ಪಡುಬಿದ್ರಿ: ಸಾವಿರಾರು ಕೋಟಿ ರೂ. ಗಳನ್ನು ರಾಜ್ಯ ಸರಕಾರವು ಆರೋಗ್ಯ ಕ್ಷೇತ್ರಕ್ಕೆ ವೆಚ್ಚ ಮಾಡುತ್ತಿದೆಯಾದರೂ ಸರಕಾರಿ ಆಸ್ಪತ್ರೆಗಳಲ್ಲಿನ ಆರೋಗ್ಯ ಸೇವೆ ಕಡಿಮೆ ಮಟ್ಟದ್ದಾಗಿರುತ್ತದೆ. ಆರೋಗ್ಯ ಇಲಾಖೆಯಲ್ಲಿ ಆನಾರೋಗ್ಯ, ಅವ್ಯವಸ್ಥೆ ಇದೆ. ಉತ್ತಮ ಆರೋಗ್ಯದ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಕೇಂದ್ರ ಸರಕಾರವು 3000 ಜೆನರಿಕ್ ಔಷಧಿ ಮಳಿಗೆಗಳ ಸ್ಥಾಪನೆಗೆ ಮುಂದಾಗಿದ್ದು ಉತ್ತಮ ಆರೋಗ್ಯ ಸೇವೆಗಳಿಗಾಗಿ ರಾಜ್ಯ ಸರಕಾರವೂ ಸಹಕರಿಸಲಿ ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಅವರು ಎ. 16ರಂದು ಭಾಜಪ ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ, ಬಿಜೆಪಿ ಯುವ ಮೋರ್ಚಾ ಕಾಪು ಮತ್ತು ಅಮೋಘ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಉಡುಪಿಯ ಆದರ್ಶ ಆಸ್ಪತ್ರೆ ಮತ್ತು ಮಂಗಳೂರಿನ ಎ. ಜೆ. ಆಸ್ಪತ್ರೆಯ ಕ್ಯಾನ್ಸರ್ ಚಿಕಿತ್ಸಾ ವಿಭಾಗಗಳ ಜಂಟಿ ಸಹಯೋಗದಲ್ಲಿ ಎರ್ಮಾಳು ಶ್ರೀ ಜನಾರ್ದನ ದೇವಳದ ಜನಾರ್ದನ ಜನಕಲ್ಯಾಣ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಬೃಹತ್ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು.
ಸಭಾಧ್ಯಕ್ಷತೆಯನ್ನು ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಕಿರಣ್‌ಕುಮಾರ್ ವಹಿಸಿದ್ದು ಮಾತಾಡಿದರು. ಸಭೆಯನ್ನು ಉದ್ದೇಶಿಸಿ ಮಾಜಿ ಶಾಸಕ ಲಾಲಾಜಿ ಮೆಂಡನ್, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಮಾತಾಡಿದರು. ವೈದ್ಯರಾದ ಡಾ | ಕಮಲಾಕ್ಷ ಶೆಣೈ ಹಾಗೂ ಡಾ | ಜಿ. ಚಂದ್ರಶೇಖರ್ ಮಾತಾಡುತ್ತಾ ನಮ್ಮಲ್ಲಿನ ಆಹಾರ ಕ್ರಮ, ಒತ್ತಡ, ಜೀವನ ಶೈಲಿಗಳಿಂದಾಗಿ ರೋಗಗಳು ನಮ್ಮನ್ನರಸಿ ಬರುತ್ತವೆ. ಎಲ್ಲರೂ ಆರೋಗ್ಯ ವಿಮೆ ಮಾಡಿಸಿಕೊಳ್ಳಿ. ವೈದ್ಯರಾಗಿ ನಾವು ಎಲ್ಲರಿಗೂ ಉತ್ತಮ ಆರೋಗ್ಯ ಸೇವೆಯನ್ನು ನೀಡಲು ಬದ್ಧರಿರುವುದಾಗಿ ಹೇಳಿದರು.
ಉಡುಪಿ ಜಿ. ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಎರ್ಮಾಳು, ಜಿ. ಪಂ. ಸದಸ್ಯರಾದ ಗೀತಾಂಜಲಿ ಸುವರ್ಣ, ಶಶಿಕಾಂತ್ ಪಡುಬಿದ್ರಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ರಾಜ್ಯ ಹಿಂದುಳಿದ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ರಾಜ್ಯ ಬಿಜೆಪಿ ಮುಖಂಡ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ, ಬಡಾ ಗ್ರಾ. ಪಂ. ಅಧ್ಯಕ್ಷೆ ನಾಗರತ್ನಾ, ಕಾಪು ಕ್ಷೇತ್ರ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ್ ಪೂಜಾರಿ, ಉಡುಪಿ ಜಿಲ್ಲಾ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ದಿನೇಶ್ ಎರ್ಮಾಳು ಉಪಸ್ಥಿತರಿದ್ದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ ಸ್ವಾಗತಿಸಿದರು. ರಾಮಕೃಷ್ಣ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾ ಬಿಜೆಪಿ ಹಿಂ. ಮೋ. ಪ್ರಧಾನ ಕಾರ್ಯದರ್ಶಿ ರಾಜೇಶ್ ಕಾವೇರಿ ವಂದಿಸಿದರು.