Advertisement

ಜನಹಿತ ಕಾಪಾಡುವಲ್ಲಿ ಸರ್ಕಾರ ವಿಫಲ

01:50 PM May 08, 2018 | Team Udayavani |

ಆಳಂದ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜನಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಿಪಿಐಎಂ ಪಾಲಿಟ್‌ ಬ್ಯೂರೋ ಸದಸ್ಯೆ ಬೃಂದಾ ಕಾರಟ್‌ ಆರೋಪಿಸಿದರು.

Advertisement

ಕಲಬುರಗಿ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಯ ತಾಲೂಕಿನ ವಿ.ಕೆ. ಸಲಗರ ಗ್ರಾಮದಲ್ಲಿ ಸೋಮವಾರ ಸಿಪಿಐಎಂ ಅಭ್ಯರ್ಥಿ ಮಾರುತಿ ಮಾನ್ಪಡೆ ಪರ ಹಮ್ಮಿಕೊಂಡ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ದೇಶಕ್ಕೆ ಅನ್ನ ನೀಡುವ ರೈತರು ಸಂಕಷ್ಟದಲ್ಲಿದ್ದರೂ ಅವರ ಸಾಲಮನ್ನಾ ಮಾಡುವ ಬದಲು ಕಾರ್ಪೋರೇಟ್‌ ಕಂಪನಿಯಗಳ ದೊಡ್ಡ ಮೊತ್ತದ ಸಾಲ ಮನ್ನಾ ಮಾಡಿ ಕೃಷಿಯನ್ನೇ ದಿವಾಳಿ ಹಂತಕ್ಕೆ ತಂದಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾದರೂ ಉದ್ಯೋಗ ನೀಡಿಲ್ಲ. ಉದ್ಯೋಗ ಆಧಾರಿತ ಕೇಂದ್ರ ತೆರೆದಿಲ್ಲ. 

ಕೇಂದ್ರ ಸಚಿವರೇ ದಿನಕ್ಕೊಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ದೇಶದಲ್ಲಿ ಅರಾಜಕತೆ ತಂದೊಡ್ಡುತ್ತಿದ್ದಾರೆ. ಸಂವಿಧಾನ ಬದಲಾಯಿಸಲು ಬಂದಿದ್ದೇವೆ ಎಂದು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ ನಡೆಸಿದ್ದಾರೆ. ಇಂಥ ಹೇಳಿಕೆ ನಿಲ್ಲಿಸಬೇಕು ಎಂದು
ಆಗ್ರಹಿಸಿದರು.

ಕೇಂದ್ರ ಸರಕಾರ ಕೃಷಿ ಅವಲಂಬಿತ ಕೃಷಿಕರ ಸಬ್ಸಿಡಿಯನ್ನೇ ಕಡಿತ ಮಾಡುತ್ತಿದೆ. ರಾಜ್ಯ ಸರ್ಕಾರವೂ ಕೇಂದ್ರದ ಹಾದಿಯನ್ನೇ ಹಿಡಿದುಕೊಂಡಿದೆ ಎಂದು ಆರೋಪಿಸಿದ ಅವರು, ಬಂಡವಾಳ ಶಾಹಿ ಕಾಂಗ್ರೆಸ್‌-ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡದೆ, ಜೀವನವೀಡಿ ರೈತರು ಮತ್ತು ಕಾರ್ಮಿಕರ ಧ್ವನಿಯಾಗಿ ಹೋರಾಡುತ್ತಲೇ ಬಂದಿರುವ ಸಿಪಿಐಎಂ ಅಭ್ಯರ್ಥಿ ಮಾರುತಿ ಮಾನ್ಪಡೆ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿಕೊಡಬೇಕು. ಹಾಗಾಗಿ ರೈತರು, ಕಾರ್ಮಿಕರು ಮತ್ತು ಬಡವರ ಸಮಸ್ಯೆಗಳ
ಬಗ್ಗೆ ಧ್ವನಿ ಎತ್ತಿ ಬೇಡಿಕೆ ಈಡೇರಿಸಲು ಪ್ರಯತ್ನಿಸುವರು. ಇಂಥವರಿಗೆ ಕ್ಷೇತ್ರದ ಜನ ಮನಸ್ಸುಮಾಡಿ ಗೆಲ್ಲಿಸಬೇಕು ಎಂದು ಹೇಳಿದರು.

Advertisement

ಅಭ್ಯರ್ಥಿ ಮಾರುತಿ ಮಾನ್ಪಡೆ ಮಾತನಾಡಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಕಾರ್ಮಿಕ
ಸಂಘಟನೆ ಜಿಲ್ಲಾ ಅಧ್ಯಕ್ಷ ಪ್ರಭುದೇವ ಯಳಸಂಗಿ, ಕಿಸಾನಸಭಾ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ, ಪ್ರಗತಿಪರ ರೈತ ಬಾಬುರಾವ್‌ ಹಿರೇಮಶೆಟ್ಟಿ, ಮೇಘರಾಜ ಕಠಾರೆ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಮತ್ತು ರೈತ, ಕಾರ್ಮಿಕರ ಪರ ಧ್ವನಿ ಎತ್ತಿ ಹೋರಾಡಲು ಮಾನ್ಪಡೆ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಆರ್‌ಪಿಐ ರಾಜ್ಯ ಮುಖಂಡ ಸೂರ್ಯಕಾಂತ ಯಂಕಂಚಿ, ಜಿಲ್ಲಾ ಮುಖಂಡ ಮುಸ್ತಾನ ದಂಡೆ, ಪ್ರಾಂತ ರೈತ ಸಂಘದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಸಿಪಿಐ ಮುಖಂಡ ರೇವಣಸಿದ್ಧ ಕಲಬರಗಿ, ಶಿವಶರಣಪ್ಪ ದಣ್ಣೂರೆ, ಶರಣಬಸಪ್ಪ ಹೇರೂರ, ಚಿತಾಂಬರಾಯ ಬೆಳಮಗಿ ಪಾಲ್ಗೊಂಡಿದ್ದರು. ಅಭ್ಯರ್ಥಿ ಮಾನ್ಪಡೆ ಅವರೊಂದಿಗೆ ಬೃಂದಾ ಕಾರಟ್‌ ಅವರು ಗ್ರಾಮಗಳಲ್ಲಿ ಮತಯಾಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next