ಗೋಕಾಕ: ಹೈದರಾಬಾದ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜತೆ ಮಾತುಕತೆ ನಡೆಸಿ, ಯಡಿಯೂರಪ್ಪ ಅವರನ್ನು ಸಿಎಂ ಮಾಡುವುದಾದರೆ ನಾವು ಕಾಂಗ್ರೆಸ್‌ಗೆ ರಾಜೀನಾಮೆ ಕೊಟ್ಟು ಬರುತ್ತೇವೆ ಎಂದಾಗ ಅಮಿತ್ ಶಾ ಅವರು, “ರಮೇಶ ಗೋ-ಅಹೆಡ್’ ಎಂದು ಅನುಮತಿ ನೀಡಿದ್ದರು. ಅಲ್ಲಿಂದ ಇಲ್ಲಿಯವರೆಗೆ ನಡೆದ ಕಷ್ಟದ ಹೋರಾಟದಲ್ಲಿ ಲಕ್ಷ್ಮೀದೇವಿಯ ಆಶೀರ್ವಾದದಿಂದ ನಮಗೆ ಜಯ ಸಿಕ್ಕಿದೆ ಎಂದು ರಮೇಶ ಜಾರಕಿಹೊಳಿ “ಆಪರೇಷನ್ ಕಮಲ’ದ ಗುಟ್ಟು ಬಿಚ್ಚಿಟ್ಟಿದ್ದಾರೆ.
ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಮೈತ್ರಿ ಸರ್ಕಾರ ಅಧಿ ಕಾರಕ್ಕೆ ಬರುವಾಗ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನ ಬಿಡದಿ ರೆಸ್ಟೊರೆಂಟ್‌ನಲ್ಲಿ ಇಟ್ಟಿದ್ದರು. ಅಲ್ಲಿ ನಾವು ಡಿ.ಕೆ.ಶಿವಕುಮಾರ ಅವರ ಕೈಗೊಂಬೆಯಂತೆ ಆಗಿದ್ದೆವು. ಆ ಸ್ಥಳದಲ್ಲಿಯೇ ನಾನು ಮತ್ತು ಆರ್.ಶಂಕರ್ ಕೂಡಿ, ಅಂದೇ ಈ ಸರ್ಕಾರ ಕೆಡವಲು ತಂತ್ರ ರೂಪಿಸಿದ್ದೆವು. ಮಾಜಿ ಸಿಎಂ ಸಿದ್ದರಾಮಯ್ಯನವರ ಗರ್ವ, ಸೊಕ್ಕಿನ ಮಾತು ಹಾಗೂ ಡಿ.ಕೆ.ಶಿವಕುಮಾರ ಅವರ ಭ್ರಷ್ಟಾಚಾರಗಳೇ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣವಾದವು ಎಂದು ಕಿಡಿ ಕಾರಿದರು.
ಸಿದ್ದು ಷಡ್ಯಂತ್ರ: ಸಾರ್ವತ್ರಿಕ ಚುನಾವಣೆ ಬಳಿಕ ಪ್ರಥಮ ಬಾರಿಗೆ ಬೆಂಗಳೂರಿಗೆ ಹೋಗಿದ್ದಾಗಲೇ ಬಿಡದಿಯಲ್ಲಿ ಮೈತ್ರಿ ಸರ್ಕಾರ ಬೀಳಿಸಲು ನಿರ್ಧರಿಸಲಾಗಿತ್ತು. ಆದರೆ, ಕಾರಣಾಂತರದಿಂದ ಅದು ಮುಂದಕ್ಕೆ ಹೋಗಿತ್ತು. ಸಿದ್ದರಾಮಯ್ಯ ಹಾಗೂ ಸತೀಶ ಜಾರಕಿಹೊಳಿ ನಡುವಿನ ವಿರಸದಿಂದ ನನಗೆ ಮಂತ್ರಿ ಪದವಿ ನೀಡಿ, ಮೂರು ತಿಂಗಳ ನಂತರ ನನ್ನನ್ನು ಮುಗಿಸಲು ನಿರ್ಧರಿಸಿದ್ದರು. ಆದರೆ, ಲಕ್ಷ್ಮೀದೇವಿ ಕೃಪೆಯಿಂದ ಅದು ಸಾಧ್ಯವಾಗಲಿಲ್ಲ. ಹಿಂದುಳಿದ ವರ್ಗದ ವ್ಯಕ್ತಿ ಮುಂದೆ ಬರಬಾರದೆಂದು ಸಿದ್ದರಾಮಯ್ಯ ಷಡ್ಯಂತ್ರ ಮಾಡಿದ್ದರು. ಸ್ವಾಭಿಮಾನವುಳ್ಳ ಯಾವ ವ್ಯಕ್ತಿಯೂ ಕಾಂಗ್ರೆಸ್‌ನಲ್ಲಿ ಇರಲು ಸಾಧ್ಯವಿಲ್ಲ.
ಬಿಜೆಪಿಯ ಅ ಧಿಕಾರ ದಾಹದಿಂದ ಸಮ್ಮಿಶ್ರ ಸರ್ಕಾರ ಬಿದ್ದಿಲ್ಲ. ಬದಲಾಗಿ ಪಕ್ಷದ ವರಿಷ್ಠರ ಸೊಕ್ಕಿನಿಂದ ಬಿದ್ದಿದೆ. ಇದಕ್ಕೆ ನಾನು ಕಾರಣನಲ್ಲ. ರಾಜಕಾರಣದಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಪಕ್ಷಾಂತರ ಅನಿವಾರ್ಯ. ಇದರಿಂದ ನಾವು ಅನಿವಾರ್ಯವಾಗಿ ಬೇರೆ ಪಕ್ಷ ಸೇರಬೇಕಾಯಿತು ಎಂದರು. ನಮ್ಮ ವಿರೋಧಿಗಳು ಹೋರಾಟಗಾರರಲ್ಲ, ಕುತಂತ್ರಿಗಳು. ಕಾಂಗ್ರೆಸ್‌ನಲ್ಲಿ ನಮ್ಮ ತೊಂದರೆಗಳನ್ನು ಮುಖಂಡರಿಗೆ ತಿಳಿಸಿದರೆ ಪಕ್ಷ ವಿರೋಧಿ ಚಟುವಟಿಕೆ, ಭಿನ್ನಮತ ಎಂದು ಹೇಳಿ ಸುಮ್ಮನೆ ಕೂಡಿಸಲಾಗುತ್ತಿತ್ತು. ಅವರ ಚಮಚಾಗಳಂತೆ ಕೆಲಸ ಮಾಡಿದರೆ ಪಕ್ಷ ನಿಷ್ಠೆ ಎಂಬ ಪರಿಸ್ಥಿತಿ ಕಾಂಗ್ರೆಸ್‌ನಲ್ಲಿದೆ ಎಂದರು.
ಡಿ.5ರವರೆಗೆ ಲಖನ್ ನನ್ನ ತಮ್ಮನಲ್ಲ, ಶತ್ರು: ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ರಮೇಶ್, “ಸಹೋದರ ಸತೀಶ ಜಾರಕಿಹೊಳಿ ಕುತಂತ್ರ ಮಾಡಿದರೆ, ಕಿರಿಯ ಸಹೋದರ ಲಖನ್ ನನ್ನ ಬೆನ್ನಿಗೆ ಚೂರಿ ಹಾಕಿದ್ದಾನೆ. ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಲಖನ್, ಇಂದಿನಿಂದ ನನ್ನ ಶತ್ರು. ನನ್ನ ವಿರೋಧಿ. ಡಿ.5ರವರೆಗೆ ಆತ ನನ್ನ ತಮ್ಮನಲ್ಲ. ಚುನಾವಣೆ ಮುಗಿದ ಬಳಿಕ ನಾವು ಮತ್ತೆ ಅಣ್ಣ-ತಮ್ಮ. ಲಖನ್‌ಗೆ ದೇವರು ಒಳ್ಳೆಯ ಬುದ್ಧಿ ಕೊಡಲಿ’ ಎಂದು ಕಿಡಿಕಾರಿದರು.
ಎಚ್.ವಿಶ್ವನಾಥ್ ನನ್ನ ಗುರು. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ನಮ್ಮ ಜೂನಿಯರ್. ಬ್ರಿಟಿಷರು ಕುತಂತ್ರ ಮಾಡಿದ ಹಾಗೆಯೇ ಕಾಂಗ್ರೆಸ್‌ನವರು ನಮ್ಮ ವಿರುದ್ಧ ಕುತಂತ್ರ ನಡೆಸಿದರು. ಕಳೆದ ಹದಿನೈದು ದಿನಗಳಿಂದ ಬಿಜೆಪಿಗೆ ಸೇರ್ಪಡೆ ಆಗುವ ಬಗ್ಗೆ ನಾನು ಬಾಯಿ ಬಿಟ್ಟಿರಲಿಲ್ಲ. ಕಾನೂನಿನ ಉರುಳಲ್ಲಿ ಸಿಕ್ಕಿ ಹಾಕಿಸಬೇಕೆಂದು ನಮ್ಮ ವಿರೋಧಿಗಳು ಪ್ರಯತ್ನ ಮಾಡಿದ್ದರು ಎಂದು ಆರೋಪಿಸಿದರು. ರಾಣಿಬೆನ್ನೂರಿನ ಆರ್.ಶಂಕರ್ ಅವರು, ಯಡಿಯೂರಪ್ಪನವರ ಮುಂದೆ ಎರಡು ರೀತಿ ಮಾತನಾಡಿದ್ದಾರೆ. ಶಂಕರ್ ಅವರನ್ನು ವಿಧಾನ ಪರಿಷತ್‌ಗೆ ಆಯ್ಕೆ ಮಾಡುವ ಜವಾಬ್ದಾರಿ ನನ್ನದು ಎಂದರು.
ಅಶೋಕ ಪೂಜಾರಿಗೆ ಬಹಿರಂಗ ಆಹ್ವಾನ: ತಮ್ಮ ರಾಜಕೀಯ ಪ್ರತಿಸ್ಪ ರ್ಧಿ, ಬಿಜೆಪಿಯ ಅಶೋಕ ಪೂಜಾರಿಗೆ ತಮ್ಮನ್ನು ಬೆಂಬಲಿಸುವಂತೆ ಅವರು ಬಹಿರಂಗವಾಗಿ ಕರೆ ನೀಡಿದರು. ಅಧಿಕೃತವಾಗಿ ಬಿಜೆಪಿ ಸೇರಿ ಆಗಿದೆ. ಪಕ್ಷದಲ್ಲಿ ಸ್ಥಾನಮಾನಗಳ ಬಗ್ಗೆ ಕುಳಿತು ಚರ್ಚೆ ಮಾಡೋಣ. ಬಹಿರಂಗ ವಾಗಿಯೇ ವಿಚಾರ ಮಾಡಿ ನಿರ್ಧಾರ ತೆಗೆದುಕೊಳ್ಳೋಣ. ನಿಮ್ಮೊಂದಿಗೆ ನಾನು ಮತ್ತು ಸಿಎಂ ಯಡಿಯೂರಪ್ಪ ಇದ್ದೇವೆ, ಎದೆಗುಂದದಿರಿ ಎಂದರು.
2 ಕ್ವಿಂಟಲ್ ಸೇಬಿನ ಹಾರ ಅರ್ಪಣೆ: ರಮೇಶ ಅವರು ಗೋಕಾಕಗೆ ಆಗಮಿಸಿದಾಗ ಅವರ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಕ್ರೇನ್ ಬಳಸಿ 2 ಕ್ವಿಂಟಲ್ ಸೇಬಿನ ಹಣ್ಣಿನ ಹಾರ ಹಾಕಿ ಸ್ವಾಗತಿಸಿದರು. ತೆರೆದ ವಾಹನದಲ್ಲಿ ಗೋಕಾಕ್ ನಗರದ ಪ್ರಮುಖ ಬೀದಿಗಳಲ್ಲಿ ಅವರ ಮೆರವಣಿಗೆ ಮಾಡಲಾಯಿತು. ಪುತ್ರ ಅಮರನಾಥ ಸಾಥ್ ನೀಡಿದರು. ಬಳಿಕ, ಅವರು, ಗೋಕಾಕದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.