ಹುಣಸೂರು: ಗುರಿ, ಧೈರ್ಯ, ಬದ್ಧತೆ ಇದ್ದಲ್ಲಿ ಎಂತವರೂ ಶಿಖರ ಏರಬಹುದೆಂದು ಎವರೆಸ್ಟ್ ಏರುವ ಮೂಲಕ ಕನ್ನಡ ನಾಡಿಗೆ ಹೆಮ್ಮೆ ತಂದಿರುವ ನಾಗರಹೊಳೆ ಅರಣ್ಯ ರಕ್ಷಕ ವಿಕ್ರಂ ಅಭಿಪ್ರಾಯಪಟ್ಟರು.
ನಗರದ ಮಹಿಳಾ ಸರಕಾರಿ ಪದವಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರ ವಿಭಾಗವು ಆಯೋಜಿಸಿದ್ದ ಭೂ ವಿಜ್ಞಾನ ವೇದಿಕೆ ಉದ್ಘಾಟನಾ ಸಮಾರಂಭದಲ್ಲಿ ಎವರೆಸ್ಟ್ ಅವರೋಹಣ ಕುರಿತ ಪಿಪಿಟಿ ಮೂಲಕ ಅನುಭವಗಳನ್ನು ಹಂಚಿಕೊಂಡ ಅವರು ತಮ್ಮ 9ವರ್ಷಗಳ ಎವರೆಸ್ಟ್ ಏರುವ ಕನಸು ನನಸಾಗಿಸಿಕೊಂಡಿದ್ದೇನೆ.
ನನ್ನ ಕನಸಿನಲ್ಲೂ ಎವರೆಸ್ಟ್ ಕಾಡುತ್ತಿತ್ತು, ನೇಪಾಳ ಮೂಲಕ ಎವರೆಸ್ಟ್ ಶಿಖರವನ್ನು ವಿವಿಧ ರಾಜ್ಯಗಳ 24 ಮಂದಿಯೊಂದಿಗೆ ಕ್ಲಿಷ್ಟಕರ ವಾತಾವರಣದಲ್ಲಿ ಅಡೆತಡೆಗಳ ನಡುವೆಯೂ ಹಂತಹಂತವಾಗಿ 32 ದಿನಗಳ ಅವಧಿಯಲ್ಲಿ ಶಿಖರವನ್ನು ಏರಿದೆ. ಬೇಸ್ ಕ್ಯಾಂಪ್ ನಂತರ ನನ್ನ ಜೊತೆಗಿದ್ದ 18ಮಂದಿ ವಿವಿಧ ಕಾರಣಗಳಿಂದ ವಾಪಾಸಾದರು.
ಹಿಮಗಾಳಿ ಹಾಗೂ ಮೈನೆಸ್ ವಾತಾವರಣದಲ್ಲಿ ಶೇರ್ಪಾಗಳ ನೆರವಿನಿಂದ ಮೇಲೇರಿದ ನಾವು ನಿತ್ಯ ಐಸನ್ನು ಕರಗಿಸಿ 5-6 ಲೀ.ನಷ್ಟ ನೀರು ಕುಡಿಯುತ್ತಿದ್ದೆವು, ಊಟಕ್ಕೆ ಮ್ಯಾಗಿಸೂಪ್ ಬಳಸುತ್ತಿದ್ದೆವು. ತುತ್ತತುದಿ ಮುಟ್ಟುವ ವೇಳೆ ರಾತ್ರಿಯೂ ಎವರೆಸ್ಟ್ ಹತ್ತಿದೆವು. ಹಲವು ಮƒತ ದೇಹಗಳನ್ನು ಕಂಡೆವು.
ಎವರೆಸ್ಟ್‌ನ ತುತ್ತ ತುದಿಯಲ್ಲಿ ಕೇವಲ 15 ನಿಮಿಷಗಳ ಕಾಲ ಮಾತ್ರ ಅಲ್ಲಿದ್ದು, ಆ ವೇಳೆ ಕರ್ನಾಟಕದ ಬಾವುಟ, ಸಾಧನೆಗೆ ಪ್ರೇರಣೆ ನೀಡಿದ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಶಿವಕುಮಾರ ಸ್ವಾಮಿಜಿ, ಅಬ್ದುಲ್ ಕಲಾಂ ನಾಗರಹೊಳೆ ಸಿ.ಎಫ್.ದಿ.ಮಣಿಕಂದನ್ ಸೇರಿದಂತೆ ಅನೇಕ ಸಾಧಕರ ಭಾವಚಿತ್ರ, ಪರಿಸರ ಸಂರಕ್ಷಣೆ ಕುರಿತ ಬ್ಯಾನರ್ ಅನಾವರಣಗೊಳಿಸಿದ್ದು ಆ ರೋಚಕ ಕ್ಷಣ ಅವಿಸ್ಮರಣೀಯವೆಂದರು.
ಈ ಎಲ್ಲಾ ಸಾಧನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ತುಂಬು ಸಹಕಾರ ನೀಡಿದ್ದಾರೆಂದು ಸ್ಮರಿಸಿದರು. ವಿದ್ಯಾರ್ಥಿಗಳು ವಿಕ್ರಂರೊಂದಿಗೆ ಸಂವಾದ ನಡೆಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಬಿ.ಎಂ.ನಾಗರಾಜ್, ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಜ್ಞಾನಪ್ರಕಾಶ್, ಭೌತಶಾಸ್ತ್ರ ವಿಭಾಗದ ಮಂಜುನಾಥ್ ಮಾತನಾಡಿದರು. ಪ್ರಾಧ್ಯಾಪಕರಾದ ನಂಜುಂಡಸ್ವಾಮಿ, ನಾಗಣ್ಣ, ಶ್ರೀನಿವಾಸ್, ಅಂಬುಜಾಕ್ಷಿ ಸೇರಿದಂತೆ ವಿದ್ಯಾರ್ಥಿ ಸಮೂಹ ಭಾಗವಹಿಸಿದ್ದರು.