Advertisement

ಸಾಧಕ ವಿದ್ಯಾರ್ಥಿಗಳಿಗೆ ಚಿನ್ನದ ಮೆರಗು

12:01 PM Jan 10, 2018 | Team Udayavani |

ಬೆಳಗಾವಿ: ಪ್ರಯತ್ನ ಪಟ್ಟರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ತೋರಿಸಿ ಕೊಟ್ಟ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಚಿನ್ನ ಬಾಚಿಕೊಂಡು ಬಂಗಾರದ ಮನುಷ್ಯರಾಗಿ ಹೊರ ಹೊಮ್ಮಿದರು. ನಾಲ್ಕು ವರ್ಷಗಳ ಸತತ ಅಧ್ಯಯನದಿಂದ ಸಾಧನೆ ಮಾಡಿ ಚಿನ್ನ ಪಡೆದ ವಿದ್ಯಾರ್ಥಿಗಳು ವಿಟಿಯು ಆವರಣದಲ್ಲಿ ಸಂಭ್ರಮಿಸಿದರು.

Advertisement

ಚಿನ್ನ ಪಡೆದ ವಿದ್ಯಾರ್ಥಿಗಳು ಸಮಾಜಕ್ಕಾಗಿ ದುಡಿಯುವ ಹಂಬಲ ಹೊಂದಿದ್ದಾರೆ. ಐಎಎಸ್‌, ಐಇಎಸ್‌, ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸು ಹೊಂದಿರುವ ವಿದ್ಯಾರ್ಥಿಗಳು ಸಾಮಾಜಿಕವಾಗಿ ಬಂಗಾರದ ಮನುಷ್ಯರಾಗಿ ಮಿಂಚಬೇಕೆಂಬ ಆಶಯ ಹೊಂದಿದ್ದಾರೆ.

ಬಿಇ ಸಿವಿಲ್‌ ಎಂಜಿನಿಯರಿಂಗ್‌ನಲ್ಲಿ ಚಿಕ್ಕಮಗಳೂರಿನ ಆದಿಚುಂಚನಗಿರಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸಚಿನ್‌ ಕೀರ್ತಿ ಎನ್‌. 13 ಚಿನ್ನ ಪಡೆಯುವ ಮೂಲಕ ಈ ಸಲದ ವಿಟಿಯುನಲ್ಲಿ ಚಿನ್ನದಂಥ ಸಾಧನೆ ಮಾಡಿದ್ದಾನೆ. ಸಚಿನ್‌ ಐಇಎಸ್‌(ಇಂಡಿಯನ್‌ ಎಂಜಿನಿಯರಿಂಗ್‌ ಸರ್ವೀಸ್‌) ಮಾಡಬೇಕಂಬ ಗುರಿ ಹೊಂದಿದ್ದಾನೆ. ಸದ್ಯ ಕೆಆರ್‌ಐಡಿಎಲ್‌ನಲ್ಲಿ ಸಹಾಯಕ ಇಂಜಿನಿಯರ್‌ ಹುದ್ದೆಗೆ ಆಯ್ಕೆಯಾಗಿದ್ದಾನೆ.

ಪಿಯುಸಿಯಲ್ಲಿ ಶೇ. 98.39, ಬಿಇಯಲ್ಲಿ ಶೇ. 94ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾನೆ. ಹೈದ್ರಾಬಾದ್‌ನಲ್ಲಿ ಐಇಎಸ್‌ ತರಬೇತಿ ಪಡೆಯುತ್ತಿರುವ ಈತ 2019ರ ಪರೀಕ್ಷೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾನೆ.

ಚಿನ್ನ ಬಾಚಿದ ಪ್ರಶ್ಯುತಾ: ಬಿಇ ಇಲೆಕ್ಟ್ರಿಕಲ್‌ ಆ್ಯಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ನಲ್ಲಿ ಬೆಂಗಳೂರಿನ ಬಿಎನ್‌ಎಂ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಪ್ರತ್ಯುಶಾ ಎ. ಐದು ಚಿನ್ನ ಬಾಚಿಕೊಂಡಿದ್ದಾಳೆ. ಮುಂದೆ ಐಎಎಸ್‌ಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಬಿಇಯಲ್ಲಿ ಶೇ. 87.2, ಎಸ್ಸೆಸ್ಸೆಲ್ಸಿಯಲ್ಲಿ 98.4 ಹಾಗೂ ಪಿಯುನಲ್ಲಿ ಶೇ. 94.6ರಷ್ಟು ಅಂಕ ಗಳಿಸಿದ್ದಾಳೆ. ಮೊದಲಿನಿಂದಲೂ ಪ್ರತಿಭಾವಂತೆಯಾಗಿದ್ದ ಪ್ರತ್ಯುಶಾ ಸರಕಾರಿ ಸೇವೆ ಮಾಡುತ್ತ ಸಮಾಜಕ್ಕಾಗಿ ದುಡಿಯಬೇಕೆಂದು ಕನಸು ಕಂಡಿದ್ದಾಳೆ. ಸದ್ಯ ದೆಹಲಿಯಲ್ಲಿ ಐಎಎಸ್‌ ತರಬೇತಿ ಪಡೆಯುತ್ತಿದ್ದಾಳೆ.

Advertisement

ಅರ್ಪಿತಾ ಐಎಎಸ್‌ ಆಗುವಾಸೆ: ಬಿಇ ಕಂಪ್ಯೂಟರ್‌ ಸೈನ್ಸ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಕುರುಂಜಿ ವೆಂಕಟರಾಮನ್‌ ಗೌಡ ಕಾಲೇಜಿನ ಅರ್ಪಿತಾ ಕೆ.ಎಸ್‌. ಐದು ಚಿನ್ನ ಪಡೆದಿದ್ದಾಳೆ. ಮೂಲತಃ ವಿಟ್ಲದ ಅರ್ಪಿತಾ ಐಎಎಸ್‌ ಮಾಡುವ ಅಭಿಲಾಷೆ. ತಂದೆ ಉದ್ಯೋಗ ಮಾಡುತ್ತ ಮಗಳನ್ನು ಓದಿಸಿದ್ದಾರೆ. ಚಿಕ್ಕಂದಿನಿಂದಲೂ ಐಎಎಸ್‌ ಕನಸು ಕಂಡ ಅರ್ಪಿತಾ ಎಂಜಿನಿಯರಿಂಗ್‌ನಲ್ಲಿ 5 ಚಿನ್ನ ಪಡೆದರೂ ಐಎಎಸ್‌ ಕನಸು ಹೊಮದಿದ್ದಾಳೆ.

ಚಿನ್ನ ಗಳಿಕೆ: ಎಸ್ಸೆಸ್ಸೆಲ್ಸಿ ಓದುತ್ತಿದ್ದಾಗಲೇ ತಂದೆಯನ್ನು ಕಳೆದುಕೊಂಡ ಬೆಳಗಾವಿಯ ರಜತ್‌ ಹೊಗರ್ತಿ 5 ಚಿನ್ನ ಬಾಚಿಕೊಂಡಿದ್ದಾನೆ. ಬಿಇ ಮೆಕ್ಯಾನಿಕಲ್‌ಎಂಜಿನಿಯರಿಂಗ್‌ನಲ್ಲಿ ಕೆಎಲ್‌ಇ ಡಾ| ಎಂ.ಎಸ್‌. ಶೇಷಗಿರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಓದಿದ ರಜತ್‌ ತಾಯಿಯ ಮಡಿಲಲ್ಲೇ ಬೆಳೆದಿದ್ದಾನೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ. 94.56, ಪಿಯುನಲ್ಲಿ 88.16, ಬಿಇನಲ್ಲಿ 87.25 ಅಂಕಗಳಿಸಿದ್ದಾನೆ.

ಭರತನಾಟ್ಯ ನೃತ್ಯಗಾರ್ತಿಗೆ 4 ಚಿನ್ನ: ಮೂಲತಃ ಹಾಸನದವರಾದ ಅಪೂರ್ವಾ ಶರ್ಮಾ ಬೆಂಗಳೂರು ಆರ್‌ಎನ್‌ಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಇನ್‌ಸ್ಟ್ರೆಮೆಂಟೇಶನ್‌ ಟೆಕ್ನಾಲಜಿ ಎಂಜಿನಿಯರಿಂಗ್‌ನಲ್ಲಿ ಓದಿ ನಾಲ್ಕು ಚಿನ್ನ ಪಡೆದುಕೊಂಡಿದ್ದಾಳೆ. ಭರತನಾಟ್ಯ ಕಲಾವಿದೆಯಾಗಿರುವ ಅಪೂರ್ವಾ ಎಸ್ಸೆಸ್ಸೆಲ್ಸಿಯಲ್ಲಿ ಶೇ. 95, ಪಿಯುನಲ್ಲಿ ಶೇ. 92, ಬಿಇನಲ್ಲಿ ಶೇ. 86.84ರಷ್ಟು ಅಂಕ ಗಳಿಸಿದ್ದಾಳೆ. ಎಂ.ಟೆಕ್‌ ಮಾಡುವ ಆಸೆ ಹೊಂದಿದ್ದಾಳೆ.

ಆಂಧ್ರದ ರೈತನ ಮಗನ ಸಾಧನೆ:ಮೂಲತಃ ಆಂಧ್ರ ಪ್ರದೇಶದ ಪರಿಮಿ ಚೈತನ್ಯ ಫಣಿಕುಮಾರ್‌ ಕರ್ನಾಟಕದಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬ ಆಸೆಯಿಂದ ಬಂದು ಎರಡು ಚಿನ್ನ ಪಡೆದು ತನ್ನ ಆಸೆ ಪೂರೈಸಿಕೊಂಡಿದ್ದಾನೆ. 

ಹಳ್ಳಿ ಹುಡುಗಿಗೆ ಸಿಕು 5 ಬಂಗಾರ: ಆನೇಕಲ್‌ನ ಗುಡ್ಡನಹಳ್ಳಿ ಎಂಬ ಚಿಕ್ಕ ಹಳ್ಳಿಯ ಬಿಂದು 7ನೇ ತರಗತಿಯಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದಾಳೆ. ಬೆಂಗಳೂರು ಶಿರಡಿ ಸಾಯಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಶನ್‌ ಎಂಜಿನಿಯರಿಂಗ್‌ನಲ್ಲಿ ಐದು ಚಿನ್ನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದು, ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ)ಯಲ್ಲಿ ಕಾರ್ಯನಿರ್ವಹಿಸಬೇಕೆಂಬ ಕನಸು ಕಂಡಿದ್ದಾಳೆ. ಬಿಇಯಲ್ಲಿ ಶೇ. 89.99, ಎಸ್ಸೆಸ್ಸೆಲ್ಸಿಯಲ್ಲಿ 95.36 ಹಾಗೂ ಪಿಯುನಲ್ಲಿ ಶೇ. 94ರಷ್ಟು ಅಂಕ ಗಳಿಸಿದ್ದಾಳೆ.

ಸಿಪಾಯಿ ಮಗಳು ಚಿನ್ನದ ಹುಡುಗಿ: ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸಿಪಾಯಿಯ ಮಗಳು ಮೂರು ಬಂಗಾರ ಪಡೆದುಕೊಂಡಿದ್ದಾಳೆ. ಇನ್‌ಫಾರ್ಮೇಶನ್‌ ಸೈನ್ಸ್‌ ಎಂಜಿನಿಯರಿಂಗ್‌ನಲ್ಲಿ ಬೆಂಗಳೂರಿನ ದಯಾನಂದ ಸಾಗರ ಕಾಲೇಜಿನ ಅಶ್ವಿ‌ನಿ ಎಲ್‌. ತಂದೆ-ತಾಯಿಗೆ ಒಬ್ಬಳೆ ಮಗಳು. ಸೈನ್ಯದಲ್ಲೆ ಸೇರಿ ದೇಶ ಸೇವೆ ಮಾಡಬೇಕೆಂಬ ಆಸೆ ಹೊಂದಿದ್ದಾಳೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ. 96, ಪಿಯುನಲ್ಲಿ ಶೇ. 94, ಬಿಇನಲ್ಲಿ ಶೇ. 83ರಷ್ಟು ಅಂಕ ಪಡೆದಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next