗಳನ್ನು ಕತ್ತರಿಸಲಾಗಿಲ್ಲ. ಮುಖ್ಯ ರಸ್ತೆಯಿಂದ ಶಾಲೆ ಪ್ರವೇಶಿಸಲು ರಸ್ತೆಯಿಲ್ಲ. ತೆಗ್ಗುದಿನ್ನೆಗಳಿಂದ ಕೂಡಿರುವ ಶಾಲೆ ಮೈದಾನದಲ್ಲಿ ಮಳೆ ನೀರು ಸಂಗ್ರಹವಾಗಿದೆ.
ಕುಡಿಯುವ ನೀರು ಸಂಗ್ರಹಗಾರದ ಸುತ್ತ ಕೆಸರಿನ ಹೂಳು ತುಂಬಿದೆ. ಉತ್ತಮ ಕಟ್ಟಡ ನಿರ್ಮಿಸಿಕೊಟ್ಟಿರುವ ಸರಕಾರ ಶಾಲೆಗೆ ಕಾಂಪೌಂಡ್ ಸೌಲಭ್ಯ ಮತ್ತು ವಿದ್ಯುತ್ ಸೌಕರ್ಯ ಒದಗಿಸಿಲ್ಲ. ಗ್ರಾಮದ ಜಾನುವಾರುಗಳು ಶಾಲೆ ಮೈದಾನದಲ್ಲಿ ವಿಶ್ರಾಂತಿ ಪಡೆಯಲು ಬರುತ್ತಿದ್ದು, ಮಕ್ಕಳಿಗೆ ಮುಕ್ತವಾದ ಪರಿಸರ ಇಲ್ಲವಾಗಿದೆ.
ವಿವಿಧ ಸಮಸ್ಯೆಗಳನ್ನು ಜೀವಂತವಾಗಿಟ್ಟು ಅವಸರದಲ್ಲಿ ಶಾಲೆ ಕಟ್ಟಡ ಉದ್ಘಾಟನೆ ನೆರವೇರಿಸಿದ್ದಾರೆ ಎಂದು ಪಾಲಕರು ದೂರಿದ್ದಾರೆ. ಉರ್ದು ಶಾಲೆ ಎದುರಿಸುತ್ತಿರುವ ಕೊರತೆಗಳನ್ನು ಈಡೇರಿಸಲು ಶಿಕ್ಷಣ ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.