Advertisement

ಆರ್‌ಟಿಇ ಬೆನ್ನು ಬಿದ್ದ ಸರಕಾರ

01:03 PM Jan 17, 2017 | Team Udayavani |

ಹುಬ್ಬಳ್ಳಿ: ಸರ್ಕಾರ ಜಾರಿಗೆ ತಂದಿರುವ (ಶಿಕ್ಷಣ ಹಕ್ಕು) ಆರ್‌ಟಿಇ ಕಾಯ್ದೆಯಿಂದ ಸರ್ಕಾರಿ ಶಾಲೆಗಳು ಬಂದ್‌ ಆಗುವ ಸ್ಥಿತಿಗೆ ತಲುಪಿವೆ ಎಂದು ರಾಜ್ಯ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ ಹೇಳಿದರು. ಹೊಸೂರಿನ ಸರಕಾರಿ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

Advertisement

ಆರ್‌ಟಿಇ ಬದಲಾಗಿ ಸರ್ಕಾರಿ ಶಾಲೆಗಳಿಗೆ ಮೂಲ ಸೌಕರ್ಯ ಮತ್ತು ಉತ್ತಮ ಶಿಕ್ಷಣ ನೀಡಿದರೆ ಮಕ್ಕಳು ಈ ಶಾಲೆಗಳಿಗೆ ಬರುತ್ತಾರೆ. ಆದರೆ ಸರಕಾರ ಮಾತ್ರ ಆರ್‌ಟಿಇ ಬೆನ್ನು ಬಿದ್ದಿದೆ ಎಂದರು. ಇನ್ನು ಶಾಲೆಗಳಲ್ಲಿ ಇಂದು ಬರೀ ಉದ್ಯೋಗದ ಗುರಿಯನ್ನಷ್ಟೇ ಹೊಂದದೇ, ಸಚ್ಯಾರಿತ್ರ್ಯ ಮತ್ತು ವ್ಯಕ್ತಿತ್ವವಿಕಸನವಾಗುವಂತಹ ಶಿಕ್ಷಣ ನೀಡುವ ಅಗತ್ಯವಿದೆ.

ಆದರೆ, ಟಿವಿ ವಾಹಿನಿಗಳಲ್ಲಿ ವೈಭವೀಕರಿಸಿ ಬಿತ್ತರಿಸಲಾಗುತ್ತಿರುವ ಅಪರಾಧಿ ಮತ್ತು ಲೈಂಗಿಕ ವರದಿಗಳನ್ನು ನೋಡಿ ಮುಗ್ಧ ಮಕ್ಕಳ ಮನಸ್ಸು ಹಾಳಾಗುತ್ತಿದೆ. ಯಾವುದೇ ಸುದ್ದಿಯನ್ನು ಬಿತ್ತರಿಸುವಾಗ ಅದಕ್ಕೊಂದು ಚೌಕಟ್ಟು ಇರುವುದು ಅವಶ್ಯ ಎಂದರು. ಹೊಸೂರು ಸರ್ಕಾರಿ ಪ್ರೌಢಶಾಲಾ ಕಟ್ಟಡ ತುಂಬಾ ಉತ್ತಮ ನಿರ್ಮಿಸಲಾಗಿದೆ.

45 ಲಕ್ಷ ರೂ. ವೆಚ್ಚದಲ್ಲಿ ಕಟ್ಟಲಾಗಿದ್ದು ನಿರ್ಮಾಣ ಹಂತದಲ್ಲಿದ್ದಾಗ ಶಾಲೆಗೆ ಹಲವು ಬಾರಿ ಭೇಟಿ ನೀಡಿದ್ದೇನೆ. ಶಾಲೆಗಳ ಕಟ್ಟಡಗಳು ಯಾವತ್ತೂ ಕಳಪೆಯಿಂದ ಕೂಡಿರಬಾರದು. ಆದರೆ, ನಾಗಶೆಟ್ಟಿ ಕೊಪ್ಪದಲ್ಲಿ ಕಟ್ಟಿರುವ ಸರ್ಕಾರಿ ಶಾಲೆಯ ಕಟ್ಟಡ ತುಂಬಾ ಕಳಪೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಟ್ಟಡದ ನಿರ್ಮಾಣಕ್ಕೆ ಬಳಸಿರುವ ಸಿಮೆಂಟ್‌, ಕಬ್ಬಿಣ ಎಲ್ಲವೂ ಕಳಪೆಯಾಗಿದ್ದು ಈ ಕುರಿತು ದೂರು ನೀಡಲಾಗುವುದು ಎಂದರು. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಕನ್ನಡ ಮಾಧ್ಯಮ ಶಾಲೆಗಳಿಗೆ ಬರುತ್ತಿರುವ ಮಕ್ಕಳ ಗಣನೀಯವಾಗಿ ಕಡಿಮೆಯಾಗಿದೆ. ಇದೇ ರೀತಿ ಮುಂದುವರಿದಲ್ಲಿ 2020ರ ವೇಳೆಗೆ ಶೇ.20ರಷ್ಟು ಕನ್ನಡ ಶಾಲೆಗಳು ಮಾತ್ರ ಉಳಿಯಲಿದ್ದು ಮಿಕ್ಕವೆಲ್ಲ ಬಂದ್‌ ಆಗಲಿವೆ ಎಂದರು. 

Advertisement

ಇದಕ್ಕೆ ಮುಖ್ಯ ಕಾರಣ ಸರಕಾರ ಜಾರಿಗೆ ತಂದಿರುವ ಆರ್‌ಟಿಇ ಕಾನೂನು. ಆರ್‌ಟಿಇ ಜಾರಿಗೆ ತಂದಿರುವ ಸರ್ಕಾರ ಇದಕ್ಕಾಗಿ ಸುಮಾರು 1000 ಕೋಟಿ ಹಣ ಬಳಕೆ ಮಾಡುತ್ತಿದೆ. ಅದೇ ಹಣವನ್ನು ಸರ್ಕಾರಿ ಶಾಲೆಗಳ ಉದ್ಧಾರಕ್ಕಾಗಿ ಉಪಯೋಗಿಸಿದರೆ, ಎಲ್ಲ ಮಕ್ಕಳು ಸರಕಾರಿ ಶಾಲೆಗಳತ್ತ ಬರುತ್ತಾರೆ ಎಂದರು. 

ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರು ತಮ್ಮ ಸಂಪೂರ್ಣ ಶಕ್ತಿಯ ಬಳಕೆ ಮಾಡಿ ಕನ್ನಡ ಶಾಲೆಗಳ ಉಳಿವಿಗೆ ಶ್ರಮಿಸಬೇಕು ಎಂದರು. ನಮ್ಮ ನಾಡಿನಲ್ಲಿ ಕನ್ನಡ ಮಾಧ್ಯಮಕ್ಕೆ ಬೆಲೆಯೇ ಇಲ್ಲದಂತಾಗಿದೆ. ಕನ್ನಡ ಉಳಿಸಿ-ಬೆಳೆಸಲು ಶಿಕ್ಷಕರು ಪಾತ್ರ ಬಹುಮುಖ್ಯವಾಗಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ಸರಕಾರಿ ಶಾಲೆಗಳು ಮುಂದಾಗಬೇಕು ಎಂದರು. ವಿಧಾನ ಪರಿಷತ್‌ ಸದಸ್ಯ ಪ್ರದೀಪ್‌ ಶೆಟ್ಟರ, ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಉಪಮಹಾಪೌರ ಲಕ್ಷ್ಮೀ ಉಪ್ಪಾರ, ವೇದವ್ಯಾಸ ಕೌಲಗಿ, ಡಿಡಿಪಿಐ ನಾಗೂರ, ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಲ್‌. ಹಂಚಾಟಿ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಇನ್ನಿತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next