ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ತಿಂಗಳಿನಿಂದ ಕಾಶ್ಮೀರ ಪಂಡಿತ ಸಮುದಾಯವನ್ನು ಗುರಿಯಾಗಿ ಇರಿಸಿಕೊಂಡು ಹತ್ಯೆ ನಡೆಯುತ್ತಿವೆ. ಈ ಬೆಳವಣಿಗೆ ಹಿಂದೆ ಪಾಕಿಸ್ತಾನ ಸರ್ಕಾರದ ನೇರ ಚಿತಾವಣೆ ಇದೆ.
ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪತನಗೊಂಡು, ಶೆಹಭಾಜ್ ಷರೀಫ್ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿಯ ವರೆಗೆ ನೇರವಾಗಿ ಪಾಕಿಸ್ತಾನ ಸರ್ಕಾರಕ್ಕೇ ಕಾಶ್ಮೀರ ವಿಚಾರದಲ್ಲಿ ಕಿಡಿಗೇಡಿತನ ಸೃಷ್ಟಿಸಲು ಪೂರ್ಣ ಗಮನ ನೀಡಲು ಸಾಧ್ಯವಾಗುತ್ತಿರಲಿಲ್ಲ.
ಈಗ ಅಲ್ಲಿ “ಸ್ಥಿರ’ ಎಂದು ಹೇಳಿಕೊಳ್ಳುವ ಸರ್ಕಾರ ಇರುವುದರಿಂದ ಕಾಶ್ಮೀರ ವಿಚಾರದಲ್ಲಿ ತಂಟೆ ಮಾಡಲು ಶುರು ಮಾಡಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿವೆ ಎಂದು ಸುದ್ದಿ ವಾಹಿನಿ ವರದಿ ಮಾಡಿದೆ.
ಅದಕ್ಕೆ ಪೂರಕವಾಗಿ ಪಾಕಿಸ್ತಾನದ ಪ್ರಧಾನಿ ಶೆಹಭಾಜ್ ಷರೀಫ್ ಸಂಸತ್‌ನಲ್ಲಿ ಮತ್ತು ಇತರ ಸ್ಥಳಗಳಲ್ಲಿ ನೀಡಿದ ಹೇಳಿಕೆಗಳಿಂದ ಇದು ವ್ಯಕ್ತವಾಗುತ್ತದೆ. ಏ.11ರಂದು ಮಾತನಾಡಿದ್ದ ವೇಳೆ “ಜಗತ್ತಿನ ಯಾವುದೇ ವೇದಿಕೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿರುವ ನಮ್ಮ ಸಹೋದರ- ಸಹೋದರಿಯರಿಗಾಗಿ ಧ್ವನಿ ಏರಿಸುತ್ತೇವೆ. ಅವರಿಗೆ ರಾಜತಾಂತ್ರಿಕ ಮತ್ತು ನೈತಿಕ ಬೆಂಬಲ ನೀಡುತ್ತೇವೆ’ ಎಂದು ಪ್ರಕಟಿಸಿದ್ದರು.
ಏ.12ರಂದು ಮಾತನಾಡಿದ್ದ ವೇಳೆ ಶೆಹಭಾಜ್ ಪ್ರಧಾನಿ ನರೇಂದ್ರ ಮೋದಿಯವರು ಕಾಶ್ಮೀರ ವಿಚಾರವನ್ನು ಶಾಂತಿಯುತವಾಗಿ ಬಗೆಹರಿಸಲು ಇಚ್ಛಿಸುತ್ತದೆ. ಜತೆಗೆ ಭಾರತದ ಜತೆಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ ಎಂದು ಹೇಳಿದ್ದರು.
ಜೂ.1ರಂದು ಮಾತನಾಡಿದ್ದ ಪ್ರಧಾನಿ ಟರ್ಕಿ ಸರ್ಕಾರ ಕೂಡ ಪಾಕಿಸ್ತಾನ ಕಾಶ್ಮೀರ ವಿಚಾರ ಪ್ರಸ್ತಾಪಿಸುವುದಕ್ಕೆ ಬೆಂಬಲ ನೀಡಲಿದೆ ಎಂದು ಹೇಳಿದ್ದರು.
ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಕೂಡ ಮೇ 10ರಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೋ ಗುಟೆರೆಸ್ ಅವರಿಗೆ ಪತ್ರ ಬರೆದು ಭಾರತ ಸರ್ಕಾರ ಅಲ್ಲಿನ ಭೌಗೋಳಿಕ ವಿಚಾರದಲ್ಲಿ ಬದಲಾವಣೆ ಮಾಡುತ್ತಿದೆ ಎಂದು ದೂರಿದ್ದರು. ಜತೆಗೆ ಮೇ 19ರಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟೊನಿಯೋ ಗುಟೆರೆಸ್ ಜತೆಗಿನ ಭೇಟಿಯ ವೇಳೆ ಕೂಡ ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದರು.