Advertisement

ಸರ್ಕಾರ ವೈದ್ಯರ ತಿಕ್ಕಾಟ-ಪೀಕಲಾಟ

12:05 PM Nov 17, 2017 | |

ಧಾರವಾಡ: ಕರ್ನಾಟಕ ರಾಜ್ಯ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯಿದೆ ತಿದ್ದುಪಡಿ ಕುರಿತಂತೆ ಸರಕಾರ ಹಾಗೂ ವೈದ್ಯರ ಆರಂಭಗೊಂಡಿರುವ ತಿಕ್ಕಾಟದಿಂದ ಖಾಸಗಿ ಆಸ್ಪತ್ರೆಗಳು ಗುರುವಾರ ಕೂಡ ಸೇವೆ ಸ್ಥಗಿತಗೊಳಿಸಿವೆ. ಇದು ಶುಕ್ರವಾರವೂ ಮುಂದುವರಿಯುವ ಲಕ್ಷಣಗಳಿವೆ. 

Advertisement

ಭಾರತೀಯ ವೈದ್ಯಕೀಯ ಸಂಘದ ಕರೆಯ ಮೇರೆಗೆ ಜಿಲ್ಲಾ ಘಟಕದ ನಿರ್ಧಾರದಂತೆ ಮುಷ್ಕರಕ್ಕೆ ಖಾಸಗಿ ಆಸ್ಪತ್ರೆಗಳು ಮುಂದಾಗಿದ್ದರಿಂದ ನಗರದಲ್ಲಿನ ಎಲ್ಲ ಖಾಸಗಿ ಲ್ಯಾಬ್‌ ಹಾಗೂ ಡಯಾಗ್ನೊàಸ್ಟಿಕ್‌ ಕೇಂದ್ರಗಳು ಬಂದ್‌ ಆಗಿದ್ದವು. ಗ್ರಾಮೀಣ ಪ್ರದೇಶದ ಆಸ್ಪತ್ರೆಗಳು ತಮ್ಮ ಸೇವೆ ಸ್ಥಗಿತಗೊಳಿಸಿದ್ದವು. ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕಾಸ್ಪತ್ರೆ, ನಗರ ಕೇಂದ್ರ ಹಾಗೂ ಜಿಲ್ಲಾಸ್ಪತ್ರೆ, ಕಿಮ್ಸ್‌ನಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. 

ರಾಜ್ಯಪಾಲರಿಗೆ ಮನವಿ: ರಾಜ್ಯ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯಿದೆ ತಿದ್ದುಪಡಿ ಕುರಿತಂತೆ ಸರಕಾರ ಮತ್ತು ವೈದ್ಯರ ಮಧ್ಯೆ ಉಂಟಾಗಿರುವ ಸಮಸ್ಯೆ ಬಗೆಹರಿಸಲು ರಾಜ್ಯಪಾಲರು ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ಧಾರವಾಡ ಶಹರ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ ಒಕ್ಕೂಟವು ಗುರುವಾರ ಪ್ರತಿಭಟನೆ ಕೈಗೊಂಡಿತು. 

ನಗರದ ಜ್ಯುಬಲಿ ವೃತ್ತದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ಕೈಗೊಂಡ ಒಕ್ಕೂಟವು, ಕೆಪಿಎಂಇ 2017 ಕಾಯ್ದೆ ಜಾರಿ ಮಾಡಿದರೆ ಸಾವಿರಾರು ಖಾಸಗಿ ಆಸ್ಪತ್ರೆಗಳು ಬಾಗಿಲು ಮುಚ್ಚಲು ನಿರ್ಧಾರ ಕೈಗೊಂಡಿವೆ. ಇದರಿಂದ ಈ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ಸಿಬ್ಬಂದಿಗಳು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ ನ್ಯಾಯ ದೊರಕಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಮಂಜುನಾಥ ಶಿಗ್ಗಾವಿ, ಸಂತೋಷ ಬಡಿಗೇರ, ಯುವರಾಜ ಪೂಜಾರ, ಕುಮಾರ ಹಿರೇಮಠ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗಳು ಪಾಲ್ಗೊಂಡಿದ್ದರು. 

Advertisement

ಜಿಲ್ಲಾಸ್ಪತ್ರೆಯಲ್ಲಿ ಜನದಟ್ಟಣೆ: ಖಾಸಗಿ ಆಸ್ಪತ್ರೆಗಳ ಬಂದ್‌ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ಆಗಮಿಸುವ ಜನರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಯಾವುದೇ ತೊಂದರೆಯಾಗದಂತೆ ಆಸ್ಪತ್ರೆ ವೈದ್ಯಾಧಿಕಾರಿಗಳು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ. 

ನಿತ್ಯವೂ ಜಿಲ್ಲಾಸ್ಪತ್ರೆಗೆ ಅಂದಾಜು 1000 ಜನರು ಹೊರ ರೋಗಿಗಳಾಗಿ ಆಗಮಿಸುತ್ತಿದ್ದರು. ಇದೀಗ ಈ ಸಂಖ್ಯೆ 1400ಕ್ಕೆ ಏರಿಕೆಯಾಗಿದೆ. ಮಕ್ಕಳ ತುರ್ತು ಚಿಕಿತ್ಸಾ ಘಟಕದಲ್ಲಿ 17 ಮಕ್ಕಳು ದಾಖಲಿದ್ದು, ಈ ಪೈಕಿ ಬುಧವಾರ ರಾತ್ರಿಯೇ 6 ಮಕ್ಕಳು ಜ್ವರದಿಂದ ದಾಖಲಾಗಿವೆ.

ಉಳಿದಂತೆ ಮಕ್ಕಳ ವಾರ್ಡ್‌ನಲ್ಲಿ 25ಕ್ಕೂ ಹೆಚ್ಚು ಮಕ್ಕಳು ದಾಖಲಾಗಿವೆ. ಧಾರವಾಡ ನಗರ ನಿವಾಸಿ 11 ವರ್ಷದ ಬಾಲಕಿ ಸಿಂಚನಾ ಪಚಾಂಜಿ ಶಂಕಿತ ಡೆಂಘೀ ಜ್ವರದಿಂದ ಬಳಲುತ್ತಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ 33 ಪ್ರಾಥಮಿಕ ಆರೋಗ್ಯ ಕೇಂದ್ರ, 19 ನಗರ ಕೇಂದ್ರ, 3 ತಾಲೂಕಾಸ್ಪತ್ರೆ, ತಲಾ ಒಂದು ಜಿಲ್ಲಾಸ್ಪತ್ರೆ, ಕಿಮ್ಸ್‌ನಲ್ಲಿ ರೋಗಿಗಳಿಗೆ ತೊಂದರೆ ಆಗದಂತೆ ಸೇವೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. 

ಹಗಲು-ರಾತ್ರಿ ಪಾಳೇಯದಲ್ಲಿ ಸೇವೆ ನೀಡಲು ವೈದ್ಯರು ಹಾಗೂ ಸಿಬ್ಬಂದಿ ನೇಮಕಗೊಳಿಸಿ, ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಔಷಧಿ ಕೊರತೆ ಆಗದಂತೆ ದಾಸ್ತಾನು ಮಾಡಿಕೊಳ್ಳಲಾಗಿದ್ದು, ಲ್ಯಾಬ್‌, ಏಕ್ಸರೇ ಕೇಂದ್ರಗಳ ನಿರ್ವಹಣೆಗೆ ಸಿಬ್ಬಂದಿ ಹಾಕಲಾಗಿದೆ.

ದಿನದ 24 ಗಂಟೆಯೂ ಸೇವೆ ನೀಡಲು ವ್ಯವಸ್ಥೆ ಮಾಡಿದ್ದು, ಅಗತ್ಯ ಇರುವ ಕಡೆ ತಾಲೂಕು ವೈದ್ಯಾಧಿಕಾರಿಗಳನ್ನು ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎನ್‌.ಎಂ. ದೊಡಮನಿ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next