Advertisement

ಡಾ.ರಾಜ್‌ ಸ್ಮಾರಕಕ್ಕೆ ಸರ್ಕಾರ ಹಣ ಕೊಡ್ತಿಲ್ಲ!

12:27 PM Nov 24, 2017 | Team Udayavani |

ಬೆಂಗಳೂರು: ವರನಟ ಡಾ.ರಾಜ್‌ಕುಮಾರ್‌ ನಿಧನರಾದಾಗ ಕಂಠೀರವ ಸ್ಟುಡಿಯೊ ಆಡಳಿತ ಮಂಡಳಿ, ಕನ್ನಡ ಚಲನಚಿತ್ರರಂಗದ ಧ್ರುವತಾರೆಯ ಸ್ಮಾರಕ ನಿರ್ಮಿಸಲು ತನ್ನ ಒಡೆತನದಲ್ಲಿದ್ದ 2.5 ಎಕರೆ ಭೂಮಿ ನೀಡಿದೆ. ಆದರೆ ಸರ್ಕಾರ ಅನುದಾನ ಬಿಡುಗಡೆ ಮಾಡದ ಕಾರಣ ಸ್ಮಾರಕ ನಿರ್ಮಾಣ ನೆನೆಗುದಿಗೆ ಬಿದ್ದಿದೆ.

Advertisement

ಸ್ಟುಡಿಯೋ ಆಡಳಿತ ಮಂಡಳಿ ತನ್ನ 17.5 ಎಕರೆ ಜಾಗದ ಪೈಕಿ ರಾಜ್‌ ಸ್ಮಾರಕ ನಿರ್ಮಾಣಕ್ಕಾಗಿ 2.5 ಎಕರೆ ಜಾಗವನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಆಗಿನ ಸರ್ಕಾರ ಆ ಭೂಮಿಗೆ ತಗಲುವ ಹಣವನ್ನು ಸ್ಟುಡಿಯೋ ಆಡಳಿತಕ್ಕೆ ನೀಡುವುದಾಗಿ ಭರವಸೆ ನೀಡಿತ್ತು. ಅದರಂತೆ ಸರ್ಕಾರ ಕಂಠೀರವ ಸ್ಟುಡಿಯೋಗೆ 17.5 ಕೋಟಿ ರೂ. ನೀಡಬೇಕಿದ್ದು, ಸ್ಟುಡಿಯೋ ಆಡಳಿತ ಮಂಡಳಿ ಚಾತಕ ಪಕ್ಷಿಯಂತೆ ಕಾಯುತ್ತಿದೆ.

ಹಣ ನೀಡುವಂತೆ ಸ್ಟುಡಿಯೋ ಆಡಳಿತ ಮಂಡಳಿ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಹಲವು ವರ್ಷಗಳಿಂದ ಪತ್ರದ ಮೇಲೆ ಪತ್ರ ಬರೆಯುತ್ತಲೇ ಇದೆ. ಆದರೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಈ ಹಣ ಬಾಕಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಚಿವ ಸಂಪುಟದಲ್ಲಿ ಚರ್ಚೆಸಿದ್ದಾರೆ. ಸ್ಟುಡಿಯೋಕ್ಕೆ ನೀಡಬೇಕಾಗಿರುವ ಹಣವನ್ನು ನೀಡುವ ವಾಗ್ಧಾನ ಮಾಡಿದ್ದಾರೆ. ಈಗಾಗಲೇ ಇಎಂ ಆದೇಶ ಆರ್ಥಿಕ ಇಲಾಖೆಗೆ ತಲುಪಿದ್ದು, ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.

ಕಂಠೀವ ಸ್ಟುಡಿಯೋಗೆ ಆಧುನಿಕ ಸ್ಪರ್ಶ ನೀಡಬೇಕಿದ್ದು, ಇದಕ್ಕೆ ಸಾಕಷ್ಟು ಹಣ ಬೇಕು. ಸ್ಟುಡಿಯೋದಿಂದ ಬರುತ್ತಿರುವ ಆದಾಯ ಆಧುನೀಕರಣಕ್ಕೆ ಸಲುತ್ತಿಲ್ಲ. ಇದರೊಂದಿಗೆ ಕೆಲವು ಕೋಣೆಗಳ ಕೊರತೆ ಕೂಡ ಇದೆ. ಹೀಗಾಗಿ ಸರ್ಕಾರ ಹಣ ನೀಡಿದರೆ ಸ್ಟುಡಿಯೋಗೆ ಮತ್ತಷ್ಟು ಮೆರುಗು ನೀಡಬಹುದಾಗಿದೆ ಎಂದು ಕಂಠೀರವ ಸ್ಟುಡಿಯೋಸ್‌ ಅಧ್ಯಕ್ಷೆ, ಮೀನಾಕ್ಷಿ ಸಂಗ್ರಾಮ್‌ ಹೇಳಿದ್ದಾರೆ.

ಸ್ಟುಡಿಯೋದೊಳಗೆ ಕಳ್ಳತನದಂತ ಪ್ರಕರಣಗಳು ಹೆಚ್ಚಾಗಿವೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಆವರಣದೊಳಗಿದ್ದ ಗಂಧದ ಗಿಡದ ಕಳ್ಳತನವಾಗಿದೆ. ಸ್ಟುಡಿಯೋದಳಗಿನ ರಕ್ಷಣಾ ಗೋಡೆ ಪಾಳು ಬಿದ್ದಿರುವುದೇ ಇದಕ್ಕೆಲ್ಲ ಕಾರಣ. ಹೀಗಾಗಿ ಸರ್ಕಾರ ನೆರವಿನ ಹಸ್ತ ಆಗತ್ಯ ಎಂದು ಮನವಿ ಮಾಡಿದ್ದಾರೆ.

Advertisement

ವರನಟ ಡಾ.ರಾಜ್‌ ಕುಮಾರ್‌ ಅವರ ಸಮಾಧಿ ಸ್ಥಳಕ್ಕೆ ನಿತ್ಯ ಸಾವಿರಾರು ಜನ ಭೇಟಿ ನೀಡುತ್ತಾರೆ. ಹೀಗಾಗಿ ಈ ಸ್ಮಾರಕವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ಅಗತ್ಯವಿದೆ. ಜತೆಗೆ ಐತಿಹಾಸಿಕ ಹಿನ್ನೆಲೆಯ ಕಂಠೀರವ ಸ್ಟುಡಿಯೋವನ್ನು ಸರ್ಕಾರ ಆಧುನಿಕರಣಗೊಳಿಸಲು ಮುಂದಾಗಬೇಕು.
-ಮೀನಾಕ್ಷಿ ಸಂಗ್ರಾಮ್‌, ಕಂಠೀರವ ಸ್ಟುಡಿಯೋಸ್‌ ಅಧ್ಯಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next