Advertisement

50 ಸಾವಿರ ಕೃಷಿ ಹೊಂಡ ನಿರ್ಮಾಣ ಗುರಿ

03:21 PM Mar 01, 2017 | |

ಹುಬ್ಬಳ್ಳಿ: ಕೃಷಿ ಹೊಂಡ ನಿರ್ಮಾಣಕ್ಕೆ ಬೇಡಿಕೆ ಹೆಚ್ಚುತ್ತಿದ್ದು, ಜೂನ್‌ ವೇಳೆಗೆ ರಾಜ್ಯಾದ್ಯಂತ ಇನ್ನೂ 50,000 ಕೃಷಿ ಹೊಂಡ ನಿರ್ಮಾಣ ಮಾಡುವ ಉದ್ದೇಶವಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು. ಕುಂದಗೋಳ ತಾಲೂಕಿನ ಶಿಶ್ವಿ‌ನಹಳ್ಳಿ ಗ್ರಾಮದ ನಿಂಗಪ್ಪ ದಿಡ್ಡಿ ಅವರ ಹೊಲದಲ್ಲಿ ನಿರ್ಮಿಸಿದ ಕೃಷಿ ಹೊಂಡ ವೀಕ್ಷಿಸಿದ ನಂತರ ಅವರು ಮಾತನಾಡಿದರು.

Advertisement

ಕಳೆದ ವರ್ಷ ಒಟ್ಟು 1 ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದ್ದು, ಮಾರ್ಚ್‌ ವೇಳೆಗೆ 30,000 ಹಾಗೂ ಮಾರ್ಚ್‌ನಿಂದ ಮೇ ವರೆಗೆ ಇನ್ನೂ 20,000 ಕೃಷಿ ಹೊಂಡಗಳನ್ನು ನಿರ್ಮಿಸಲಾಗುವುದು. ಮುಂಗಾರು ಮಳೆ ಆರಂಭವಾಗುವ ವೇಳೆಗೆ ರಾಜ್ಯದಲ್ಲಿ ಒಟ್ಟು 1.5 ಲಕ್ಷ ಕೃಷಿ ಹೊಂಡ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು. 

ನವಲಗುಂದ ಕ್ಷೇತ್ರದಲ್ಲಿ 1300 ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಹೆಚ್ಚಿನ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ರೈತರು ಮುಂದೆ ಬಂದಿದ್ದಾರೆ. ಹಣಕಾಸು ವರ್ಷ ಮುಗಿಯುವ ಮುನ್ನ ಮಾರ್ಚ್‌ 20ರವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಹೊಂಡ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.

ಇನ್ನೂ 1000 ಕೃಷಿ ಹೊಂಡ ನಿರ್ಮಿಸಿದರೂ ಅನುದಾನ ನೀಡಲು ಸರ್ಕಾರ ಸಿದ್ಧವಿದೆ ಎಂದರು. ಈ ಭಾಗದಲ್ಲಿ ತೀವ್ರ ಬರದ ಸ್ಥಿತಿಯಿದೆ. ಕಳೆದ ವರ್ಷ ಈ ಭಾಗದಲ್ಲಿ ಮಳೆ ಕೊರತೆ ಪ್ರಮಾಣ ವಾಡಿಕೆಗಿಂತ ಶೇ.40ಕ್ಕಿಂತ ಹೆಚ್ಚಾಗಿದ್ದರಿಂದ ಕೃಷಿ ಹೊಂಡ ಮಾಡಿಕೊಂಡರೂ ಕೆಲ ರೈತರಿಗೆ ಪ್ರಯೋಜನವಾಗಿಲ್ಲ. ಆದರೆ ನಿರೀಕ್ಷಿತಪ್ರಮಾಣದ ಮಳೆ ಸುರಿದ ಭಾಗಗಳಲ್ಲಿ ರೈತರಿಗೆ ಅನುಕೂಲವಾಗಿದೆ.

ನರಗುಂದ ಭಾಗದಲ್ಲಿ ರೈತರು ಕಡಲೆ, ಹೆಸರು ಬೆಳೆದುಕೊಂಡಿದ್ದಾರೆ. ಪಂಪ್‌ಸೆಟ್‌ ಹಾಗೂ ತುಂತುರು ನೀರಾವರಿ ವ್ಯವಸ್ಥೆ ಕಡ್ಡಾಯ ಮಾಡಿದ್ದರಿಂದ ಕಡಿಮೆ ಪ್ರಮಾಣದ ನೀರು ಬಳಕೆ ಮಾಡಿ ಹೆಚ್ಚು ಬೆಳೆಗೆನೀರುಣಿಸಬಹುದಾಗಿದೆ. ಇದೊಂದು ಉತ್ತಮ ಯೋಜನೆಯಾಗಿದ್ದು, ಈ ಬಾರಿ ಉತ್ತಮ ಪ್ರಮಾಣದ ಮಳೆ ಸುರಿದರೆ ಕೃಷಿ ಹೊಂಡಗಳ ಮಹತ್ವ ರೈತರಿಗೆ ಗೊತ್ತಾಗಲಿದೆ ಎಂದು ವಿವರಿಸಿದರು.

Advertisement

ಕೃಷಿ ವಿವಿಗಳ ವರದಿ: ಕೃಷಿ ಹೊಂಡಗಳಿಂದ ಕೃಷಿ ಉತ್ಪನ್ನ ಹಾಗೂ ಆದಾಯದ ಮೇಲಾಗುವ ಪರಿಣಾಮವನ್ನು ತಿಳಿದುಕೊಳ್ಳಲು ಅಧ್ಯಯನ ನಡೆಸಿ ವರದಿ ನೀಡುವಂತೆ ಬೆಂಗಳೂರು,ಧಾರವಾಡ, ಶಿವಮೊಗ್ಗ ಹಾಗೂ ರಾಯಚೂರು ಕೃಷಿ ವಿಶ್ವವಿದ್ಯಾಲಯಗಳಿಗೆ ಮನವಿ ಮಾಡಲಾಗಿದೆ. ಈಗಾಗಲೇ ಶಿವಮೊಗ್ಗ ವಿಶ್ವವಿದ್ಯಾಲಯ ಪ್ರಾಥಮಿಕ ವರದಿ ನೀಡಿದೆ.

ಉಳಿದ ವಿಶ್ವವಿದ್ಯಾಲಯಗಳುಕೂಡ ವರದಿ ನೀಡಲಿವೆ. ವರದಿಯನ್ನು ಪರಿಗಣಿಸಿ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.  ಸಾಲಮನ್ನಾ ಕುರಿತು ರೈತರು ಮನವಿ ಮಾಡುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇನೆ. ರಾಜ್ಯದಲ್ಲಿ ರೈತರು 45,000 ಕೋಟಿ ರೂ. ಸಾಲ ಪಡೆದಿದ್ದು, ಅದರಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ 35,000 ಕೋಟಿ ರೂ. ಹಾಗೂ 10,000 ಕೋಟಿ ರೂ.ಸಹಕಾರಿ ಬ್ಯಾಂಕ್‌ಗಳಿಂದ ಪಡೆದುಕೊಂಡಿದ್ದಾರೆ. 

ಆದ್ದರಿಂದ ಕೇಂದ್ರ ಸರ್ಕಾರ ರೈತರ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ಮಾಡಿದರೆ, ರಾಜ್ಯ ಸರ್ಕಾರ ಸಹಕಾರ ಬ್ಯಾಂಕ್‌ಗಳಲ್ಲಿನ ಸಾಲವನ್ನು ಮನ್ನಾ ಮಾಡಲಿದೆ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ರೈತರೊಬ್ಬರು ಸಚಿವರಿಗೆ ಮನವಿ ಮಾಡಿ, ತೀವ್ರ ಬರ ಸ್ಥಿತಿಯಿದ್ದು, 5 ಎಕರೆಗಿಂತ ಕಡಿಮೆ ಜಮೀನು ಹೊಂದಿದ ರೈತರಿಗೆ ತಲಾ 2 ಲಕ್ಷ ರೂ. ಪರಿಹಾರ ನೀಡಬೇಕೆಂದು ಕೋರಿದರು.

ಮತ್ತೂಬ್ಬ ರೈತರು ಕೃಷಿ ಹೊಂಡಗಳಿಗೆ ತಂತಿ ಬೇಲಿ ಹಾಕಿಕೊಡಬೇಕೆಂದು ಮನವಿ ಮಾಡಿದರು. ಆದರೆ ಇದಕ್ಕೆ ಸಚಿವ ಕೃಷ್ಣ ಭೈರೇಗೌಡ ಯಾವುದೇ ಪ್ರತಿಕ್ರಿಯೆ ನೀಡದೇನಿರ್ಗಮಿಸಿದರು. ಈ ಸಂದರ್ಭದಲ್ಲಿ ಶಾಸಕ ಎನ್‌.ಎಚ್‌. ಕೋನರಡ್ಡಿ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ತಹಶೀಲ್ದಾರ ನವೀನ್‌ ಹುಲ್ಲೂರ, ಮಣಕವಾಡದ ಅನ್ನದಾನೇಶ್ವರ ಮಠದ ಸಿದ್ದರಾಮದೇವರು, ಪುರಸಭೆ ಅಧ್ಯಕ್ಷರು ಹಾಗೂ ಸದಸ್ಯರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next