Advertisement

ಮೂರೂವರೆ ವರ್ಷ ಸ್ವಂತ ಬಲದಲ್ಲೇ ಸರ್ಕಾರ

09:50 AM Nov 28, 2019 | Team Udayavani |

ದಾವಣಗೆರೆ: ಉಪ ಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಗೆದ್ದು ಮುಂದಿನ ಮೂರೂವರೆ ವರ್ಷ ಯಾವುದೇ ಪಕ್ಷದ ಬೆಂಬಲ, ಸಹಕಾರ ಇಲ್ಲದೇ ಸ್ವಂತ ಬಲದಿಂದಲೇ ಅಧಿಕಾರ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಪ ಚುನಾವಣೆ ನಂತರ ಬೇರೆ ಯಾವುದೇ ಪಕ್ಷದ ಬೆಂಬಲ, ಸಹಕಾರ ಬೇಡ. ಸ್ವಂತ ಬಲದಿಂದಲೇ ಅಧಿಕಾರ ನಡೆಸುತ್ತೇವೆ. ರಾಜ್ಯದ ಜನತೆಗೆ ಈ ಬಗ್ಗೆ ಯಾವುದೇ ರೀತಿಯ ಅನುಮಾನ ಬೇಡ. ಎಲ್ಲಾ ಸಮಾಜದವರು ಜಾತಿ-ಕುಲ-ಗೋತ್ರ ಮರೆತು ಬಿಜೆಪಿ ಜತೆ ನಿಲ್ಲಬೇಕೆಂದು ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ ಎಂದರು.

ಮುಂದಿನ ಮೂರೂವರೆ ವರ್ಷಗಳ ಕಾಲ ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಇರಬೇಕೆಂದು ರಾಜ್ಯದ ಆರೂವರೆ ಕೋಟಿ ಜನರು ಸಂಕಲ್ಪ ಮಾಡಿದ್ದಾರೆ. ಶೇ.100ರಷ್ಟು 15 ಕ್ಷೇತ್ರದಲ್ಲಿ ಸ್ವಂತ ಬಲದಿಂದ ಗೆದ್ದು ಅಧಿಕಾರ ನಡೆಸುವ ಜೊತೆಗೆ ಒಳ್ಳೆಯ ಆಡಳಿತ ನೀಡುತ್ತೇವೆ ಎಂದು ಹೇಳಿದರು.

ಗೋಕಾಕ, ಬೆಳಗಾವಿಯಲ್ಲಿ ವೀರಶೈವ ಸಮಾಜದ ಮತಗಳು ಬಿಜೆಪಿಗೆ ಬರಬೇಕು ಎಂಬ ಹೇಳಿಕೆಯ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತೇನೆ ಎಂದಿರುವ ಕುಮಾರಸ್ವಾಮಿಗೆ ಮಾಡಲು ಬೇರೇನು ಕೆಲಸ ಇಲ್ಲ ಎಂದರು. ಉಪ ಚುನಾವಣೆಯಲ್ಲಿ ಬಿಜೆಪಿ 8 ಸ್ಥಾನಗಳನ್ನೂ ಗೆಲ್ಲವುದಿಲ್ಲ. ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸುವುದಕ್ಕೆ ಇಷ್ಟ ಇಲ್ಲ. ಇವರಿಗೆಲ್ಲ ಚುನಾವಣೆಯಲ್ಲಿ ಜನರೇ ಉತ್ತರ ಕೊಡುತ್ತಾರೆ. ಎಲ್ಲಾ 15 ಕ್ಷೇತ್ರಗಳಲ್ಲಿ ಪಕ್ಷದ ಪರ ವಾತಾವರಣ ಇದೆ. ಬೆಂಗಳೂರಿನ ಹುಳಿಮಾವು ಕೆರೆ ಏರಿ ಒಡೆದು ದೊಡ್ಡ ಅನಾಹುತವಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲಾ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದರು.

Advertisement

ಜಾತಿ, ಸೇಡಿನ ರಾಜಕಾರಣ ಮಾಡುತ್ತಿಲ್ಲ
ಕೆೆ.ಆರ್‌.ಪೇಟೆ: ನಾನು ಮುಖ್ಯಮಂತ್ರಿಯಾಗಿ ಜಾತಿ ಅಥವಾ ಸೇಡಿನ ರಾಜಕಾರಣ ಮಾಡುತ್ತಿಲ್ಲ. ನನಗೆ ಜಾತಿ ರಾಜಕಾರಣದಲ್ಲಿ ನಂಬಿಕೆಯೂ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು. ತಾಲೂಕಿನ ಹುಟ್ಟೂರು ಬೂಕನಕೆರೆಯಲ್ಲಿ ನಡೆದ ಉಪಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಜನರ ಪ್ರೀತಿ-ವಿಶ್ವಾಸದ ಮೇಲೆ ನನಗೆ ಭಾರೀ ಭರವಸೆಯಿದೆ, ನಾಡಿನ ಜನರು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಶಕ್ತಿಯನ್ನು ತುಂಬುತ್ತಾರೆ.

ಡಿಸೆಂಬರ್‌ 9ರ ನಂತರ ಸರ್ಕಾರದ ಆಡಳಿತ ವೇಗ ಇನ್ನೂ ಹೆಚ್ಚಾಗಲಿದೆ. ಇದರೊಂದಿಗೆ ಯಡಿಯೂರಪ್ಪನ ಇನ್ನೊಂದು ಮುಖ ಏನೆಂಬುದು ನಾಡಿನ ಜನರಿಗೆ ಗೊತ್ತಾಗಲಿದೆ ಎಂದು ಹೇಳಿದರು. ನಾನು ಏಳು ಬಾರಿ ಶಾಸಕನಾಗಿ ಒಂದು ಬಾರಿ ಉಪಮುಖ್ಯಮಂತ್ರಿ, ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರೂ ನನ್ನ ಜನ್ಮ ಕ್ಷೇತ್ರದಲ್ಲಿ ಒಬ್ಬ ಶಾಸಕನನ್ನೂ ಪಡೆದುಕೊಂಡಿಲ್ಲ ಎಂಬ ಕೊರಗಿತ್ತು. ಆದರೆ ನನ್ನ ಚುನಾವಣಾ ರಾಜಕೀಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಹಸ್ರಾರು ಸಂಖ್ಯೆಯಲ್ಲಿ ನೆರೆದಿರುವ ನಿಮ್ಮನ್ನು ನೋಡಿದ ಕೂಡಲೇ ನನ್ನ ಕನಸು ನನಸಾಗುವುದು ಖಚಿತ ಎಂದರು.

ಕ್ಷೇತ್ರದಲ್ಲಿ ಗೂಂಡಾಗಿರಿ, ದಾದಾಗಿರಿ ನಡೆಯಲು ಎಂದಿಗೂ ನಾನು ಬಿಡುವುದಿಲ್ಲ. ನಾರಾಯಣಗೌಡರ ಮೇಲೆ ಚಪ್ಪಲಿ ತೂರಿ ಜೆಡಿಎಸ್‌ ಕಾರ್ಯಕರ್ತರು ಗೂಂಡಾಗಿರಿ ಮಾಡಿ ಕ್ಷೇತ್ರದಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಲು ಹೊರಟಿದ್ದಾರೆ. ಈ ಯಡಿಯೂರಪ್ಪ ಜಿಲ್ಲೆಯಲ್ಲಿ ಗೂಂಡಾಗಿರಿ- ದಾದಾಗಿರಿ ನಡೆಯಲು ಬಿಡುವುದಿಲ್ಲ, ಗೂಂಡಾಗಳನ್ನು ಹೇಗೆ ಮಟ್ಟ ಹಾಕಬೇಕು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹೇಗೆ ಕಾಪಾಡಬೇಕು ಎನ್ನುವುದು ನನಗೆ ಗೊತ್ತಿದೆ ಎಂದು ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next