Advertisement

ಅನುಭವ ಮಂಟಪ ನಿರ್ಮಾಣಕ್ಕೆ ಸರ್ಕಾರ ಬದ್ಧ

10:51 AM Feb 10, 2018 | Team Udayavani |

ಬೀದರ: ಬಸವಕಲ್ಯಾಣದಲ್ಲಿ ಭವ್ಯ ಅನುಭವ ಮಂಟಪ ನಿರ್ಮಾಣಕ್ಕಾಗಿ ಗೋ.ರು. ಚನ್ನಬಸಪ್ಪ ಅವರ ಅಧ್ಯಕ್ಷತೆಯ ಸಮಿತಿಯು ವರದಿ ತಯಾರಿಸಿದ್ದು, ಶೀಘ್ರದಲ್ಲಿಯೇ ಈ ವರದಿಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು. ಅಂತೆಯೇ ಭವ್ಯ ಅನುಭವ ಮಂಟಪ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.

Advertisement

ಬಸವಕಲ್ಯಾಣದ ತೇರು ಮೈದಾನದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಬಸವ ಉತ್ಸವ- 2018 ಉದ್ಘಾಟನೆ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಕನಸು ನನಸಾಗುವ ದಿನಗಳು ಸಮೀಪಿಸುತ್ತಿದ್ದು, ಬರುವ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು 650 ಕೋಟಿ ರೂ. ಅನುದಾನ ಘೋಷಣೆ ಮಾಡಲಿದ್ದಾರೆ ಎಂದು ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.

ಅದರಂತೆ ಅನುಭವ ಮಂಟಪ ತಲೆ ಎತ್ತಲಿದೆ. ವಿಶಿಷ್ಟ ವಿನ್ಯಾಸ, ಶರಣರ ಪ್ರತಿರೂಪ ಬಿಂಬಿಸುವದರ ಜತೆಗೆ ಮಂಟಪವನ್ನು ಅಂತಾರಾಷ್ಟ್ರೀಯ ಮಟ್ಟದ ಅಧ್ಯಯನ ಕೇಂದ್ರವಾಗಿ ರೂಪಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದ ಅವರು, ಬಸವಕಲ್ಯಾಣವನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವಾಗಿಸಲು ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಹಲವು ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಇಲ್ಲಿನ ಸ್ಮಾರಕಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈವರೆಗೆ 13 ಸ್ಮಾರಕಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.
 
ಬಸವಕಲ್ಯಾಣ ಬಸವಣ್ಣನವರ ಕಾರ್ಯವಾಗಿದ್ದು, ಆದರ್ಶ ಮತ್ತು ಸಾಮಾಜಿಕ ನ್ಯಾಯ ನೀಡಿದ ಪವಿತ್ರ ಕ್ಷೇತ್ರ. ವಿಶ್ವದಲ್ಲಿ ಹೆಣ್ಣು, ಹೊನ್ನು, ಅಧಿಕಾರಕ್ಕಾಗಿ ಕ್ರಾಂತಿ ನಡೆದರೆ ಮಾನವ ಕುಲದ ಉದ್ಧಾರ, ಲೋಕ ಕಲ್ಯಾಣಕ್ಕಾಗಿ ನಡೆದದ್ದು ಕೇವಲ ವಚನ ಚಳವಳಿ ಮಾತ್ರ. ಅದರ ರೂವಾರಿಗಳಾದ ಬಸವಣ್ಣನವರ ಚಿಂತನೆಗಳನ್ನು ಪರಿಚಯಿಸುವ ಉದ್ದೇಶದಿಂದ ಈ ನೆಲದಲ್ಲಿ ಸರ್ಕಾರದಿಂದ ಬಸವ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಇಂದಿನ 21ನೇ ಶತಮಾನದಲ್ಲೂ ಶೋಷಣೆ, ಅಸಮಾನತೆ ಜೀವಂತವಾಗಿದೆ. ಲೈಂಗಿಕ ಕಿರುಕುಳ, ದೌರ್ಜನ್ಯ, ಅನಿಷ್ಠ
ಪದ್ಧತಿಗಳು ಹೆಚ್ಚುತ್ತಿವೆ. ಹನ್ನೇರಡನೇ ಶತಮಾನದ ಹೋರಾಟವನ್ನು ಇಂದಿಗೂ ಮುಂದುವರಿಸಿಕೊಂಡು ಹೋಗಬೇಕಾಗಿದೆ ಎಂದರು

ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಫೆ.13ರಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂ ಧಿ ಭೇಟಿ ನೀಡುತ್ತಿರುವುದು ಸಂತಸ, ಹೆಮ್ಮೆಯ ಸಂಗತಿ. ರಾಹುಲ್‌ ಕಲ್ಯಾಣಕ್ಕೆ ಭೇಟಿ ನೀಡುವುದು ಬಹಿರಂಗವಾಗುತ್ತಿದ್ದಂತೆ ಸಂಸತ್‌ನಲ್ಲಿ ಬಸವಣ್ಣನವರ ಚರ್ಚೆ ಆಗುತ್ತಿದೆ ಎಂದು ಸಚಿವ ಖಂಡ್ರೆ ಹೇಳಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next