ಸಂಡೂರು: ಬರ ಪೀಡಿತ ಪ್ರದೇಶ ಎಂದು ಘೋಷಿಸಿರುವ ಸಮ್ಮಿಶ್ರ ಸರ್ಕಾರ ಈ ವರೆಗೂ ಯಾವುದೇ ಬರ ಪರಿಹಾರಕ್ಕೆ ಕ್ರಮ ಕೈಗೊಂಡಿಲ್ಲ. ಸಾಲಮನ್ನಾ ಎಂದು ಹೇಳುತ್ತಾ ಸಾಗುತ್ತಿರುವ ಸರ್ಕಾರ ಇನ್ನು ಸಾಲಮನ್ನಾ ಮಾಡುತ್ತಿಲ್ಲ. ಗೋವುಗಳ ರಕ್ಷಣೆಗಾಗಿ ಗೋಶಾಲೆಗಳನ್ನು ತೆರೆಯದೆ ಸಂಡೂರು ತಾಲೂಕಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ದುಸ್ಥಿತಿ ಉಂಟಾಗಿದೆ ಎಂದು ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಸರ್ಕಾರದ ವಿರುದ್ಧ ಹರಿಹಾಯ್ದರು.
ತಾಲೂಕಿನ ತುಂಬರಗುದ್ದಿ ಹಾಗೂ ಇನ್ನಿತರೆ ಬರ ಪೀಡಿತ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ರೈತರು ಬೆಳೆದಿರುವ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ಇರುವುದು ಒಂದೆಡೆಯಾದರೆ, ಬೆಳೆ ಅರ್ಧಕ್ಕೆ ನಿಂತು ನಷ್ಟ ಅನುಭವಿಸುವವರಿಗೆ ವಿಮಾ ಸೌಲಭ್ಯ ನೀಡುತ್ತಿಲ್ಲ ಎಂದು ಆರೋಪಿಸಿದರು.
ಸಮ್ಮಿಶ್ರ ಸರ್ಕಾರ ಸಂಡೂರು ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಹಲವಾರು ತಿಂಗಳು ಕಳೆದರೂ ಸಹ ಇನ್ನೂ ಬರ ಪರಿಹಾರ ಕಾಮಗಾರಿಗಳು ಪ್ರಾರಂಭವಾಗಿಲ್ಲ. ಬರೀ ಅಧಿಕಾರಕ್ಕಾಗಿ ಕಚ್ಚಾಡುತ್ತಾ ತಿಕ್ಕಾಟದಲ್ಲಿಯೇ ಆಡಳಿತ ನಡೆಸುತ್ತಿರುವುದು ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ದೂರಿದರು.
ಸಂಡೂರು ತಾಲೂಕಿನಲ್ಲಿ ಬಹಳಷ್ಟು ಕೆರೆಗಳಿವೆ. ಅವುಗಳನ್ನು ತುಂಬಿಸುತ್ತಿಲ್ಲ. ನೂರಾರು ಅಡಿ ಬೋರ್‌ವೆಲ್ ಕೊರೆಸಿದರೂ ನೀರು ಸಿಗುತ್ತಿಲ್ಲ. ಗೋವುಗಳಿಗೆ ಕುಡಿಯಲು ನೀರಿಲ್ಲ. ಅವುಗಳ ರಕ್ಷಣೆ ಮಾಡಲು ಗೋಶಾಲೆಗಳನ್ನು ತೆರೆದಿಲ್ಲ. ತಾಲೂಕಿನಲ್ಲಿ ರೈತರು ಮೇವಿನ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಎಲ್ಲಿಯೂ ಮೇವು ಖರೀದಿ ಮತ್ತು ಸಂಗ್ರಹ ಕಾರ್ಯ ನಡೆಯುತ್ತಿಲ್ಲ. ಆಡಳಿತ ಯಂತ್ರ ಪೂರ್ಣ ಪ್ರಮಾಣದಲ್ಲಿ ನಿಷ್ಕ್ರಿಯೆಗೊಂಡಿದೆ. ಆದ್ದರಿಂದ ತಕ್ಷಣ ತಾಲೂಕಿನಾದ್ಯಂತ ಗೋಶಾಲೆಗಳನ್ನು ತೆರೆಯಬೇಕು. ಗುಳೆ ಹೋಗುವ ರೈತರನ್ನು ತಡೆದು ಅವರಿಗೆ ಸರಿಯಾದ ರೀತಿಯಲ್ಲಿ ಉದ್ಯೋಗ ಒದಗಿಸಬೇಕು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ರೈತರು ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆಯಲು ತಕ್ಷಣ ಅವರ ಸಾಲಮನ್ನಾ ಮಾಡಿರುವ ಬಗ್ಗೆ ಪೂರ್ಣ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕಿನಾದ್ಯಂತ ಒಣ ಮೆಣಸಿನಕಾಯಿ ಬೆಳೆದ ರೈತರಿಗೆ ಬೆಲೆ ಕುಸಿತವಾಗಿದೆ. ಅವುಗಳನ್ನು ಸಂಗ್ರಹಿಸಲು ವೇರ್‌ಹೌಸಿಂಗ್ ವ್ಯವಸ್ಥೆ, ಈರುಳ್ಳಿ ಬೆಳೆದ ರೈತರಿಗೆ, ಬಾಳೆ ಬೆಳೆದ ರೈತರಿಗೆ ಕೂಡಲೇ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಮುಖಂಡ ಡಿ.ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸಪ್ಪ, ತಾಲೂಕು ಅಧ್ಯಕ್ಷ ಜಿ.ಟಿ. ಪಂಪಾಪತಿ, ಅಂಬರೀಶ್, ಇತರೆ ಗ್ರಾಮ ಘಟಕಗಳ ಮುಖಂಡರು, ಮುಖಂಡರ ತಂಡ ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶಿಲನೆ ನಡೆಸಿದರು.
ಹಣ ದೋಚುವುದಕ್ಕಾಗಿ ಕಿತ್ತಾಟ
ಕೂಡ್ಲಿಗಿ: ಯಾರ್ಯಾರು ಗುತ್ತಿಗೆದಾರರ ಹತ್ತಿರ ಏನೇನು ವಸೂಲಿ ಮಾಡಬೇಕು ಎನ್ನುವುದಕ್ಕಾಗಿಯೇ ಮೈತ್ರಿ ಪಕ್ಷದವರು ಜಗಳ ಆಡುತ್ತಿದ್ದಾರೆ. ಶಾಸಕರಿಗೆ ಕಮಿಷನ್ ಸಿಗ್ತಾ ಇಲ್ಲ. ಹೀಗಾಗಿ ಜಗಳ ಮಾಡ್ತಾ ಇದ್ದಾರೆ. ಒಂದೇ ಪಕ್ಷದವರು, ಒಂದೇ ಕುಟುಂದವರು ಹಣ ದೋಚುತ್ತಿದ್ದಾರೆ ಎನ್ನುವುದಕ್ಕಾಗಿಯೇ ಜಗಳ ನಡೆಯುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಪದೇ ಪದೇ ರಾಜಿನಾಮೆ ಮಾತನಾಡ್ತಾರೆ. ಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಜನ ಇವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಬಿ.ಶ್ರೀರಾಮುಲು ಕೂಡ್ಲಿಗಿಯಲ್ಲಿ ಬರ ಅಧ್ಯಯನ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ರೀತಿ ಪ್ರತಿಕ್ರಿಯಿಸಿದರು.
ಸಮ್ಮಿಶ್ರ ಸರ್ಕಾರ ಸಂಡೂರು ತಾಲೂಕು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಹಲವಾರು ತಿಂಗಳು ಕಳೆದರೂ ಸಹ ಇನ್ನೂ ಬರ ಪರಿಹಾರ ಕಾಮಗಾರಿಗಳು ಪ್ರಾರಂಭವಾಗಿಲ್ಲ. ಬರೀ ಅಧಿಕಾರಕ್ಕಾಗಿ ಕಚ್ಚಾಡುತ್ತಾ ತಿಕ್ಕಾಟದಲ್ಲಿಯೇ ಆಡಳಿತ ನಡೆಸುತ್ತಿರುವುದು ರಾಜ್ಯದ ಅಭಿವೃದ್ಧಿಗೆ ಮಾರಕವಾಗಿದೆ.
•ಶ್ರೀರಾಮುಲು, ಮೊಳಕಾಲ್ಮೂರು ಶಾಸಕ.