Advertisement

ಗ್ರಾಮದೇವಿಯರ ವೈಭವದ ಪುರಪ್ರವೇಶ

02:32 PM May 05, 2022 | Team Udayavani |

ಉಪ್ಪಿನಬೆಟಗೇರಿ: 21ವರ್ಷದ ಬಳಿಕ ಗ್ರಾಮದಲ್ಲಿ ದ್ಯಾಮವ್ವ-ದುರ್ಗವ್ವ ಗ್ರಾಮದೇವಿಯರ ಪುರ ಪ್ರವೇಶದೊಂದಿಗೆ 9 ದಿನಗಳ ಜಾತ್ರಾ ಮಹೋತ್ಸವಕ್ಕೆ ಬುಧವಾರ ಚಾಲನೆ ದೊರೆತಿದೆ.

Advertisement

ಕಳೆದ 1961, 1981 ಹಾಗೂ 2001ರಲ್ಲಿ ಗ್ರಾಮದೇವಿಯರ ಜಾತ್ರೆಯಾಗಿತ್ತು. ಇದೀಗ 21 ವರ್ಷಗಳ ನಂತರ ಗ್ರಾಮದೇವಿಯರ ಜಾತ್ರೆ ನಡೆಯುತ್ತಿದ್ದು, ಉಪ್ಪಿನಬೆಟಗೇರಿ, ಹನುಮನಕೊಪ್ಪ, ಸೈಬನಕೊಪ್ಪ, ಹನುಮನಾಳ ಗ್ರಾಮಗಳಲ್ಲಿ ಜಾತ್ರಾ ಸಂಭ್ರಮ ಮನೆ ಮಾಡಿದಂತಾಗಿದೆ. ಬುಧವಾರ ಸಂಜೆ ಗ್ರಾಮದ ಹಳೆಯ ಬಸ್‌ ನಿಲ್ದಾಣದಲ್ಲಿ ಎರಡು ಟ್ರ್ಯಾಕ್ಟರ್ ಗಳಿಂದ ಶೃಂಗರಿಸಿದ ಮಂಟಪದಲ್ಲಿ ದ್ಯಾಮಮ್ಮ ಹಾಗೂ ದುರ್ಗವ್ವ ಮಾತೆಯರನ್ನು ವಿರಾಜಮಾನ ಮಾಡಲಾಯಿತು.

ವೇ| ಈರಯ್ಯ ಸಾಲಿಮಠ, ಗೋಕಾಕದ ವೇ| ವಿಜಯ ಶಾಸ್ತ್ರಿಗಳು ಮತ್ತು ಜಾತ್ರಾ ಕಮೀಟಿ ಪ್ರಮುಖರಾದ ಚನಬಸಪ್ಪ ಮಸೂತಿ, ರಾಮಲಿಂಗಪ್ಪ ನವಲಗುಂದ, ವೀರಣ್ಣಾ ಪರಾಂಡೆ, ಕಲ್ಲಪ್ಪ ಪುಡಕಲಕಟ್ಟಿ, ಕಾಶಪ್ಪ ದೊಡವಾಡ, ಕೃಷ್ಣಾ ಬುದ್ನಿ, ಶಿವಪ್ಪ ವಿಜಾಪೂರ, ಸುರೇಶಬಾಬು ತಳವಾರ, ವರ್ಧಮಾನ ಅಷ್ಟಗಿ ಸೇರಿದಂತೆ ನೂರಾರು ಸಂಖ್ಯೆಯ ಸದ್ಭಕ್ತರ ಸಮ್ಮುಖದಲ್ಲಿ ಗ್ರಾಮದೇವಿಯರಿಗೆ ಪೂಜೆ ಸಲ್ಲಿಸುವ ಮೂಲಕ ಉಭಯ ದೇವಿಯರನ್ನು 500ಕ್ಕೂ ಹೆಚ್ಚು ಸುಮಂಗಲೆಯರ ಕುಂಭಮೇಳದೊಂದಿಗೆ ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು.

ನಂತರ ಹಳೆಯ ಬಸ್‌ ನಿಲ್ದಾಣದಿಂದ ಗ್ರಾಮದೇವಿಯರ ಮೆರವಣಿಗೆ ಆರಂಭವಾಗಿ ಜೈನರ ಓಣಿ, ಹನುಮನಕೊಪ್ಪ, ಪೇಟೆಯ ಕೂಟ, ಪೇಟೆ ರಸ್ತೆ ಮೂಲಕ ಗ್ರಾಮದೇವಿ ದೇವಸ್ಥಾನಕ್ಕೆ ಬಂದು ತಲುಪಿತು. ಡೊಳ್ಳು, ಜಗ್ಗಲಿಗೆ ಮೇಳ, ಹೆಜ್ಜೆಮೇಳ, ಜಾಂಜ್‌ ಮೇಳ, ಚಿಕ್ಕ ಮಕ್ಕಳ ಕೋಲಾಟ ಮೆರವಣಿಗೆಗೆ ಮೆರಗು ತಂದವು.

9 ದಿನ ಊರಲ್ಲಿ ಅಡುಗೆ ಮಾಡುವಂತಿಲ್ಲ: ಈ 9 ದಿನಗಳ ಜಾತ್ರಾ ಮಹೋತ್ಸವದಲ್ಲಿ ಮನೆಯಲ್ಲಿ ಯಾರೂ ಅಡುಗೆ ಮಾಡುವಂತಿಲ್ಲ. ಹೀಗಾಗಿ ಗ್ರಾಮದ ಹೆಸ್ಕೂಲ್‌ ಮೈದಾನದಲ್ಲಿ ಪ್ರತಿ ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದ ಸೇವೆ ವ್ಯವಸ್ಥೆ ಮಾಡಲಾಗಿದೆ.

Advertisement

ದೇವಿ ಪುರಾಣ: ಇನ್ನು ಗೋಕಾಕದ ಅಟ್ನೂರ ಗ್ರಾಮದ ಕಲ್ಲಿನಾಥ ಶಾಸ್ತ್ರಿಗಳಿಂದ ಪ್ರತಿದಿನ ಸಂಜೆ 7 ಗಂಟೆಗೆ ಗ್ರಾಮ ದೇವಿಯರ ಪುರಾಣ ಜರುಗಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೇ 7 ರಿಂದ 12ರವರೆಗೆ ಪ್ರತಿದಿನ ಗ್ರಾಮದ ಪ್ರಮುಖ ದೇವಸ್ಥಾನಗಳಲ್ಲಿ ಗ್ರಾಮದೇವಿಯರ ಹೊನ್ನಾಟ ಜರುಗಲಿದೆ. ಹೀಗಾಗಿ ಗ್ರಾಮದಲ್ಲಿ ಚಪ್ಪಲಿ ಧರಿಸಿ, ಸಂಚರಿಸುವಂತಿಲ್ಲ ಎಂಬ ನಿಯಮ ವಿಧಿಸಲಾಗಿದೆ.

ಇಂದಿನಿಂದ ಗ್ರಾಮದೇವಿಯರ ಪುರಾಣ

ಧಾರವಾಡ: ಉಪ್ಪಿನಬೆಟಗೇರಿಯ ಗ್ರಾಮ ದೇವಿಯರ ಜಾತ್ರಾ ಮಹೋತ್ಸವ ಅಂಗವಾಗಿ ಮೇ 5 ರಿಂದ ಮೇ 13 ರವರೆಗೆ ಶ್ರೀ ಗ್ರಾಮದೇವಿಯರ ಪುರಾಣ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ದಿನ ಸಂಜೆ 7:00 ಗಂಟೆಗೆ ಗೋಕಾಕ ಅಟ್ನೂರದ ವೇದಮೂರ್ತಿ ಪಂಡಿತ ಕಲ್ಲಿನಾಥ ಶಾಸ್ತ್ರೀ ಅವರಿಂದ ದೇವಿಯ ಪುರಾಣ ನಡೆಯಲಿದೆ.

ಮೇ 5ರಂದು ಸಂಜೆ 7 ಗಂಟೆಗೆ ಮೂರುಸಾವಿರ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ ಸಾನಿಧ್ಯದಲ್ಲಿ ವಿಧಾನಸಭೆ ಉಪಸಭಾಪತಿ ಆನಂದ ಮಾಮನಿ ಅವರು ಪುರಾಣಕ್ಕೆ ಚಾಲನೆ ನೀಡಲಿದ್ದಾರೆ. ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಚನ್ನಬಸಪ್ಪ ಮಸೂತಿ ಅಧ್ಯಕ್ಷತೆ ವಹಿಸಲಿದ್ದು, ಶಾಸಕರು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮೇ 5ರಿಂದ 12 ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಪುರಾಣ ಕಾರ್ಯಕ್ರಮ ಜರುಗಲಿದ್ದು, ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೇ 13ರಂದು ಬೆಳಿಗ್ಗೆ 10 ಗಂಟೆಗೆ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ನಡೆಯುವ ಪುರಾಣ ಮಹಾಮಂಗಲ ಹಾಗೂ ಧರ್ಮಸಭೆಯಲ್ಲಿ ಮುನವಳ್ಳಿಯ ಮುರುಘೇಂದ್ರ ಸ್ವಾಮೀಜಿ, ಉಪ್ಪಿನಬೆಟಗೇರಿಯ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ, ಮಮದಾಪೂರದ ಶ್ರೀ ಮುರುಘೇಂದ್ರ ಸ್ವಾಮೀಜಿ, ಇಸ್ಲಾಂ ಧರ್ಮ ಗುರು ಆರೀಪುಲ್‌ ಹಕ್‌ ಶಾ ಖಾದ್ರಿ ಖಲಂದರ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಪರಮೇಶ್ವರ ದೊಡವಾಡ ಅಧ್ಯಕ್ಷತೆ ವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next