Advertisement

40 ಪರ್ಸೆಂಟ್ ಕಮಿಷನ್ ಆರೋಪ ರಾಜಕೀಯವಾಗಿ ಎದುರಿಸಲು ಮುಂದಾದ ಸರಕಾರ

03:47 PM Aug 25, 2022 | Team Udayavani |

ಬೆಂಗಳೂರು : ರಾಜ್ಯ ಸರಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿರುವ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರಕಾರ ಇದ‌ನ್ನು ರಾಜಕೀಯವಾಗಿಯೇ ಎದುರಿಸುವುದಕ್ಕೆ ಈಗ ಸಿದ್ದತೆ ನಡೆಸಿದೆ.

Advertisement

ಹೀಗಾಗಿ ಲೋಕಾಯುಕ್ತ ತನಿಖೆ ಬೇಕಾದರೂ ನಡೆಸಲು ಸಿದ್ಧ ಎಂದು ಸ್ವತಃ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದು ಇಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ಔಪಚಾರಿಕ ಚರ್ಚೆ ನಡೆಯಬಹುದು ಎನ್ನಲಾಗುತ್ತಿದೆ.

ಯಾವುದೇ ವಿಷಯದಲ್ಲಿ ನಿರ್ದಿಷ್ಟವಾದ ವಿವರಗಳಿದ್ದಲ್ಲಿ ಗುತ್ತಿಗೆದಾರರು ಲೋಕಾಯುಕ್ತಕ್ಕೆ ದೂರು ಸಲ್ಲಿಸಬಹುದು.  ಪುರಾವೆಗಳಿಲ್ಲದ ಆಧಾರ ರಹಿತವಾದ ಹೇಳಿಕೆಗಳು ಉದ್ದೇಶಪೂರ್ವಕ ಹೇಳಿಕೆಗಳಾಗುತ್ತವೆ ಎಂದು ಬೊಮ್ಮಾಯಿ ಈಗಾಗಲೇ ಸ್ಪಷ್ಟನೆ ನೀಡಿದ್ದು, 40% ಕಮಿಷನ್ ವಿವಾದ ಚುನಾವಣೆಯವರೆಗೂ ಸದ್ದು ಮಾಡುವ ಸಾಧ್ಯತೆ ಇದೆ‌.

ಗುತ್ತಿಗೆದಾರರು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಂತರ ಆರೋಪ ಮಾಡಿರುವುದನ್ನು ಇಲ್ಲಿ ಗಮನಿಸಬಹುದು. ಕಳೆದ ಬಾರಿ ಸಂಘದವರು ಹೇಳಿದಂತೆ ಆದೇಶಗಳನ್ನು ಮಾಡಲಾಗಿತ್ತು.

ನಿವೃತ್ತ ನ್ಯಾಯಾಧೀಶರ ನೇತೃತ್ವದ ಟೆಂಡರ್ ಪರಿಶೀಲನಾ ಸಮಿತಿಯನ್ನು ರಚಿಸಲಾಗಿದೆ. ಅವರು ಕೇವಲ ಸಾಮಾನ್ಯ ಹೇಳಿಕೆ ನೀಡುವುದು ಜವಾಬ್ದಾರಿಯುತ ಹೇಳಿಕೆಯಾಗುವುದಿಲ್ಲ. ನಿರ್ದಿಷ್ಟವಾದ ವಿವರಗಳಿದ್ದಲ್ಲಿ ಲೋಕಾಯುಕ್ತಕ್ಕೆ  ದೂರು ನೀಡಲು ಸಲಹೆ ನೀಡಿದ ಮುಖ್ಯಮಂತ್ರಿಗಳು  ಲೋಕಾಯುಕ್ತಕ್ಕೆ ಸಂಪೂರ್ಣ ಸ್ವಾತಂತ್ರ್ಯವಿದ್ದು, ತನಿಖೆ ನಡೆಸುತ್ತದೆ. ಯಾರೇ ತಪ್ಪು ಎಸಗಿದ್ದರೂ ಅವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಬೊಮ್ಮಾಯಿ ಘೋಷಿಸಿದ್ದಾರೆ.

Advertisement

ಗುತ್ತಿಗೆದಾರರು ಈ ಬಗ್ಗೆ ಪ್ರಧಾನಮಂತ್ರಿಗಳಿಗೆ ದೂರು ಸಲ್ಲಿಸಲಿದ್ದಾರೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಈ ದೇಶದ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯುವ ಅಧಿಕಾರ ಎಲ್ಲರಿಗೂ ಇದೆ. ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹಿಸುವ ವ್ಯವಸ್ಥೆಯಿದೆ. ಕೋರ್ಟಿನ ಆದೇಶದ ನಂತರ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರವಿದ್ದು, ನಿರ್ದಿಷ್ಟ ದೂರು ನೀಡಿದ್ದಲ್ಲಿ ತನಿಖೆಯಾಗುತ್ತದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next