Advertisement

ನಶಿಸುತ್ತಿರುವ ಜನಪದ ಕಲೆಗಳ ಉಳಿವಿಗೆ ಸರಕಾರ ಪಣ

12:56 AM Jan 04, 2023 | Team Udayavani |

ಕಾರ್ಕಳ: ರಾಜ್ಯದ ಅಪರೂಪದ, ಬೆಳಕಿಗೆ ಬಾರದಿರುವ, ನಶಿಸುತ್ತಿರುವ ಕಲೆಗಳಿಗೆ ಪ್ರೋತ್ಸಾಹ ಕೊಡುವ ಹಾಗೂ ಕಲೆಗಳಿಗೆ ಆಧುನಿಕ ಸ್ಪರ್ಶ ನೀಡಿ ಯುವ ಸಮೂಹವನ್ನು ಆಕರ್ಷಿಸುವ ನಿಟ್ಟಿನಲ್ಲಿ 2 ತಿಂಗಳ ಕಾಲ “ಕನ್ನಡ ಸಂಸ್ಕೃತಿ-ಮೂಲ ಸಂಸ್ಕೃತಿ’ ಹೆಸರಿನ ವಿನೂತನ ಅಭಿಯಾನವನ್ನು ರಾಜ್ಯವ್ಯಾಪಿ ನಡೆಸಲು ಸರಕಾರ ನಿರ್ಧರಿಸಿದೆ.

Advertisement

ಅಭಿಯಾನವನ್ನು ಆರಂಭಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆ ಹೋಗಿದೆ. ಸರಕಾರದಿಂದ ಒಪ್ಪಿಗೆ ದೊರೆತ ಕೂಡಲೇ ಚಾಲನೆ ಸಿಗಲಿದೆ. ಜನವರಿಯಲ್ಲೇ ಆರಂಭಿಸುವ ಚಿಂತನೆ ಇದೆ.

ಯಾವೆಲ್ಲ ಕಲಾಪ್ರಕಾರಗಳಿವೆ
ಲಾವಣಿ ಹಾಡು, ಗರತಿ ಹಾಡು, ಕೋಲಾಟದ ಪದಗಳು, ನಲ್ಲಹರಕೆಗಳು, ದೇವರಗುಡ್ಡದ ಪದಗಳು, ಯಕ್ಷಗಾನ ಬಯಲಾಟ, ತೊಗಲು ಗೊಂಬೆಯಾಟ, ಹುಲಿವೇಷ, ಸುಗ್ಗಿಯ ಕುಣಿತ, ತಾಳವಾದ್ಯ, ಬೀಸು ಕಂಸಾಳೆ, ಕಮಸಾಲಿ, ಉಮ್ಮತಲ್‌, ಪೂಜಾ ಕುಣಿತ, ಕೃಷ್ಣ ಪಾರಿಜಾತ, ಜಗ್ಗಲಿಕೆ ಕುಣಿತ, ಚೌಡಿಕೆ ಮೇಳ, ಸೋಮನ ಕುಣಿತ, ಗೊರವರ ಕುಣಿತ, ವೀರಗಾಸೆ, ಯಕ್ಷಗಾನ, ಭೂತಾರಾಧನೆ, ನಾಗಮಂಡಲ ಸೇರಿದಂತೆ 60ಕ್ಕೂ ಅಧಿಕ ಕಲಾ ಪ್ರಕಾರಗಳು ಕಾಣಬರುತ್ತಿದ್ದು, ಇನ್ನು ಅನೇಕ ಕಲಾಪ್ರಕಾರಗಳು ಸಮಾಜದ ಮುಖ್ಯವಾಹಿನಿಗೆ, ಬಾರದೆ ತೆರೆಮರೆಯಲ್ಲೆ ಇವೆ.

ಅಭಿಯಾನ ಹೇಗೆ?
ಅಭಿಯಾನದ ಯಶಸ್ಸಿಗೆ ಜಿಲ್ಲೆ, ವಿಭಾಗ ಮಟ್ಟದಲ್ಲಿ ಅಧಿಕಾರಿಗಳು, ವಿದ್ವಾಂಸರು, ಅನುಭವಿ ಕಲಾವಿದರನ್ನೊಳಗೊಂಡ ಸಮಿತಿ ರಚಿಸಲಾಗುತ್ತದೆ. ಆರಂಭದಲ್ಲಿ ಕಲಾ ಪ್ರಕಾರಗಳನ್ನು ಗುರುತಿಸಲಾಗುತ್ತದೆ. ಶಿಬಿರ, ತರಬೇತಿ ನೀಡಿ, ಪ್ರದರ್ಶನಗೊಳಿಸುವುದು. ಜಿಲ್ಲಾ ಮಟ್ಟ, ವಿಭಾಗ ಮಟ್ಟದಲ್ಲಿ ನಡೆಸಿ ರಾಜ್ಯಮಟ್ಟಕ್ಕೆ ವಿಸ್ತರಿಸಲಾಗುತ್ತದೆ.

ಸರಕಾರದ ಬಳಿ ಕಲೆಗಳ ಸಮಗ್ರ ದಾಖಲೆ ಇಲ್ಲ
ಊರು ಕೇರಿ, ಹಾದಿ ಬೀದಿ ಬದಲಾದಂತೆ ಒಂದು ಕಡೆಯಿಂದ ಇನ್ನೊಂದು ಕಡೆಗಿನ ಜನಜೀವನದಲ್ಲಿ ಭಾಷೆ. ಪರಂಪರೆ, ಕಲೆ, ಸಂಸ್ಕೃತಿಯಲ್ಲಿ ಸಾಕಷ್ಟು ಭಿನ್ನತೆ ಕಂಡುಬರುತ್ತದೆ. ಇಂದಿನ ಆಧುನಿಕ ಯುಗ, ಯಂತ್ರ, ತಂತ್ರಜ್ಞಾನ, ವಿಜ್ಞಾನ ಹೀಗೆ ಎಲ್ಲ ವಿಷಯಗಳಲ್ಲಿ ಪ್ರಗತಿ ಸಾಧಿಸುತ್ತಲೇ ಮೂಲ ಸಂಸ್ಕೃತಿಯನ್ನು ಅಳಿವಿನಂಚಿಗೆ ತಳ್ಳಿ ಮರೆತು ಬಿಡುತ್ತಿದ್ದೇವೆ ಎನ್ನುವ ದೂರುಗಳು ಜನಪದ ಕಲಾವಿದರಲ್ಲಿದೆ. ನಾಡಿನ ನೆಲ -ಜಲದಲ್ಲಿ ಈ ಜಾನಪದದ ಗ್ರಂಥವಿದ್ದು, ಈ ಬಗ್ಗೆ ಅಧ್ಯಯನ ಮಾದರಿಯಲ್ಲಾಗಲಿ, ಸಮಗ್ರ ಮಾಹಿತಿಯಲ್ಲಾಗಲಿ ಸರಕಾರದ ಬಳಿ ಇಲ್ಲ.

Advertisement

ನಶಿಸುತ್ತಿರುವ ಕಲೆಗಳನ್ನು ಪುನರುಜ್ಜೀವನಗೊಳಿಸುವ ಯತ್ನವಿದು. ಆಚಾರ-ಪದ್ಧತಿಗಳು ಪ್ರದೇಶದಿಂದ ಪ್ರದೇಶಕ್ಕೆ ವ್ಯತ್ಯಾಸವಾಗುತ್ತವೆ. ಹೊಸ ಯುವಕರು ಅನುಸರಿಸುತ್ತಿಲ್ಲ. ಅವರಿಗೆ ಗೊತ್ತಿಲ್ಲ. ಇವೆಲ್ಲವನ್ನೂ ತಿಳಿಸಲು ಅಭಿಯಾನ. ಪ್ರದೇಶವಾರು ಆಧುನಿಕತೆಗೆ ಸ್ಪರ್ಶ ಕೊಟ್ಟು ನಡೆಸಲು ತೀರ್ಮಾನಿಸಲಾಗಿದೆ.
– ವಿ. ಸುನಿಲ್‌ ಕುಮಾರ್‌, ಇಂಧನ, ಕನ್ನಡ, ಸಂಸ್ಕೃತಿ ಸಚಿವ

ನಿರ್ದಿಷ್ಟವಾಗಿ ಇಂತಿಷ್ಟೇ ಪ್ರಕಾರಗಳು ಇವೆ ಎಂದು ಹೇಳಲಾಗದು. ಸುಮಾರು 50ರಿಂದ 60 ಕಲೆಗಳು ಎಂದು ಗುರುತಿಸಲಾಗಿದೆ. ಜಿಲ್ಲೆಗಳಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಪ್ರಸ್ತಾವಕ್ಕೆ ಅಂಕಿತ ಬಿದ್ದ ತತ್‌ಕ್ಷಣ ಚಾಲನೆ ನೀಡಲಿದ್ದೇವೆ. ದಿನ ಅಂತಿಮವಾಗಿಲ್ಲ.
– ಬಲವಂತ ಪಾಟೀಲ್‌, ಜಂಟಿ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು

– ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next