ಬೆಂಗಳೂರು: ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಬ್ಯಾಗ್ ಭಾರ ಎಷ್ಟಿರಬೇಕು ಎಂಬುದನ್ನು ಸ್ಪಷ್ಟಪಡಿಸಿ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.
1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ತೂಕವು ವಿದ್ಯಾರ್ಥಿಗಳ ದೇಹ ತೂಕಕ್ಕಿಂತ ಸರಾಸರಿ ಶೇ.10ರಷ್ಟು ಮೀರಬಾರದು, 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳಿಗೆ ಮನೆ ಕೆಲಸ (ಹೋಂ ವರ್ಕ್) ನೀಡಬಾರದು, 3ನೇ ಶನಿವಾರವನ್ನು “ಬ್ಯಾಗ್ ರಹಿತದಿನ’ ಆಚರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚಿಸಿ ಆದೇಶ ಹೊರಡಿಸಿದೆ.
2019-20ನೇ ಸಾಲಿನಿಂದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 1ನೇ ತರಗತಿ ಮಕ್ಕಳಿಗೆ 2 ಕೆಜಿ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಗರಿಷ್ಠ 5 ಕೆಜಿ ತೂಕ ಮೀರದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶಿಸಿದೆ.
ಮಕ್ಕಳಿಗೆ ಹೆಚ್ಚಿನ ಹೊರೆ ಹೊರಿಸುವುದರಿಂದ ಬೆನ್ನು ನೋವು, ಕತ್ತು ನೋವುಗಳು ಶಾಶ್ವತವಾಗಿ ಕಾಣಿಸಿಕೊಳ್ಳಲಿವೆ ಎಂಬ ಸದುದ್ದೇಶದಿಂದ ಬ್ಯಾಗ್ ತೂಕ ಕಡಿಮೆ ಮಾಡಲಾಗಿದ್ದು, 1ರಿಂದ 2ನೇ ತರಗತಿ ವಿದ್ಯಾರ್ಥಿಗಳಿಗೆ 1.5ರಿಂದ 2 ಕಿ.ಗ್ರಾಂ., 3ರಿಂದ5ನೇ ತರಗತಿ 2ರಿಂದ 3 ಕಿ.ಗ್ರಾಂ., 6ರಿಂದ8ನೇ ತರಗತಿ 3ರಿಂದ 4 ಕಿ.ಗ್ರಾಂ., 9ರಿಂದ 10ನೇ ತರಗತಿಗೆ 4ರಿಂದ5 ಕಿ.ಗ್ರಾಂ. ಮೀರಬಾರದು ಎಂದು ಸೂಚಿಸಿದೆ.
ವಿದ್ಯಾರ್ಥಿಗಳಿಗೆ ಆಯಾ ದಿನದ ವೇಳಾಪಟ್ಟಿಗೆ ಅನುಗುಣವಾಗಿ ಪಠ್ಯಪುಸ್ತಕ, ನೋಟ್ ಪುಸ್ತಕಗಳನ್ನು ಶಾಲೆಗೆ ತರಲು ಅಗತ್ಯ ಸೂಚನೆ ನೀಡಬೇಕು. ಶಾಲೆಗಳಲ್ಲಿಯೇ ಶುದ್ಧ ನೀರಿನ ವ್ಯವಸ್ಥೆ ಮಾಡಬೇಕು, 100 ಪೇಜ್ ಮೀರಿದ ನೋಟ್ ಪುಸ್ತಕಗಳನ್ನು ನಿಗದಿಗೊಳಿಸಬಾರದು, ಕಡಿಮೆ ಖರ್ಚಿನ ಹಗುರವಾದ, ದೀರ್ಘಕಾಲ ಬಾಳಿಕೆ ಬರುವಂತಹ ಬ್ಯಾಗ್ ಹಾಗೂ ಇನ್ನಿತರ ಕಲಿಕಾ ಸಾಮಾಗ್ರಿಗಳನ್ನು ಬಳಸುವಂತೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಬೇಕು ಎಂದು ಸರ್ಕಾರ ತಿಳಿಸಿದೆ.
ಬ್ಯಾಗ್ ರಹಿತ ದಿನ: ಪ್ರತಿ ತಿಂಗಳ 3ನೇ ಶನಿವಾರವನ್ನು “ಬ್ಯಾಗ್ ರಹಿತ ದಿನ’ವನ್ನಾಗಿ ಆಚರಿಸಬೇಕು. ಆ ದಿನ ಶಿಕ್ಷಕರು ಪಠ್ಯಪುಸ್ತಕ ಅಥವಾ ಇತರ ಪೂರಕ ಸಾಮಗ್ರಿಗಳ ಅವಶ್ಯಕತೆ ಇಲ್ಲದೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಬೇಕು.
ವಿಜ್ಞಾನ ಪ್ರಯೋಗ ಮತ್ತು ಪ್ರದರ್ಶನಗಳು, ಸಾಮಾನ್ಯ ಜ್ಞಾನ, ಶೈಕ್ಷಣಿಕ ಸಂಘದ ಚಟುವಟಿಕೆಗಳು, ಚಿತ್ರಕಲೆ, ಚಿತ್ರಗಳಿಗೆ ಬಣ್ಣ ತುಂಬುವ ಚಟುವಟಿಕೆ, ಭಕ್ತಿಗೀತೆಗಳು, ದೇಶಭಕ್ತಿ ಗೀತೆಗಳ ಚಟುವಟಿಕೆ, ನಕ್ಷೆ ಓದಿಸುವುದು, ಕ್ರೀಡೆಗೆ ಪ್ರೋತ್ಸಾಹ ನೀಡುವುದು, ಗಣಿತದ ವಿನೋದ, ಅಬ್ಯಾಕಸ್ ಸೇರಿ ಶಾಲಾ ಪರಿಸರಕ್ಕೆ ಅನುಗುಣವಾಗಿ ಶೈಕ್ಷಣಿಕ ಚಟುವಟಿಕೆ ಹಮ್ಮಿಕೊಳ್ಳಲು ನಿರ್ದೇಶಿಸಿದೆ.
ಎಷ್ಟು ತೂಕ
ತರಗತಿ ಬ್ಯಾಗ್ ತೂಕ
1-2 1.5-2 ಕೆ.ಜಿ
3-5 2-3 ಕೆ.ಜಿ
6-8 3-4 ಕೆ.ಜಿ
9-10 4-5 ಕೆ.ಜಿ