Advertisement

ಸುರಂಗ ಮಾರ್ಗ ಅನುಷ್ಠಾನಕ್ಕೆ ಸರ್ಕಾರ ಬದ್ಧ

12:28 PM May 06, 2017 | Team Udayavani |

ಬೆಂಗಳೂರು: ನಗರದ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಸುರಂಗ ಮಾರ್ಗಗಳ ಅಗತ್ಯವಿದ್ದು, ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ. ಶುಕ್ರವಾರ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಸಚಿವ ಜಾರ್ಜ್‌ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

“ನಗರದಲ್ಲಿ ನಿತ್ಯ 65 ಲಕ್ಷ ವಾಹನಗಳು ಸಂಚಾರಿಸುತ್ತಿರುವುದರಿಂದ ವಾಹನ ದಟ್ಟಣೆ ಅಧಿಕವಾಗಿದೆ. ಹೀಗಾಗಿ ನಗರಕ್ಕೆ ಸುರಂಗ ಮಾರ್ಗಗಳ ಅಗತ್ಯವಿದೆ. ಸುರಂಗ ರಸ್ತೆ ನಿರ್ಮಾಣ ಯೋಜನೆ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ. ನಗರದ ಜನತೆಯ ಅಭಿಪ್ರಾಯವನ್ನು ಪಡೆದು ಯೋಜನೆಯನ್ನು ಪ್ರಾರಂಭಿಸಲಾಗುವುದು,’ ಎಂದು ಹೇಳಿದರು. 

ಈ ನಡುವೆ ಯೋಜನೆಗೆ ವ್ಯಕ್ತವಾಗಿರುವ ಕೆಲ ವಿರೋಧಗಳ ಕುರಿತು ಮಾತನಾಡಿದ ಅವರು, “ನಗರದಲ್ಲಿ ಕೈಗೆತ್ತಿಕೊಳ್ಳುವ ಎಲ್ಲ ಕಾಮಗಾರಿಗಳನ್ನು ವಿರೋಧಿಸುವವರು ಅವರದೇ ಸರ್ಕಾರ ಮಾಡಿ,  ಅವರಿಗಿಷ್ಟ ಬಂದ ಹಾಗೆ ರಸ್ತೆಗಳನ್ನು ನಿರ್ಮಿಸಿಕೊಳ್ಳಲಿ,’ ಎಂದು ಟೀಕಾಕಾರರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು. 

ಹೆಣ್ಣೂರು ಬಂಡೆ ಬಳಿ ಟ್ರೀಪಾರ್ಕ್‌, ಕ್ರೀಡಾಂಗಣ: ಹೆಣ್ಣೂರು ಬಂಡೆ ಪ್ರದೇಶದಲ್ಲಿ ಟ್ರೀಪಾರ್ಕ್‌, ಕ್ರೀಡಾಂಗಣ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಕಾಮಗಾರಿ ಕೈಗೆತ್ತಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಸುಮಾರು 16 ಎಕರೆ ಪ್ರದೇಶದಲ್ಲಿ ಟ್ರೀಪಾರ್ಕ್‌, ಕ್ರೀಡಾಂಗಣ, ಶಾಲೆ, ಈಜು ಕೊಳ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,’ ಎಂದು ಹೇಳಿದರು. 

“ಹೆಣ್ಣೂರು ಬಂಡೆ ಪ್ರದೇಶದ 16 ಎಕರೆ ಪ್ರದೇಶ ಸದ್ಯ ನಗರ ಜಿಲ್ಲಾಡಳಿತದ ಸುಪರ್ದಿಯಲ್ಲಿದ್ದು,  ಅದನ್ನು ಬಿಡಿಎಗೆ ಹಸ್ತಾಂತರ ಮಾಡಲಾಗುತ್ತಿದೆ. ಅದರ ಹಿನ್ನೆಲೆಯಲ್ಲಿ ಬಂಡೆ ಪ್ರದೇಶವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ,’ ಎಂದು ಅವರು ತಿಳಿಸಿದರು. 

Advertisement

“ಹೆಣ್ಣೂರು ಮೇಲ್ಸೇತುವೆ ಕಾಮಗಾರಿಯ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಪರಿಹಾರ ನೀಡುವುದು ವಿಳಂಬವಾಗಿರುವುದರಿಂದ ಕಾಮಗಾರಿ ಪೂರ್ಣಗೊಳ್ಳುವುದು ವಿಳಂಬವಾಗಿದೆ. ಇದರೊಂದಿಗೆ ಈ ಭಾಗದಲ್ಲಿನ ಆಂಜನೇಯ ಸ್ವಾಮಿ ದೇವಸ್ಥಾನದ ಗರ್ಭಗುಡಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸಬೇಕಿದ್ದು, ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಆದೇಶ ಹೊರಡಿಸಲಾಗಿದೆ,’ ಎಂದು ಮಾಹಿತಿ ನೀಡಿದರು.

ಸಸಿ ಹಂಚಲು ಪಾಲಿಕೆ ಆ್ಯಪ್‌ 
ನಗರವನ್ನು ಹಸಿರಾಗಿಸಲು ಪಾಲಿಕೆಯ ವ್ಯಾಪ್ತಿಯಲ್ಲಿ ವನ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಅದರ ಹಿನ್ನೆಲೆಯಲ್ಲಿ ಬಿಬಿಎಂಪಿ ವತಿಯಿಂದ 10 ಲಕ್ಷ ಸಸಿಗಳನ್ನು ನೀಡಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಪಾಲಿಕೆಯಿಂದ ನೂತನ ಆ್ಯಪ್‌ ಅಭಿವೃದ್ಧಿಪಡಿಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ತಿಳಿಸಿದರು. 

ಬೆಂಗಳೂರಿನ ಬಗ್ಗೆ  ಸಿಎಂಗೆ ವಿಶೇಷ ಕಾಳಜಿ 
ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ವಿಶೇಷ ಕಾಳಜಿ ಹೊಂದಿರುವ ಮುಖ್ಯಮಂತ್ರಿಗಳು ನಗರಕ್ಕಾಗಿ ಬಜೆಟ್‌ ನಲ್ಲಿ ಹೆಚ್ಚಿನ ಅನುದಾನ ನೀಡಿದ್ದಾರೆ. ಜತೆಗೆ, ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ನಮ್ಮ ಮೆಟ್ರೋ ಮೊದಲ ಹಂತದ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ರೈಲು ಸಂಚಾರ ಆರಂಭಿಸಿದೆ. ರೈಲ್ವೆ ಮಂಡಳಿಯಿಂದ ಅನುಮತಿ ದೊರಕಿದ ಕೂಡಲೇ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಲಾಗುವುದು ಎಂದು ಸಚಿವ ಜಾರ್ಜ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next