Advertisement

Valmiki Corporation Scam ಆರೋಪ ಪಟ್ಟಿ: ನಾಗೇಂದ್ರ, ದದ್ದಲ್‌ ಹೆಸರೇ ಇಲ್ಲ !

01:25 AM Aug 06, 2024 | Team Udayavani |

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂ. ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ ವಿಶೇಷತನಿಖಾ ತಂಡ (ಎಸ್‌ಐಟಿ)ವು ಮಾಜಿ ಸಚಿವ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ, ಶಾಸಕ ಬಸವನ ಗೌಡ ದದ್ದಲ್‌ ಹೊರತು ಪಡಿಸಿ ಇತರ 12 ಮಂದಿ ಆರೋಪಿಗಳ ವಿರುದ್ಧ 1ನೇ ಎಸಿಎಂಎಂ ಕೋರ್ಟ್‌ಗೆ 7 ಸಂಪುಟ, 3,072 ಪುಟಗಳ ಪ್ರಾಥಮಿಕ ಆರೋಪ ಪಟ್ಟಿ ಸಲ್ಲಿಸಿದೆ. ಅಲ್ಲದೆ ಈ ಪ್ರಕರಣದಲ್ಲಿ 67 ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ.

Advertisement

ನಿಗಮದ ವ್ಯವಸ್ಥಾಪಕ ನಿರ್ದೇಶಕನಾಗಿದ್ದ ಜೆ.ಜಿ. ಪದ್ಮನಾಭ್‌, ಲೆಕ್ಕ ಅಧೀಕ್ಷಕರಾಗಿದ್ದ ಪರಶುರಾಮ ದುರ್ಗಣ್ಣನವರ್‌, ಹೈದರಾಬಾದ್‌ನ ಫ‌ಸ್ಟ್‌ ಫೈನಾನ್ಸ್‌ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ, ನೆಕ್ಕುಂಟೆ ನಾಗರಾಜ್‌, ನಾಗೇಶ್ವರ್‌ ರಾವ್‌, ಹೈದರಾಬಾದ್‌ನ ಎಂ. ಚಂದ್ರಶೇಖರ್‌, ಗಾದಿರಾಜು ಸತ್ಯನಾರಾಯಣ ವರ್ಮಾ, ಉಡುಪಿಯ ಜಿ.ಕೆ. ಜಗದೀಶ್‌, ತೇಜ ತಮ್ಮಯ್ಯ, ಆಂಧ್ರಪ್ರದೇಶದ ಗಚ್ಚಿಬೌಲಿ ಪಿಟ್ಟಿಲ ಶ್ರೀನಿವಾಸ, ಹೈದರಾಬಾದ್‌ನ ಸಾಯಿತೇಜ ಹಾಗೂ ಕಾಕಿ ಶ್ರೀನಿವಾಸ್‌ ರಾವ್‌ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ಬಂಧಿತರಿಂದ 16.83 ಕೋಟಿ ರೂ. ನಗದು ಜಪ್ತಿ ಮಾಡಿದ್ದು, 11.70 ಕೋಟಿ ರೂ. ಮೌಲ್ಯದ 16 ಕೆ.ಜಿ. ಚಿನ್ನಾಭರಣ, 4.15 ಕೋಟಿ ರೂ. ಮೌಲ್ಯದ ಲ್ಯಾಂಬೋರ್ಗಿನಿ ಮತ್ತು ಮರ್ಸಿಡಿಸ್‌ ಬೆಂಜ್‌ ಕಾರುಗಳು, ವಿವಿಧ ಬ್ಯಾಂಕ್‌ ಖಾತೆಗಳಲ್ಲಿದ್ದ 3.19 ಕೋಟಿ ರೂ. ಮತ್ತು ಸ್ಥಗಿತಗೊಳಿಸಲಾಗಿರುವ ಖಾತೆಗಳಲ್ಲಿರುವ 13.72 ಕೋಟಿ ರೂ. ಹಣ ಜಪ್ತಿ ಸೇರಿ ಒಟ್ಟು 49.96 ಕೋಟಿ ರೂ. ಮೌಲ್ಯದ ನಗದು, ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಎಸ್‌ಐಟಿ ತಿಳಿಸಿದೆ.

ನಾಗೇಂದ್ರ, ದದ್ದಲ್‌ ಹೆಸರಿಲ್ಲ
ಪ್ರಾಥಮಿಕ ಆರೋಪ ಪಟ್ಟಿಯಲ್ಲಿ ಹಗರಣದ ರೂವಾರಿಗಳು ಎನ್ನಲಾದ, ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ಬಸವನಗೌಡ ದದ್ದಲ್‌ ಅವರ ಹೆಸರನ್ನು ಉಲ್ಲೇಖೀಸಿಲ್ಲ. ಏಕೆಂದರೆ ಈಗಾಗಲೇ ಈ ಇಬ್ಬರು 2 ಬಾರಿ ಎಸ್‌ಐಟಿ ವಿಚಾರಣೆಗೆ ಹಾಜರಾಗಿ, ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಈ ವೇಳೆ ನಿಗಮದ ಅಧಿಕಾರಿಗಳು ತಮ್ಮ ಗಮನಕ್ಕೆ ಬಾರದಂತೆ ಅಕ್ರಮ ಎಸಗಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಹೀಗಾಗಿ ಈ ಇಬ್ಬರನ್ನು ಆರೋಪಿಗಳನ್ನಾಗಿ ಪರಿಗಣಿಸಬೇಕೋ ಅಥವಾ ಸಾಕ್ಷಿಗಳಾಗಿ ಪರಿಗಣಿಸಬೇಕೋ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ತನಿಖೆ ಪೂರ್ಣಗೊಂಡ ಬಳಿಕ ಅಂತಿಮ ಆರೋಪಪಟ್ಟಿಯಲ್ಲಿ ಈ ಇಬ್ಬರು ಹೆಸರು ಉಲ್ಲೇಖೀ
ಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾರಾಗೃಹ ಅಧಿಕಾರಿಗಳಿಗೆ ನೋಟಿಸ್‌
ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸತ್ಯನಾರಾಯಣ ವರ್ಮಾನನ್ನು ಇ.ಡಿ. ಅಧಿಕಾರಿಗಳು ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಬಾಡಿ ವಾರಂಟ್‌ ಪಡೆದುಕೊಂಡಿದ್ದರು. ಆದರೆ ಜೈಲಿನ ಅಧಿಕಾರಿಗಳು ಆರೋಪಿಯನ್ನು ಎಸ್‌ಐಟಿ ವಶಕ್ಕೆ ನೀಡಿದ್ದರು. ಈ ಸಂಬಂಧ ಉತ್ತರ ನೀಡುವಂತೆ ಜೈಲಿನ ಮುಖ್ಯಸ್ಥರು ಹಾಗೂ ಕಾರಾಗೃಹ ಇಲಾಖೆ ಮುಖ್ಯಸ್ಥರಿಗೆ ಕೋರ್ಟ್‌ ನೋಟಿಸ್‌ ಹೊರಡಿಸಿದೆ ಎಂದು ತಿಳಿದು ಬಂದಿದೆ.

Advertisement

ನಾಗೇಂದ್ರ ನ್ಯಾಯಾಂಗ ಬಂಧನ ವಿಸ್ತರಣೆ
ವಾಲ್ಮೀಕಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ.ಯಿಂದ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ನಾಗೇಂದ್ರ ಅವರ ನ್ಯಾಯಾಂಗ ಬಂಧನ ಅವಧಿಯನ್ನು ವಿಶೇಷ ನ್ಯಾಯಾಲಯ ಮತ್ತೆ 14 ದಿನಗಳ ಕಾಲ ಮುಂದುವರಿಸಿ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next