Advertisement

ಅನುಭವ ಆಧಾರಿತ ಶಿಕ್ಷಣವೇ ಎನ್‌ಇಪಿ ಗುರಿ: ರಾಜೇಶ್‌ ಪ್ರಸಾದ್‌ ಹಿರಿಯಡ್ಕ

01:34 AM Apr 20, 2022 | Team Udayavani |

ಉಡುಪಿ: ಅನುಭವ ಆಧಾರಿತ ಪ್ರಾಯೋಗಿಕ ಶಿಕ್ಷಣದ ಮೂಲಕ ಕುಶಲ (ಸ್ಕಿಲ್ಡ್‌) ಪ್ರಜೆಗಳನ್ನು ರೂಪಿಸುವುದು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯ ಗುರಿ ಎಂದು ಹಿರಿಯ ಐಎಎಸ್‌ ಅಧಿಕಾರಿಯಾಗಿದ್ದು ದಿಲ್ಲಿ ರಾಜ್ಯದ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಉಡುಪಿ ಮೂಲದ ರಾಜೇಶ್‌ ಪ್ರಸಾದ್‌ ಹಿರಿಯಡ್ಕ ತಿಳಿಸಿದ್ದಾರೆ. ಅವರೊಂದಿಗೆ “ಉದಯವಾಣಿ’ ನಡೆಸಿದ ಸಂದರ್ಶನ ಇಂತಿದೆ.

Advertisement

 ಎನ್‌ಇಪಿ ಅನುಷ್ಠಾನದಿಂದ ಗ್ರಾಮೀಣ ಶಾಲೆಗಳಿಗೆ ಯಾವ ರೀತಿ ಕಾಯಕಲ್ಪ ಸಿಗಲಿದೆ ?
ಎನ್‌ಎಇಪಿ ದೂರದೃಷ್ಟಿಯ ಯೋಜನೆಯಾಗಿದ್ದು, ಗ್ರಾಮೀಣ ಮತ್ತು ನಗರ ಎಂಬ ವರ್ಗೀಕರಣವಿಲ್ಲದೆ ದೇಶದ ಎಲ್ಲ ಶಾಲೆಗಳು ಸುಧಾರಣೆಯಾಗಲಿವೆ. ಹೊಸ ಪಠ್ಯ ಕ್ರಮದೊಂದಿಗೆ 18 ವರ್ಷದವರೆಗೆ ಶಿಕ್ಷಣ ಕಡ್ಡಾಯವಾಗಿ ಅನುಷ್ಠಾನವಾಗ ಲಿದೆ. ಮಗುವಿನ ಮೊದಲ ಹಂತದ ಶಿಕ್ಷಣಕ್ಕೆ ಇಲ್ಲಿ ವಿಶೇಷ ಒತ್ತು ನೀಡಲಾ ಗುತ್ತದೆ. ಅಂಗನವಾಡಿ, ಬಾಲವಾಡಿ ಶಿಕ್ಷಣ ಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಮಗು 3ರಿಂದ 11 ವರ್ಷದ ವರೆಗೆ ಮಾನಸಿಕವಾಗಿ ಅತ್ಯು ತ್ತಮ ಕಲಿಕಾ ಕ್ರಮದಲ್ಲಿ ಬೆಳೆಯಬೇಕು. ಆರಂಭ ಸರಿ ಇಲ್ಲದಿದ್ದರೆ ಕಿರಿಯ, ಪ್ರಾಥಮಿಕ, ಪ್ರೌಢಶಾಲೆ ಹಂತದಲ್ಲಿ ಮಗು ಶೈಕ್ಷಣಿಕ ಹಿನ್ನಡೆಗೊಳಗಾಗಲಿದೆ. ಪ್ರಸ್ತುತ ದೇಶದಲ್ಲಿ ಡ್ರಾಪ್‌ಔಟ್‌ ಪ್ರಮಾಣ ಶೇ. 40ರಷ್ಟಿದೆ. ಈ ನೆಲೆಯಲ್ಲಿ ಇಸಿಸಿ (ಅರ್ಲಿ ಚೈಲ್ಡ್‌ಹುಡ್‌ ಕೇರ್‌) ಸದೃಢಗೊಳಿಸುವ ಅಂಶಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಪಠ್ಯಕ್ರಮದಲ್ಲಿ ಯಾವ ರೀತಿ ಬದಲಾವಣೆ ಆಗಲಿದೆ ?
ನ್ಯಾಶನಲ್‌ ಕೌನ್ಸಿಲ್‌ ಆಫ್ ಎಜುಕೇಶನ್‌ ಪಠ್ಯಕ್ರಮದ ಫ್ರೆàಂವರ್ಕ್‌ ತಯಾರಿಸಿದೆ. ಆಯಾ ರಾಜ್ಯ ಮಟ್ಟದಲ್ಲಿ ಸ್ಥಳೀಯ ಪಠ್ಯಕ್ರಮಕ್ಕೆ ಅನುಗುಣವಾಗಿ ಅಂಶಗಳನ್ನು ಸಂಯೋಜಿಸಿ ಪಠ್ಯ ತಯಾರಿ ಮಾಡುವುದು, ಆಟದ ಮೂಲಕ ಮಕ್ಕಳಿಗೆ ಜ್ಞಾನ ಉಣಬಡಿಸುವುದು ಇದರಲ್ಲಿನ ವಿಶೇಷ ಅಂಶ. ಸಂವಹನ, ಜೀವನ ಕೌಶಲ ಪಾಠಗಳನ್ನು ಮಕ್ಕಳು ಕಲಿಯುತ್ತಾರೆ.

ಕೆಲವು ರಾಜ್ಯಗಳು ಎನ್‌ಇಪಿಗೆ ಅಸಹಕಾರ ತೋರುತ್ತಿದ್ದು, ಶೈಕ್ಷಣಿಕ ಏಕರೂಪತೆಗೆ ಧಕ್ಕೆ ಆಗಲಿದೆಯೆ ?
ಕೆಲವು ಕಡೆ ರಾಜಕೀಯ ಭಿನ್ನಮತ ಇರಬಹುದು. ಆದರೆ ಶಿಕ್ಷಣ ವ್ಯವಸ್ಥೆ ಸುಧಾರಣೆ ಅಗತ್ಯವಾಗಿರುವುದರಿಂದ ಪ್ರತೀ ಪ್ರಜೆ, ಎಲ್ಲ ರಾಜಕೀಯ ಪಕ್ಷಗಳೂ ಸಹಕಾರ ಕೊಡಲಿವೆ. ಎನ್‌ಇಪಿ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹೆಮ್ಮೆಯ ವಿಚಾರ. ಡಾ| ಕಸ್ತೂರಿ ರಂಗನ್‌ ಅಧ್ಯಕ್ಷತೆಯಲ್ಲಿ ವಿಚಾರ, ವಿಮರ್ಶೆ, ಅಧ್ಯಯನ ನಡೆದು ವರದಿ ತಯಾರಿಸಲಾಗಿದೆ ಹಾಗೂ ಸಾರ್ವಜನಿಕ ಚರ್ಚೆ, ಸಂವಾದಗಳಿಗೂ ಅವಕಾಶ ಮಾಡಿಕೊಡಲಾಗಿದೆ. 2040ರ ವರೆಗೆ ದೇಶದ ಶೈಕ್ಷಣಿಕ ವ್ಯವಸ್ಥೆ ಹೇಗೆ ರೂಪುಗೊಳ್ಳಬೇಕು ಎಂಬ ಸ್ಪಷ್ಟ ದೃಷ್ಟಿಯನ್ನು ಎನ್‌ಇಪಿ ಹೊಂದಿದೆ.

ದಿಲ್ಲಿ ಮಾದರಿ ಶಿಕ್ಷಣ ಈಗ ಎಲ್ಲೆಡೆ ಸುದ್ದಿ ಆಗುತ್ತಿದೆ. ಇದು ಹೇಗೆ ಸಾಧ್ಯವಾಯಿತು ?
ದಿಲ್ಲಿ ಮಾದರಿ ಶಿಕ್ಷಣ ದೇಶಾದ್ಯಂತ ಹೊಸ ಕ್ರಾಂತಿ ಸೃಷ್ಟಿಸಿದೆ. ಶಾಲೆಗಳಲ್ಲಿ ಮೂಲ ಸೌಕರ್ಯ, ಡಿಜಿಟಲ್‌ ತರಗತಿ ಕೊಠಡಿ, ಸಮವಸ್ತ್ರ, ಶಿಕ್ಷಕರ ನೇಮಕಾತಿಯನ್ನು ವ್ಯವಸ್ಥಿತವಾಗಿ ರೂಪಿಸಲಾಗಿದೆ. ಖಾಸಗಿ ವಲಯಕ್ಕಿಂತ ಒಂದು ಹೆಜ್ಜೆ ಮುಂದೆಯೇ ಸರಕಾರಿ ಶಾಲೆಗಳು ಸುಧಾರಣೆಯಾಗಿವೆ. ಪಾಠ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗೆ ಸಮಾನ ಆದ್ಯತೆ ನೀಡಲಾಗುತ್ತಿದೆ. ಶಿಕ್ಷಕರಿಗೆ ಆಗಾಗ ಗುಣಮಟ್ಟದ ತರಬೇತಿ ನಡೆಯುತ್ತಿದೆ. ಮುಖ್ಯ ಶಿಕ್ಷಕರು, ಪ್ರಾಂಶುಪಾಲರನ್ನು ಕೇಂಬ್ರಿಡ್ಜ್, ಹಾರ್ವರ್ಡ್‌ ವಿ.ವಿ.ಗೆ ಕಳುಹಿಸಿ ಮ್ಯಾನೇಜ್‌ಮೆಂಟ್‌, ಕಲಿಕಾ ಗುಣಮಟ್ಟ ನಿರ್ವಹಿಸುವ ತರಬೇತಿ ಕೊಟ್ಟಿದ್ದೇವೆ.

Advertisement

 ದಿಲ್ಲಿ ಮಾದರಿಯಲ್ಲಿ ಕರ್ನಾಟಕದ ಸರಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯವೇ?
ಕರ್ನಾಟಕ ವಿಶಾಲವಾಗಿದ್ದು ಅಭಿವೃದ್ಧಿ ಪಥದಲ್ಲಿರುವ ರಾಜ್ಯವಾ ಗಿದೆ. ಇಲ್ಲಿನ ಶಿಕ್ಷಣ, ಕೈಗಾರಿಕೆ, ಕೃಷಿ,ಐಟಿ ಕ್ಷೇತ್ರ ಜಗತ್ತಿನ ಗಮನ ಸೆಳೆಯು ತ್ತದೆ. ದಿಲ್ಲಿ ಮತ್ತು ಕರ್ನಾಟಕ ಭಿನ್ನವಾ ಗಿದ್ದು ಶಿಕ್ಷಣ ಕ್ಷೇತ್ರಕ್ಕೆ ಹೋಲಿಕೆ ಸಾಧ್ಯವಿಲ್ಲ. ಇಲ್ಲಿಯೂ ಸರಕಾರಿ, ಖಾಸಗಿ ಶಾಲೆಗಳು ಸಾಕಷ್ಟು ಸುಧಾರಣೆಗೊಳ ಪಟ್ಟು ಉತ್ತಮ ಶಿಕ್ಷಣ ನೀಡುತ್ತಿವೆ.

ಮಕ್ಕಳ ಸಮಗ್ರ ಅಭಿವೃದ್ಧಿಗೆ ಎನ್‌ಇಪಿ ಹೇಗೆ ಸಹಕಾರಿ?
ಮಕ್ಕಳಲ್ಲಿರುವ ಕ್ರಿಯಾಶೀಲತೆ, ಪ್ರತಿಭೆಯನ್ನು ಮೊದಲು ಪತ್ತೆ ಮಾಡಿ ಶಿಕ್ಷಣದೊಂದಿಗೆ ಪೂರಕ ಕೌಶಲ ನೀಡುವ ಮೂಲಕ ಉತ್ತಮ ನಾಗರಿಕನನ್ನಾಗಿಸುವುದು ಎನ್‌ಇಪಿ ಉದ್ದೇಶ. ಅನುಭವ ಆಧಾರಿತ ಕಲಿಕೆಗೆ ಒತ್ತು ನೀಡಲಾಗುತ್ತದೆ. ಆತ ಮುಂದೆ ಕುಶಲ ಉದ್ಯೋಗಿಯಾಗಬೇಕು, ಉತ್ತಮ ಪ್ರಜೆಯಾಗಬೇಕೆಂಬ ಗುರಿ ಇರಿಸಿಕೊಳ್ಳಲಾಗಿದೆ.

– ಅವಿನ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next