Advertisement

ಬಿಜೆಪಿಗೆ “ಕರೆಂಟ್‌ ಶಾಕ್‌’ನೀಡಲು ಸರ್ಕಾರ ರೆಡಿ

07:27 AM Oct 25, 2017 | |

ಬೆಂಗಳೂರು: ಅತ್ತ ಪ್ರತಿಪಕ್ಷ ಬಿಜೆಪಿ, ಕಾಂಗ್ರೆಸ್‌ ಸರ್ಕಾರದ ಮೇಲೆ ಹಗರಣ ಆರೋಪಗಳ ಸುರಿಮಳೆಗೈಯುತ್ತಿದ್ದರೆ, ಇತ್ತ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾವಿರಾರು ಕೋಟಿ ರೂ. ಮೌಲ್ಯದ ವಿದ್ಯುತ್‌ ಖರೀದಿ ಹಗರಣ ನಡೆದಿರುವ ಬಗ್ಗೆ
ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪ್ರತಿಸಮರಕ್ಕೆ ಸರ್ಕಾರ ಸಿದ್ಧತೆ ನಡೆಸುತ್ತಿದೆ.

Advertisement

ವಿದ್ಯುತ್‌ ಖರೀದಿ ಹಗರಣದ ತನಿಖೆಗೆ ರಚಿಸಲಾಗಿದ್ದ ಸದನ ಸಮಿತಿ ಈ ಮಾಸಾಂತ್ಯಕ್ಕೆ ತನ್ನ ವರದಿ ಸಲ್ಲಿಸಲಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಶೋಭಾ ಕರಂದ್ಲಾಜೆ 2010ರಲ್ಲಿ ಅವರ ಸಂಪುಟದಲ್ಲಿ ಇಂಧನ ಸಚಿವರಾಗಿದ್ದರು. ಈ ಅವಧಿಯಲ್ಲಿ ಆರ್ಥಿಕ ಇಲಾಖೆ ಆಕ್ಷೇಪಣೆ ಕಡೆಗಣಿಸಿ ಸುಮಾರು 28 ಸಾವಿರ ಕೋಟಿ ರೂ. ಮೊತ್ತದ ವಿದ್ಯುತ್‌ ಖರೀದಿ ಮಾಡಲಾಗಿದ್ದು, ಇದರಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ ಎಂದು ಖಾಸಗಿ ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಭೂಹಗರಣದ ಆರೋಪ ಮಾಡಿದ್ದ ಬಿಜೆಪಿ, ನಂತರದಲ್ಲಿ ಕಲ್ಲಿದ್ದಲು ಖರೀದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೋಟ್ಯಂತರ ರೂ. ಅವ್ಯವಹಾರ ನಡೆಸಿದೆ ಎಂದು ದೂರಿ ದಾಖಲೆಗಳನ್ನು ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ ವಿದ್ಯುತ್‌ ಖರೀದಿ ಅಕ್ರಮ ಮುಂದಿಟ್ಟುಕೊಂಡು ಬಿಜೆಪಿಗೆ ತಿರುಗೇಟು ನೀಡಲು ಸರ್ಕಾರ ಮುಂದಾಗಿರುವುದಾಗಿ
ತಿಳಿದುಬಂದಿದೆ.

ಏನಿದು ಆರೋಪ?: 2010ರಲ್ಲಿ ಶೋಭಾ ಕರಂದ್ಲಾಜೆ ಇಂಧನ ಸಚಿವರಾಗಿದ್ದ ವೇಳೆ ವಿದ್ಯುತ್‌ ಅಭಾವ ಎದುರಾಗಿತ್ತು. ಈ ಸಂದರ್ಭದಲ್ಲಿ ಪ್ರತಿ ಯೂನಿಟ್‌ಗೆ 3.8 ರೂ.ನಂತೆ ಖಾಸಗಿಯವರಿಂದ ವಿದ್ಯುತ್‌ ಖರೀದಿಸಲು 25 ವರ್ಷ ಅವಧಿಗೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಅಧಿಕಾರಿಗಳು ಪ್ರಸ್ತಾಪಿಸಿದ್ದರು. ಆದರೆ, ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸುದೀರ್ಘ‌ ಅವಧಿಯ ವಿದ್ಯುತ್‌ ಖರೀದಿ ಒಪ್ಪಂದ ಬೇಡ. ಅದರ ಬದಲಾಗಿ ಪ್ರತಿ ವರ್ಷ ವಿದ್ಯುತ್‌ ಖರೀದಿಸಿ ಎಂದು ಸಚಿವೆ ಶೋಭಾ ಕರಂದ್ಲಾಜೆ ಸೂಚಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಯೂನಿಟ್‌ಗೆ 6.5 ರೂ.ನಂತೆ ಒಂದು ವರ್ಷದ ಅವಧಿಗೆ ವಿದ್ಯುತ್‌ ಖರೀದಿಸಲು ಒಪ್ಪಂದ ಮಾಡಿಕೊಳ್ಳಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ, ಇದಕ್ಕೆ ಆರ್ಥಿಕ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದರೂ ಸಚಿವರಾಗಿದ್ದ ಶೋಭಾ ಕರಂದ್ಲಾಜೆ, ವಾರ್ಷಿಕ ಒಪ್ಪಂದದಂತೆ 6.5 ರೂ.ನಂತೆ ವಿದ್ಯುತ್‌ ಖರೀದಿಸಲು ಒತ್ತಡ ಹೇರಿದ್ದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಹಣಕಾಸು ಇಲಾಖೆ ಜವಾಬ್ದಾರಿಯನ್ನೂ ಹೊಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಗಮನಕ್ಕೆ ಈ ವಿಚಾರ ತರಲಾಗಿತ್ತು. ಯಡಿಯೂರಪ್ಪ ಅವರೂ ಸಹ ಸಚಿವರ ಸೂಚನೆಯಂತೆ ವಿದ್ಯುತ್‌ ಖರೀದಿಸಲು ಸೂಚಿಸಿದ್ದರು. ಇದರಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ ಎಂಬುದು ಶೋಭಾ ಕರಂದ್ಲಾಜೆ ಮತ್ತು ಬಿಎಸ್‌ವೈ ಅವರ ವಿರುದ್ಧ ಆರೋಪ.  2004ರ ಬಳಿಕ ವಿದ್ಯುತ್‌ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ತನಿಖೆಗೆ 2014ರಲ್ಲಿ ಸದನ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಇದೀಗ ವರದಿಯನ್ನು ಬಹುತೇಕ ಪೂರ್ಣಗೊಳಿಸಿದ್ದು, ಅದರಲ್ಲಿ ಈ ಅಂಶಗಳನ್ನು
ಪ್ರಸ್ತಾಪಿಸಲಾಗಿದೆ. ಅ. 30ರಂದು ನಡೆಯುವ ಸದನ ಸಮಿತಿ ಸಭೆಯಲ್ಲಿ ಅಂತಿಮ ವರದಿ ಮಂಡಿಸಿ ಅದಕ್ಕೆ ಸದಸ್ಯರ ಒಪ್ಪಿಗೆ ಪಡೆದು ನವೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದ ವೇಳೆ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.

ವಿದ್ಯುತ್‌ ಖರೀದಿ ಒಪ್ಪಂದವನ್ನು ಅಧಿಕಾರಿಗಳೇ ಮಾಡುತ್ತಾರೆ. ಇದರಲ್ಲಿ ಸಚಿವರ ಪಾತ್ರ ಏನೂ ಇರುವುದಿಲ್ಲ. ನಾನು ಇಂಧನ ಸಚಿವೆಯಾಗಿದ್ದಾಗ ವಿದ್ಯುತ್‌ ಖರೀದಿಯಲ್ಲಿ ಸಾವಿರಾರು ಕೋಟಿ ರೂ. ಅಕ್ರಮ ನಡೆದಿದೆ ಎಂಬ ಆರೋಪ ರಾಜಕೀಯ ಪ್ರೇರಿತ. ನಿಯಮದಂತೆ ಹಗರಣದ ಮೊತ್ತ 5 ಕೋಟಿ ರೂ. ದಾಟಿದರೆ ಆ ಕುರಿತು ಸಿಬಿಐ ತನಿಖೆ ನಡೆಸಬೇಕು. ಹೀಗಾಗಿ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಲಿ. ಸತ್ಯ ಗೊತ್ತಾಗುತ್ತದೆ.
ಶೋಭಾ ಕರಂದ್ಲಾಜೆ, ಸಂಸದೆ.

Advertisement

Udayavani is now on Telegram. Click here to join our channel and stay updated with the latest news.

Next