ಬೆಂಗಳೂರು: ವಿಜ್ಞಾನ ಶಿಕ್ಷಣದಲ್ಲಿ ಭಾರತ ಇನ್ನೂ ತನ್ನ ನಿರ್ದಿಷ್ಟ ಗುರಿ ತಲುಪಿಲ್ಲ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ. ಸಿದ್ದಪ್ಪ ಕಳವಳ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಬುಧವಾರ ಜ್ಞಾನಜ್ಯೋತಿ ಸಭಾಂಗಣ ಸೆನೆಟ್ ಹಾಲ್‌ನಲ್ಲಿ ಆಯೋಜಿಸಿದ್ದ “ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಆಧಾರಿತ ಬೋಧನೆ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಸಾಧನೆ ಮಾಡಿದ್ದರೂ ವಿಜ್ಞಾನ ಶಿಕ್ಷಣದಲ್ಲಿ ನಿರ್ಧಿಷ್ಟ ಗುರಿಯನ್ನು ಇನ್ನೂ ತಲುಪಿಲ್ಲ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಬಹಳ ಪರಿಣಾಮಕಾರಿಯಾಗಿ ಬಳಕೆಯಾಗುತ್ತಿರುವುದು ಅಮೆರಿಕದಲ್ಲಿ. ಆ ದೇಶ ಶಾಲಾ, ಕಾಲೇಜುಗಳ ಬೋಧನಾ ಪದ್ಧತಿ ಸೇರಿದಂತೆ ಎಲ್ಲೆಡೆಯೂ ಐಸಿಟಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಆದರೆ, ಭಾರತ ಇನ್ನೂ ಶಿಕ್ಷಣ ವ್ಯವಸ್ಥೆಯಲ್ಲಿ ಐಟಿಸಿಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲು ಸಾಧ್ಯವಾಗಿಲ್ಲ ಎಂದರು.
ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಬಿಇಡಿ ಕಾಲೇಜುಗಳು ತಕ್ಕ ಮಟ್ಟಿನ ಐಸಿಟಿ ಬೋಧನಾ ಕ್ರಮಗಳನ್ನು ಅಳವಡಿಸಿಕೊಂಡಿದ್ದರೂ, ಶಿಕ್ಷಕರ ತರಬೇತಿ ವಿಚಾರದಲ್ಲಿ ಹಿಂದೆ ಬಿದ್ದಿವೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಯನ್ನು ಸರಿಪಡಿಸಕೊಳ್ಳಬೇಕು. ಶಿಕ್ಷಕರು ಕೇವಲ ಸೀಮಿತ ಪುಸ್ತಕದಲ್ಲಿ ಪಠ್ಯ ಬೋಧಿಸುವುದಲ್ಲ. ಇ-ಬುಕ್, ಇಂಟರ್‌ನೆಟ್ ಸೇರಿದಂತೆ ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ಬಳಸುವ ಹಾಗೂ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಇಂದಿನ ಶಿಕ್ಷಕರು ಕೇವಲ ಪಠ್ಯಕ್ರಮ ಪೂರ್ಣಗೊಳಿಸುವ ತರಾತುರಿಯಲ್ಲಿರುತ್ತಾರೆ. ಮಕ್ಕಳು ತಮಗೆ ಆಸಕ್ತಿ ಇರುವ ಕ್ಷೇತ್ರವನ್ನು ವ್ಯಾಸಂಗಕ್ಕೆ ಆಯ್ಕೆ ಮಾಡುತ್ತಿಲ್ಲ. ಪೋಷಕರ ಒತ್ತಡಕ್ಕೆ ಅವರು ಸೂಚಿಸಿದ ವಿಷಯವನ್ನು ಅಧ್ಯಯನ ಮಾಡುತ್ತಿದ್ದಾರೆ. ವಿಜ್ಞಾನ ಶಿಕ್ಷಣದ ಮಹತ್ವವನ್ನು ಮಕ್ಕಳಿಗೆ ತಿಳಿಸುವಲ್ಲಿ ಪೋಷಕರು ಹಾಗೂ ಶಿಕ್ಷಕರು ವಿಫಲರಾಗುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಕುಸಿಯುತ್ತಿದೆ. ವಿಜ್ಞಾನ ಶಿಕ್ಷಣ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು ವೈದ್ಯಕೀಯ ಇಲ್ಲವೇ ಇಂಜಿನಿಯರಿಂಗ್ ಪ್ರವೇಶ ಪಡೆಯಲು ಮಾತ್ರ ಎನ್ನುವಂತಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
2 ವರ್ಷಕ್ಕೆ ಹೆಚ್ಚಳ: ಬೆಂಗಳೂರು ವಿವಿ ಕುಲಪತಿ ಡಾ.ಬಿ. ತಿಮ್ಮೇಗೌಡ ಮಾತನಾಡಿ, ಬಿಇಡಿ ವ್ಯಾಸಂಗಕ್ಕೆ ಇದ್ದ ಕಾಲ ಮಿತಿಯನ್ನು ಸರ್ಕಾರ ಕಳೆದ ವರ್ಷದಿಂದ ಎರಡು ವರ್ಷಕ್ಕೆ ಹೆಚ್ಚಿಸಿದೆ. ಹಾಗಾಗಿ ಬಿ.ಇಡಿ ವ್ಯಾಸಂಗದಲ್ಲಿ ಹೆಚ್ಚಾಗಿ ವಿಜ್ಞಾನ ವಿಷಯಗಳನ್ನು ಪರಿಚಯಿಸುವ ಕೆಲಸವಾಗಬೇಕು. ಇದರಿಂದ ಬಿಇಡಿ ವ್ಯಾಸಂಗ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಎನ್‌ಸಿಇಆರ್‌ಟಿ ಮಾಜಿ ನಿರ್ದೇಶಕ ಡಾ. ರವೀಂದ್ರ, ಬೆಂಗಳೂರು ವಿವಿ ಐಕ್ಯುಎಸಿ ನಿರ್ದೇಶಕ ಪ್ರೊ.ಬಿ.ಸಿ. ಪ್ರಭಾಕರ್, ಶಿಕ್ಷಣ ನಿಖಾಯದ ಡೀನ್ ಪ್ರೊ. ಸುಂದರರಾಜ್ ಅರಸ್ ಉಪಸ್ಥಿತರಿದ್ದರು.