Advertisement

ಅಧಿಕಾರಕ್ಕೆ  ಬರೋ ವಿಶ್ವಾಸವಿದ್ರೆ ಈಗ್ಲೆ  ಸರ್ಕಾರ ವಿಸರ್ಜಿಸಿ

12:48 PM Sep 20, 2017 | |

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಪಕ್ಷವೇ ಪುನಃ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವಿದ್ದರೆ ಈಗಲೆ ಸರ್ಕಾರವನ್ನು ವಿಸರ್ಜಿಸಿ ಚುನಾವಣೆ ಎದುರಿಸಲಿ ಎಂದು ಬಿಜೆಪಿ ರಾಜ್ಯ ಪ್ರಧಾನ
ಕಾರ್ಯದರ್ಶಿ ಸಿ.ಟಿ.ರವಿ ಸವಾಲು ಹಾಕಿದ್ದಾರೆ.

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವೇ ಪುನಃ ಅಧಿಕಾರಕ್ಕೆ ಬರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇ ಪದೇ ಹೇಳುತ್ತಿದ್ದಾರೆ. ಬಿಜೆಪಿ 60-70 ಸ್ಥಾನಗಳನ್ನು ಪಡೆದು ತೋರಿಸಲಿ ಎಂದು ಸವಾಲು ಹಾಕುತ್ತಾರೆ.

ಅವರಿಗೆ ಇಷ್ಟೊಂದು ವಿಶ್ವಾಸವಿದ್ದರೆ ಕೂಡಲೆ ಚುನಾವಣೆ ಎದುರಿಸಲಿ ಮಾತನಾಡುವವರು ಚುನಾವಣೆಗೇಕೆ ಹಿಂದೇಟು ಹಾಕುತ್ತಿದ್ದಾರೆ, ಅವರಿಗೇಕೆ ಭಯ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಆಡಳಿತಕ್ಕೆ ಬಂದು ನಾಲ್ಕೂವರೆ ವರ್ಷಗಳಾದರೂ ಏನೂ ಕೆಲಸ ಮಾಡಿಲ್ಲ. ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ
ಭಿನ್ನಮತ ಹೆಚ್ಚಾಗುತ್ತಿದೆ. ಆಡಳಿತಕ್ಕೆ ಬಂದ ನಂತರ ನಡೆದ ಲೋಕಸಭಾ ಚುನಾವಣೆ, ಬಿಬಿಎಂಪಿ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪರಾಭವಗೊಂಡಿದೆ. ಈಗಲೂ ಸೋಲಿನ ಹತಾಶೆ ಅವರನ್ನು ಕಾಡುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಏನೇನೋ ಹೇಳಿಕೆ ನೀಡುತ್ತಿದ್ದಾರೆ ಎಂದರು.

ನಾಲ್ಕೂವರೆ ವರ್ಷ ಏನೂ ಮಾಡದ ಸಿದ್ದರಾಮಯ್ಯ ಈಗ ಆಡಳಿತದ ಕೊನೆಯ ಹಂತದಲ್ಲಿ ಏನೋ ಸಾಧನೆ ಮಾಡುವ
ಯತ್ನ ಮಾಡುತ್ತಿದ್ದಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಏನೇ ಮಾಡಿದರೂ ಅದಕ್ಕೆ ಜನ ಬೆಲೆ ಕೊಡುವುದಿಲ್ಲ. ಈಗಾಗಲೇ ರಾಜ್ಯದ ಜನ ಕಾಂಗ್ರೆಸ್‌ ಸರ್ಕಾರದ ಮೇಲೆ ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದರು.

Advertisement

ಈವರೆಗಿನ ಎಲ್ಲ ಸಮೀಕ್ಷೆಗಳೂ ಬಿಜೆಪಿಗೆ ಬಹುಮತ ಬರುವುದನ್ನು ಖಚಿತಪಡಿಸಿವೆ. ಪಕ್ಷದ ರಾಷ್ಟ್ರೀಯ ನಾಯಕರು, ರಾಜ್ಯದ ನಾಯಕರ ಸಲಹೆ, ಸೂಚನೆಗಳನ್ವಯ ಪಕ್ಷದ ಸಂಘಟನೆ ಮಾಡಲಾಗುತ್ತಿದೆ. ಬೂತ್‌ ಮಟ್ಟದಿಂದ ಪಕ್ಷವನ್ನು
ಸದೃಢಗೊಳಿಸಲಾಗುತ್ತಿದೆ. ಇದೆಲ್ಲದರ ಪರಿಣಾಮ ಡಿಸೆಂಬರ್‌ ಅಂತ್ಯದೊಳಗೆ ಪಕ್ಷ 50ಕ್ಕೂ ಹೆಚ್ಚು ಸ್ಥಾನ ಪಡೆಯುವ ಹಂತಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತೀರ್ಪಿನ ನಂತರ ತೀರ್ಮಾನ: ಬಿಬಿಎಂಪಿ ಮೇಯರ್‌, ಉಪಮೇಯರ್‌ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ರವಿ,
ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಚುನಾವಣೆಯಲ್ಲಿ ಹೀನಾಯವಾಗಿ
ಸೋತಿದ್ದರೂ ಕಾಂಗ್ರೆಸ್‌ ವಾಮಮಾರ್ಗದಿಂದ ಆಡಳಿತ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ವಿಧಾನಪರಿಷತ್‌ ಸದಸ್ಯರುಗಳಿಂದ ಬೆಂಗಳೂರಿನ ವಿಳಾಸ ಕೊಡಿಸಿ ಅವರ ಮತವನ್ನು ಪಡೆದು ಆಡಳಿತದ ಚುಕ್ಕಾಣಿ ಹಿಡಿದಿತ್ತು. ಈ ಬಗ್ಗೆ ಪಕ್ಷದ ವತಿಯಿಂದ ವಿಧಾನ ಪರಿಷತ್‌ ಸಭಾಪತಿಗಳು ಹಾಗೂ ಚುನಾವಣಾ ಆಯೋಗಕ್ಕೆ ಈಗಾಗಲೆ ದೂರು ಸಲ್ಲಿಸಿದೆ. ಅಲ್ಲಿನ ತೀರ್ಪು ಬಂದ ನಂತರ ಮುಂದಿನ ನಡೆಯ ಬಗ್ಗೆ ಯೋಚಿಸಲಾಗುವುದು ಎಂದರು.

ನ್ಯಾಯಾಲಯದ ಮೊರೆ: ದತ್ತಪೀಠ ವಿವಾದ ಬಗೆಹರಿಸಲು ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ
ವಿರುದ್ಧವಾಗಿ ಸಮಿತಿ ರಚಿಸಿದೆ. ಸರ್ವೋಚ್ಚ ನ್ಯಾಯಾಲಯವು ಮುಜರಾಯಿ ಆಯುಕ್ತರ ವರದಿಯನ್ವಯ ವಿವಾದ ಇತ್ಯರ್ಥಗೊಳಿಸಿ ಎಂಬ ಆದೇಶ ನೀಡಿತ್ತು. ರಾಜ್ಯ ಸರ್ಕಾರವೂ ತಾನೇ ವಿವಾದ ಬಗೆಹರಿಸುವುದಾಗಿ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿತ್ತು ಎಂದು ಹೇಳಿದರು.

ಈಗ ಸರ್ಕಾರವು ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಸಮಿತಿ ರಚಿಸಿ ವರದಿ ಕೇಳಿದೆ. ಇದರ ವಿರುದ್ಧ ಶೀಘ್ರದಲ್ಲಿಯೇ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next