Advertisement
ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಮತ್ಸ್ಯತೀರ್ಥದಲ್ಲಿ ಬೇಸಗೆಯಲ್ಲೂ ಕಿಂಡಿ ಅಣೆಕಟ್ಟಿನ ನೀರೊಳಗೆ ಸರಾಗವಾಗಿ ತೇಲುತ್ತಿದ್ದ ಮಹಶೀರ್ ಜಾತಿಯ ದೇವರ ಮೀನುಗಳಿಗೆ ಮೂರು ವರ್ಷಗಳಿಂದ ತಾಪ ತಟ್ಟಿದೆ. ಈ ಬಾರಿಯೂ ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಕಾರಣ, ಕಿಂಡಿ ಕಟ್ಟಕ್ಕೆ ಹಲಗೆ ಜೋಡಿಸಿ, ನೀರನ್ನು ಹಿಡಿಟ್ಟುಕೊಳ್ಳುವ ಪ್ರಯತ್ನ ನಡೆದಿದೆ.
ಹೊಳೆಯ ಮೇಲ್ಭಾಗದ ಗುಡ್ಡ ಪ್ರದೇಶದಲ್ಲಿ ಹರಿಯುತ್ತಿದ್ದ ನೀರನ್ನು ಸಂಗ್ರಹಿಸಿ, ಪೈಪ್ ಮೂಲಕ ಮತ್ಸ್ಯತೀರ್ಥಕ್ಕೆ ಹರಿಸಲಾಗುತ್ತಿದೆ. ಮೂರು ವರ್ಷಗಳ ಹಿಂದೆ ಪ್ರಾಯೋಗಿಕವಾಗಿ ಆರಂಭವಾಗಿದ್ದ ಈ ಪ್ರಯತ್ನ ಈಗ ಯಶಸ್ಸು ಕಂಡಿದೆ. ಮತ್ಸ್ಯತೀರ್ಥದ ಬಳಿ ಎರಡು ಅಣೆಕಟ್ಟುಗಳಿವೆ. ಒಂದು ಸಣ್ಣದು. ಇನ್ನೊಂದು ದೊಡ್ಡದು. ಆರಂಭದಲ್ಲಿ ಸಣ್ಣ ಅಣೆಕಟ್ಟಿಗೆ ಹಲಗೆ ಜೋಡಿಸಲಾಗುತ್ತದೆ. ಅಲ್ಲಿಂದ ಹೊರ ಹೋಗುವ ನೀರು ಕೆಲವು ಮೀಟರ್‌ಗಳಷ್ಟು ದೂರದಲ್ಲಿರುವ ದೊಡ್ಡ ಅಣೆಕಟ್ಟಿನಲ್ಲಿ ಸಂಗ್ರಹವಾಗುತ್ತದೆ. ಮೊದಲನೆಯ ಕಿಂಡಿ ಅಣೆಕಟ್ಟಿನಲ್ಲಿ ಮೀನುಗಳ ಓಡಾಟ ಇರುತ್ತದೆ. ಸಣ್ಣ ಅಣೆಕಟ್ಟಿಗೆ ಬುಧವಾರ ಹಲಗೆ ಜೋಡಿಸಿದ್ದು, ಅದಕ್ಕೆ ಮಣ್ಣು ಹಾಕುವ ಕಾರ್ಯ ಭರದಿಂದ ಸಾಗಿದೆ. ಈ ಹೊಳೆಯಲ್ಲಿ ನೀರಿನ ಮಟ್ಟ ಕಳೆದ ಬಾರಿಗಿಂತ ಸಾಕಷ್ಟು ಕಡಿಮೆ ಆಗಿದೆ. 1999 ಮತ್ತು 2003ರಲ್ಲಿ ಭೀಕರ ಜಲಕ್ಷಾಮ ಆದಾಗ ಮೀನಿನ ಸಂತತಿಗೆ ತೀವ್ರ ತೊಂದರೆ ಉಂಟಾಗಿತ್ತು ಎಂದು ಸ್ಥಳೀಯರು ನೆನಪಿಸುತ್ತಾರೆ.
Related Articles
Advertisement
ಡಿಸೆಂಬರ್‌ನಲ್ಲಿ ಹೊಳೆಯ ಒಂದು ಬದಿಯಲ್ಲಿ ಪೈಪ್ ಅಳವಡಿಸಿ, ಅವುಗಳಿಗೆ ರಂಧ್ರ ಕೊರೆದು, ಹೊಳೆ ಭಾಗಕ್ಕೆ ನೀರನ್ನು ಚಿಮ್ಮಿಸಲಾಗುತ್ತದೆ. ನೀರಿನ ಮಟ್ಟ ಇಳಿಮುಖವಾದಂತೆ ಮೀನಿಗೆ ಆಮ್ಲಜನಕದ ಕೊರತೆ ಹಾಗೂ ಬಿಸಿಲಿನ ತಾಪತಟ್ಟದಂತೆ ಮಾಡಲು ಇದು ಸ್ಪ್ರಿಂಕ್ಲರ್‌ನಂತೆ ಕೆಲಸ ಮಾಡುತ್ತದೆ. ಈ ಕಾರ್ಯ ಈಗ ಪ್ರಗತಿಯಲ್ಲಿದೆ.
ಎರಡು ಭಾಗದಿಂದ ನೀರುಬೇಸಗೆ ಕಾಲದಲ್ಲಿ ಭಾಗಮಂಡಲ ಮೇಲ್ಭಾಗದ ಗುಡ್ಡದಿಂದ ಹರಿಯುವ ನೀರು ಬಳಸಿದರೆ, ಮಳೆಗಾಲದಲ್ಲಿ ಅದರ ಆವಶ್ಯಕತೆ ಇರುವುದಿಲ್ಲ. ದಿನದ ವ್ಯವಸ್ಥೆಗಾಗಿ ದೇವರಗುಂಡದಿಂದ ಹರಿದು ಬರುವ ನೀರನ್ನು ಪೈಪ್ ಮೂಲಕ ಇನ್ನೊಂದು ಟ್ಯಾಂಕಿಗೆ ಹರಿಸಿ ಬಳಸಲಾಗುತ್ತದೆ. ಮಳೆಗಾಲದಲ್ಲಿ ದೇವರಗುಂಡದಿಂದ ಬರುವ ನೀರು, ಬೇಸಗೆ ಕಾಲದಲ್ಲಿ ಗುಡ್ಡದಿಂದ ಬರುವ ನೀರು ಸದ್ಬಳಕೆಯಾಗುತ್ತಿದೆ. ಮೀನುಗಾರಿಕೆಗೆ ನಿಷೇಧ
ಮೀನುಗಾರಿಕೆ ಇಲಾಖೆ ಮತ್ಸ್ಯತೀರ್ಥ ಹೊಳೆಯ ವ್ಯಾಪ್ತಿಯ 3 ಕಿ.ಮೀ. ದೂರ ಮೀನುಗಾರಿಕೆಗೆ ನಿಷೇಧ ಹೇರಿದೆ. ಐದು ವರ್ಷದ ಹಿಂದೆ ಈ ಹೊಳೆಯಲ್ಲಿ ನೀರಿನ ಹರಿವಿನ ಪ್ರಮಾಣ ಅಧಿಕವಾಗಿತ್ತು. ಆದರೆ ಬೇಸಗೆಯ ಆರಂಭದಿಂದಲೇ ನೀರಿನ ಬರ ತಟ್ಟುವ ಕಾರಣ, ಹೊಳೆಯ ಅಲ್ಲಲ್ಲಿ ಒಡ್ಡುಗಳನ್ನು ನಿರ್ಮಿಸಿ ನೀರು ಸಂಗ್ರಹಿ ಸಲಾಗುತ್ತಿದೆ. ಪರಿಣಾಮ, ಮತ್ಸ್ಯತೀರ್ಥದ ಡ್ಯಾಂ ಬಳಿ ನೀರು ಗಣನೀಯ ಪ್ರಮಾಣದಲ್ಲಿ ಕುಸಿತ ಕಾಣುತ್ತದೆ. ಗುಡ್ಡದ ನೀರನ್ನು ಇದಕ್ಕೆ ಪರ್ಯಾಯವಾಗಿ ಬಳಸುವುದರಿಂದ ಅಭಾವ ಕಾಡುವುದಿಲ್ಲ. ಎಪ್ರಿಲ್, ಮೇ ತಿಂಗಳಲ್ಲಿ ಒರತೆ ಪ್ರಮಾಣ ಕ್ಷೀಣಿಸಿದರೂ ನಿಲುಗಡೆ ಆಗುವುದಿಲ್ಲ. ಮತ್ಸ್ಯತೀರ್ಥದಲ್ಲಿ ಸದಾ ನೀರಿರುವಂತೆ ಮಾಡಲು ಇದು ಅನುಕೂಲ ಕಲ್ಪಿಸಿದೆ. ದೇವಸ್ಥಾನದ ಬಳಿ ಕೊಳವೆ ಬಾವಿ ಕೊರೆಸಲಾಗಿದ್ದು, ಅದಕ್ಕೆ ಸಂಪರ್ಕ ಕಲ್ಪಿಸಿದರೆ, ಪ್ರಯೋಜನವಾದೀತು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಕಾರಣಿಕ ಕ್ಷೇತ್ರ
ತುಳು ಭಾಷೆಯಲ್ಲಿ ಪೆರುವೊಳ್ (ಮಹಶೀರ್) ಎಂದು ಕರೆಯುವ ಮೀನುಗಳು ಇಲ್ಲಿವೆ. ಇಲ್ಲಿನ ಶ್ರೀ ಮಲ್ಲಿಕಾರ್ಜುನ ದೇವರು ಮತ್ಸ್ಯವಾಹನವಾಗಿ ತೊಡಿಕಾನಕ್ಕೆ ಬಂದ ಕಾರಣ ಮತ್ಸ್ಯತೀರ್ಥವೆಂದೂ ಪ್ರಸಿದ್ಧಿ ಪಡೆದಿದೆ. ಕಣ್ವಮುನಿಗಳ ಪ್ರಾರ್ಥನೆಯ ಮೇರೆಗೆ ಮಹಾವಿಷ್ಣುವೇ ಮತ್ಸ್ಯನಾಗಿ ಇಲ್ಲಿ ನೆಲೆ ನಿಂತಿದ್ದಾನೆ ಎಂಬ ನಂಬಿಕೆ ಇದೆ. ದೇವರ ನೈವೇದ್ಯ, ಭಕ್ತರು ಅಕ್ಕಿಯ ಅರಳು ಇತ್ಯಾದಿಗಳನ್ನು ಮೀನುಗಳಿಗೆ ಆಹಾರವಾಗಿ ಹಾಕುತ್ತಾರೆ. ರಕ್ಷಣೆಗೆ ಕ್ರಮ
ಹೊಳೆಯ ಮೇಲ್ಭಾಗದಲ್ಲಿ ಅಲ್ಲಲ್ಲಿ ನಿರ್ಮಿಸಲಾದ ಒಡ್ಡಿನ ಸಂಖ್ಯೆ ಹೆಚ್ಚಳವಾಗಿರುವ ಕಾರಣ, ಮತ್ಸ್ಯ ತೀರ್ಥದ ಬಳಿ ನೀರಿನ ಮಟ್ಟ ಇಳಿಮುಖ ಕಂಡಿದೆ. ಆದರೆ ಕಾಡಿನಂಚಿನಿಂದ ಹರಿದು ಬರುವ ನೀರನ್ನು ಟ್ಯಾಂಕ್ ಮೂಲಕ ಸಂಗ್ರಹಿಸಿ, ಡ್ಯಾಮ್‌ಗೆ ಹರಿಸಿ ದೇವರ ಮೀನುಗಳಿಗೆ ರಕ್ಷಣೆ ನೀಡಲಾಗಿದೆ. ಮತ್ಸ್ಯತೀರ್ಥದಲ್ಲಿ ನೀರಿನ ಅಭಾವ ಆಗದಂತೆ ಎಚ್ಚರ ವಹಿಸಲಾಗಿದೆ.
–ಆನಂದ ಗೌಡ ತೊಡಿಕಾನ,
ವ್ಯವಸ್ಥಾಪಕರು, ಶ್ರೀ ಕ್ಷೇತ್ರ ಕಿರಣ್ ಪ್ರಸಾದ್ ಕುಂಡಡ್ಕ