ಧಾರವಾಡ: ಸರಕಾರಿ ನೌಕರರ ಹಿತ ಕಾಪಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೊಟ್ಟ ಮಾತಿನಂತೆ ರಾಜ್ಯದ ನೌಕರರಿಗೆ 7ನೇ ವೇತನ ಆಯೋಗದ ಸೌಲಭ್ಯ ನೀಡುವ ಮೂಲಕ ನೌಕರರಿಗೆ ಕಾಣಿಕೆ ಕೊಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ನಗರದಲ್ಲಿ ಸರ್ಕಾರಿ ನೌಕರರ ರಾಜ್ಯ ಪರಿಷತ್ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ನೌಕರರು ಜಾತಿ-ಮತಗಳನ್ನು ಮರೆತು ಜನರ ಸೇವೆ ಮಾಡಬೇಕು. ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿರುವ ನಾವು ರಾಜ್ಯದ ನೌಕರರ ಹಿತ ಕಾಯುತ್ತೇವೆ ಎಂದರು.
ಜಿಲ್ಲಾಧಿಕಾರಿ ಡಾ| ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿ, ವೇತನ ತಾರತಮ್ಯ ಬಗೆಹರಿಸಿಕೊಳ್ಳಲು ನೌಕರರ ಸಂಘಟನೆ ವೈಜ್ಞಾನಿಕ ವರದಿ ತಯಾರಿಸಬೇಕು ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಂಘದ ಅಧ್ಯಕ್ಷ ಬಿ.ಪಿ. ಮಂಜೇಗೌಡರ ಮಾತನಾಡಿ, ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ಆಯವ್ಯಯದಲ್ಲಿ ವೇತನ ಆಯೋಗ ಘೋಷಿಸಿದ್ದಾರೆ.
ಎರಡೂರು ದಿನಗಳಲ್ಲಿ ಆಯೋಗದ ಅಧ್ಯಕ್ಷರ ಆದೇಶ ಹೊರಬೀಳಲಿದ್ದು, ನೌಕರರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು. ಸರ್ಕಾರಿ ನೌಕರರ ಸಂಘದ ಪ್ರಯತ್ನದಿಂದಲೇ ವೇತನ ಆಯೋಗ ರಚನೆಯಾಗಿದ್ದು, ಶೇ.30 ಮಧ್ಯಂತರ ಪರಿಹಾರ ನೀಡಬೇಕೆಂಬುದು ಒತ್ತಾಯವಾಗಿದೆ.
ನೌಕರರಿಗೆ ಮಧ್ಯಂತರ ಪರಿಹಾರದ ಜೊತೆಗೆ ವೇತನ ಆಯೋಗದಲ್ಲಿ ಆಗಿರುವ ಎಲ್ಲಾ ನ್ಯೂನತೆಗಳನ್ನು ಈ ವೇತನ ಆಯೋಗದಲ್ಲಿ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು. ಧಾರವಾಡ ಘಟಕಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ,
ಬೇರೆ ರಾಜ್ಯಗಳ ವೇತನ ಭತ್ಯೆ ಹಾಗೂ ಕರ್ನಾಟಕ ರಾಜ್ಯಕ್ಕೆ ಇರುವ ವ್ಯತ್ಯಾಸಗಳ ಬಗ್ಗೆ ವಿವರಿಸಿ ರಾಜ್ಯದ ನೌಕರರ ಪರವಾಗಿ ವೈಜ್ಞಾನಿಕ ವರದಿ ಸಿದ್ಧಪಡಿಸಲು ತಯಾರಿ ನಡೆಸಿದ್ದೇವೆ ಎಂದರು. ಮಾಲತೇಶ ಅಣ್ಣಿಗೇರಿ ಪ್ರಾಸ್ತಾವಿಕ ಮಾತನಾಡಿದರು. ರಾಜ್ಯ ಕೋಶಾಧ್ಯಕ್ಷ ಯೋಗಾನಂದ, ಎಚ್.ಕೆ. ರಾಮು, ಎಸ್.ಕೆ. ರಾಮದುರ್ಗ, ರಾಜ್ಯ ಪರಿಷತ್ ಸದಸ್ಯ ಎಚ್.ಎಫ್. ಸಿದ್ಧನಗೌಡರ, ಚಂದ್ರಶೇಖರ ನುಗ್ಲಿ ಇದ್ದರು.