ಬೆಂಗಳೂರು: ಗಾರ್ಡನ್ ಸಿಟಿಯ ಗತಕಾಲದ ವೈಭವವನ್ನು ಮರಳಿ ತರುವುದು ನನ್ನ ಪ್ರಮುಖ ಗುರಿಯಾಗಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಮತದಾನದ ದಿನ ಹತ್ತಿರವಾಗುತ್ತಿರುವಂತೆ ತಮ್ಮ ಪ್ರಚಾರ ಬಿರುಸುಗೊಳಿಸಿರುವ ಹರಿಪ್ರಸಾದ್, ಸೋಮವಾರ ಪದ್ಮನಾಭನಗರ, ಬೊಮ್ಮನಹಳ್ಳಿ ಹಾಗೂ ಗೋವಿಂದರಾಜ ನಗರದಲ್ಲಿ ಭರ್ಜರಿ ಪ್ರಚಾರ ನಡೆಸಿದರು.
ಬೆಳಗ್ಗೆ ಪದ್ಮನಾಭನಗರದ ಚಿಕ್ಕಲ್ಲಸಂದ್ರ ದೇವಸ್ಥಾನದಿಂದ ಪ್ರಾರಂಭವಾದ ರೋಡ್ ಶೋ, ಪದ್ಮನಾಭನಗರ ಕ್ಷೇತ್ರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಮಧ್ಯಾಹ್ನ ಬೊಮ್ಮನಹಳ್ಳಿ ವೃತ್ತದ ಬಳಿ ಇರುವ ಎಚ್.ಪಿ.ಪವರ್ ಕನ್ವೆನ್ಷನ್ ಸೆಂಟರ್‌ನಲ್ಲಿ ಕರ್ನಾಟಕ ಬಹುಜನ ಸಂಘರ್ಷ ಸಮಿತಿ ಮುಖಂಡರ ಸಭೆಯಲ್ಲಿ ಹರಿಪ್ರಸಾದ್ ಭಾಗವಹಿಸಿದ್ದರು.
ಸಂಜೆ ರಾಜಾಜಿನಗರದ 6ನೇ ಬ್ಲಾಕ್‌ನ ಬಿಬಿಎಂಪಿ ಸಮುದಾಯ ಭವನದ ಬಳಿ ಇರುವ ಗಣೇಶ ದೇವಸ್ಥಾನದಿಂದ ಪ್ರಾರಂಭವಾದ ರೋಡ್ ಶೋ, ಗೋವಿಂದರಾಜ ನಗರ ವಿಕ್ಷೇತ್ರಗಳಲ್ಲಿ ಸಾಗಿತು. ಮತಯಾಚನೆ ವೇಳೆ ಮಾತನಾಡಿದ ಅವರು, ಬೆಂಗಳೂರು ನಗರ, ಅದರಲ್ಲೂ ದಕ್ಷಿಣ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ನನ್ನದೇ ಆದ ಕನಸುಗಳಿವೆ.
ಬೆಂಗಳೂರು ದಕ್ಷಿಣ ಇಂದು ವಿದೇಶಗಳಲ್ಲೂ ಹೆಸರಾಗಿದೆ. ಈ ಭಾಗದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಜತೆಗೆ ಇನ್ನೂ ಹಲವು ಯೋಜನೆಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಗಮನ ಸೆಳೆದು ಅನುದಾನ ತರುವುದು ನನ್ನ ಜವಾಬ್ದಾರಿ ಎಂದರು.
ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಲಾಲ್‌ಬಾಗ್ ಮಾದರಿಯ ಪಾರ್ಕ್ ನಿರ್ಮಿಸಲು ಅಗತ್ಯ ಸ್ಥಳಾವಕಾಶವಿದೆ. ಈ ರೀತಿಯ ಉದ್ಯಾನ ನಿರ್ಮಿಸುವ ಮೂಲಕ “ಗಾರ್ಡನ್ ಸಿಟಿ’ ಹೆಸರು ಮತ್ತೆ ಮರುಕಳಿಸುವಂತೆ ಮಾಡುವುದು ನನ್ನ ಗುರಿಯಾಗಿದೆ ಎಂದರು.
ನಗರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಮೇಕೆದಾಟು ಬಳಿ ನಿರ್ಮಿಸಲು ಚಿಂತಿಸಲಾಗಿರುವ ಅಣೆಕಟ್ಟೆಯಿಂದ ನೀರು ತರುವುದು ಸೂಕ್ತ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಬಿ.ಕೆ. ಹರಿಪ್ರಸಾದ್ ಅವರ ಪರವಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ನಡೆಸಿದ ಬೈಕ್ ರ್ಯಾಲಿ ಎಲ್ಲರ ಗಮನ ಸೆಳೆಯಿತು.