Advertisement

ಶಿಕ್ಷಕರ ವರ್ಗಾವಣೆಗೆ ಸರ್ಕಾರ ಆದೇಶ ನೀಡಿಲ್ಲ

10:53 PM Sep 11, 2019 | Lakshmi GovindaRaju |

ಬೆಂಗಳೂರು: ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಕೌನ್ಸೆಲಿಂಗ್‌ ಪ್ರಕ್ರಿಯೆ ಮಾತ್ರ ನಡೆಸಲಾಗಿದೆ. ಆದರೆ, ಯಾರಿಗೂ ವರ್ಗಾವಣೆ ಜಾರಿ ಅಥವಾ ಸ್ಥಳ ನಿಯೋಜನೆ ಆದೇಶ ನೀಡಿಲ್ಲ ಎಂದು ರಾಜ್ಯ ಸರ್ಕಾರ ಬುಧವಾರ ಹೈಕೋರ್ಟ್‌ಗೆ ತಿಳಿಸಿದೆ.

Advertisement

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆಗೆ ಪ್ರಕ್ರಿಯೆ ಪ್ರಶ್ನಿಸಿ “ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ -ಪ್ರೌಢಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಪಿ.ಕೆ.ಚಂದ್ರಕಾಂತ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಲ್‌.ನಾರಾಯಣಸ್ವಾಮಿ ಹಾಗೂ ನ್ಯಾ. ಆರ್‌. ದೇವದಾಸ್‌ರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಸಲ್ಲಿಸಿದ ಈ ಮಾಹಿತಿ ದಾಖಲು ಮಾಡಿಕೊಂಡ ನ್ಯಾಯಪೀಠ, ಅರ್ಜಿ ವಿಲೇವಾರಿಗೊಳಿಸಲು ಆದೇಶಿಸಿತು. ಈ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ವಿ.ಲಕ್ಷ್ಮೀನಾರಾಯಣ, ನ್ಯಾಯಾಲಯ ಅ.26ರಂದು ನೀಡಿದ್ದ ಆದೇಶದಂತೆ ವರ್ಗಾವಣೆಗೆ ಸಂಬಂಧಿಸಿದಂತೆ ಅರ್ಜಿದಾರ ಶಿಕ್ಷಕರು ಸಲಹೆ ನೀಡಿದ್ದಾರೆ.

ಆದರೆ ಅವುಗಳನ್ನು ಪರಿಗಣಿಸುವ ಮುನ್ನವೇ ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಕರ ವರ್ಗಾವಣೆಗೆ ಕೌನ್ಸೆಲಿಂಗ್‌ ನಡೆಸುವ ಜೊತೆಗೆ ವರ್ಗಾವಣೆ ಆದೇಶ ಹೊರಡಿಸುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಆಗ ಉತ್ತರಿಸಿದ ಸರ್ಕಾರದ ಪರ ವಕೀಲರು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಮಗೆ ನೀಡಿರುವ ಮಾಹಿತಿಯಂತೆ, ಶಿಕ್ಷಕರ ವರ್ಗಾವಣೆ ಸಂಬಂಧ ಕೌನ್ಸೆಲಿಂಗ್‌ ನಡೆಸಿದ್ದರೂ, ಯಾರಿಗೂ ಆದೇಶ ನೀಡಿಲ್ಲ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು.

ಕಾಲಮಿತಿಯೊಳಗೆ ವಲಸೆ ಮಕ್ಕಳ ಶಿಕ್ಷಣ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಿ
ಬೆಂಗಳೂರು: ರಾಜ್ಯದ ವಲಸೆ ಮಕ್ಕಳಿಗೆ ಶಿಕ್ಷಣ ಸೌಲಭ್ಯ ಕುರಿತ ನೀತಿ ಜಾರಿಗೆ ತರಲು ಕಾಲಮಿತಿಯೊಳಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ಈ ಕುರಿತು ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಹಾಗೂ ನ್ಯಾ.ಮೊಹಮ್ಮದ್‌ ನವಾಜ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ರಾಜ್ಯ ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ.

Advertisement

ಇದೇ ವೇಳೆ, ಸರ್ಕಾರ ಸಲ್ಲಿಸಿದ ಮಾಹಿತಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯಲ್ಲಿ ಏರಿಕೆ ಆಗಿರುವ ಅಂಶ ಗಮನಿಸಿದ ನ್ಯಾಯಪೀಠ, ಈ ಕುರಿತು ಸ್ಪಷ್ಟನೆ ನೀಡಲು ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿತು. ನೆರೆ ಪೀಡಿತ ಪ್ರದೇಶಗಳಲ್ಲಿ ಆಗಾಗ ಶಾಲೆಗಳಿಗೆ ರಜೆ ನೀಡುವುದರಿಂದ ಮತ್ತು ಸಾಲು-ಸಾಲು ಸರ್ಕಾರಿ ರಜೆ ಬಂದಿರುವುದರಿಂದ ಸಹಜವಾಗಿ ಮಕ್ಕಳು ಶಾಲೆಯಿಂದ ದೂರು ಉಳಿದಿದ್ದಾರೆ.

ಮಗು ಪೂರ್ವಾನುಮತಿ ಇಲ್ಲದೇ ಸತತ 7ದಿನ ಶಾಲೆಗೆ ಗೈರಾದರೆ ಅಂತಹ ಮಗುವನ್ನು ಶಾಲೆಯಿಂದ ಹೊರಗುಳಿದ ಮಗು ಎಂದು ಸ್ಥಳೀಯ ಹಾಜರಾತಿ ಅಧಿಕಾರಿಗಳು, ಪರಿಗಣಿಸುತ್ತಾರೆ. ಹೀಗಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಆದರೂ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ತರಿಸಿ ಕೋರ್ಟ್‌ಗೆ ಸಲ್ಲಿಸುವುದಾಗಿ ಸರ್ಕಾರದ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.

ವಾದ ಆಲಿಸಿದ ಬಳಿಕ ವಲಸೆ ಮಕ್ಕಳ ನೀತಿ ಜಾರಿಗೆ ತರಲು ಕಾಲಮಿತಿಯೊಳಗೆ ಕ್ರಮಕೈಗೊಳ್ಳುವಂತೆ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರುವ ನಿಟ್ಟಿನಲ್ಲಿ ನ್ಯಾಯಾಲಯ ನೀಡಿರುವ ಆದೇಶ ಪಾಲಿಸಿದ ಕುರಿತು ವಸ್ತುಸ್ಥಿತಿ ಅನುಪಾಲನಾ ವರದಿ ಸಲ್ಲಿಸುವಂತೆ ನಿರ್ದೇಶಿಸಿ ನ್ಯಾಯಪೀಠ ವಿಚಾರಣೆ ಸೆ.17ಕ್ಕೆ ಮುಂದೂಡಿತು.

Advertisement

Udayavani is now on Telegram. Click here to join our channel and stay updated with the latest news.

Next