Advertisement

ಜಿಯೊ ಪಾಲಿಮರ್‌ ಉತ್ಪನ್ನ ಪರಿಸರ ಸ್ನೇಹಿ

11:08 AM Jan 31, 2019 | Team Udayavani |

ರಾಯಚೂರು: ಹಾರುಬೂದಿಯನ್ನು ಬಳಸಿ ಜಿಯೊ ಪಾಲಿಮರ್‌ ತಂತ್ರಜ್ಞಾನದಡಿ ವಸ್ತುಗಳನ್ನು ತಯಾರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಹೇಳಿದರು.

Advertisement

ತಾಲೂಕಿನ ಶಕ್ತಿನಗರದ ಕ್ಯಾಶುಟೆಕ್‌ ನಿರ್ಮಿತಿ ಕೇಂದ್ರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಯೊ ಪಾಲಿಮರ್‌ ಕಾಂಕ್ರಿಟ್ ಉತ್ಪನ್ನಗಳ ಕೇಂದ್ರದ ಉದ್ಘಾಟನೆ ಹಾಗೂ ಜಿಯೊ ಪಾಲಿಮರ್‌ ತಂತ್ರಜ್ಞಾನದ ಜಾಗೃತಿ ಕುರಿತು ಹಮ್ಮಿಕೊಂಡ ರಾಷ್ಟ್ರ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಹಾರುಬೂದಿಯಿಂದ ಸಾಕಷ್ಟು ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಆದರೆ, ಇದು ಅದಕ್ಕಿಂತ ಸುಧಾರಿತ ಪ್ರಯೋಗವಾಗಿದೆ. ಈ ಉತ್ಪನ್ನಗಳ ಕ್ಯೂರಿಂಗ್‌ ಮಾಡಲು ನೀರಿನ ಅಗತ್ಯವಿಲ್ಲ. ಆರ್‌ಟಿಪಿಎಸ್‌, ವೈಟಿಪಿಎಸ್‌ನಿಂದ ಬರುವ ಹಾರುಬೂದಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಈ ಉತ್ಪನ್ನಗಳನ್ನು ತಯಾರಿಸುವುದರಿಂದ ಪರಿಸರ ಹಾನಿಯನ್ನೂ ತಡೆಯಬಹುದಾಗಿದೆ ಎಂದರು.

ಮುಖ್ಯವಾಗಿ ಇದು ಸಿಮೆಂಟ್ ರಹಿತ ಉತ್ಪಾದಕಗಳಾಗಿವೆ. ವೆಚ್ಚ ಹಾಗೂ ಸವಾಲುಗಳ ಬಗ್ಗೆ ಅವಲೋಕಿಸುತ್ತಿದ್ದು, ಈ ಹೊಸ ತಂತ್ರಜ್ಞಾನ ಬಡಜನರಿಗೆ ಅನುಕೂಲವಾಗಲಿದೆ. ಸಾಕಷ್ಟು ಹಳ್ಳಿಗಳಲ್ಲಿ ಬೇಸಿಗೆಯಲ್ಲಿ ಕುಡಿಯಲು ಸಹ ನೀರಿಲ್ಲ. ಅಂಥ ವೇಳೆ ಮನೆ ಕಟ್ಟುವಾಗ ಕ್ಯೂರಿಂಗ್‌ ಮಾಡಲು ಆಗುವುದಿಲ್ಲ. ಅಂಥಲ್ಲಿ ಇಂಥ ಉತ್ಪಾದಕಗಳು ತುಂಬಾ ನೆರವಾಗಲಿವೆ. ಇಲ್ಲಿ ಪ್ರತ್ಯೇಕ ಪ್ರದರ್ಶನ ವಿಭಾಗ ಆರಂಭಿಸಲಾಗುತ್ತಿದೆ. ಜನ ಬಂದು ಪರೀಕ್ಷೆ ಮಾಡಿದ ನಂತರ ಸಾಮಗ್ರಿ ಖರೀದಿಸುವ ವ್ಯವಸ್ಥೆ ಇದೆ ಎಂದು ವಿವರಿಸಿದರು.

ಕ್ಯಾಶುಟೆಕ್‌ ಕಾರ್ಯನಿರ್ವಾಹಕ ಅಧಿಕಾರಿ ಶರಣಬಸಪ್ಪ ಪಟ್ಟೇದ ಮಾತನಾಡಿ, ಜಿಯೊ ಪಾಲಿಮರ್‌ ತಂತ್ರಜ್ಞಾನದಲ್ಲಿ 29 ಮಾದರಿಯ ವಸ್ತುಗಳನ್ನು ತಯಾರಿಸಿದ್ದು, ಇಂದು ಪ್ರದರ್ಶನಕ್ಕೆ ಇಡಲಾಗಿದೆ. ಪರೀಕ್ಷೆಗೆ ಒಳಪಡಿಸಿದಾಗ ಉತ್ತಮ ಫಲಿತಾಂಶ ಲಭಿಸಿದೆ. ಈಗ ಜಿಪಂ ಸಿಇಒ ಕೂಡ ಒಂದು ಪ್ರಾಯೋಗಿಕವಾಗಿ ಕಟ್ಟಡ ನಿರ್ಮಿಸುವಂತೆಯೂ ತಿಳಿಸಿದ್ದಾರೆ ಎಂದು ಹೇಳಿದರು.

Advertisement

ಈ ಉತ್ಪಾದನೆಗೆ ಶೇ.50 ಮರಳು ಬಳಕೆಯಾದರೆ, ಸಿಮೆಂಟ್ ಬಳಸದೆಯೇ ಉತ್ಪಾದಿಸುವ ಸಾಮಗ್ರಿಗಳಾಗಿವೆ. ಈಗಾಗಲೇ ತಯಾರಿಸಿದ ಉತ್ಪನ್ನಗಳನ್ನು ಜನರಿಗೆ ಪರಿಚಯಿಸುವುದು ಹಾಗೂ ಜನರಿಗೆ ಡೆಮೊ ಮೂಲಕ ತೋರಿಸಲಾಗುತ್ತಿದೆ. ಈ ತಂತ್ರಜ್ಞಾನದಲ್ಲಿನ ಸಾಧಕ ಬಾಧಕಗಳು, ಎದುರಾಗುವ ಸವಾಲು, ಸುಧಾರಿತ ಕ್ರಮಗಳು ಸೇರಿ ಅಗತ್ಯ ವಿಚಾರಗಳನ್ನು ಕಾರ್ಯಾಗಾರದಲ್ಲಿ ಚರ್ಚಿಸಲಾಗುವುದು ಎಂದು ವಿವರಿಸಿದರು.

ಕಾರ್ಯಾಗಾರಕ್ಕೆ ಬಂದಿದ್ದ ವಿವಿಧ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳಿಗೆ ಉತ್ಪನ್ನಗಳ ಮಾದರಿಗಳನ್ನು ಪರಿಚಯಿಸಲಾಯಿತು. ನಂತರ ಜಿಯೊ ಪಾಲಿಮರ್‌ ಕುರಿತು ವಿವಿಧೆಡೆಯಿಂದ ಆಗಮಿಸಿದ ತಜ್ಞರು ಮಾಹಿತಿ ನೀಡಿದರು.

ಚೆನ್ನೈನ ಎಸ್‌ಆರ್‌ಎಂ ವಿವಿ ರಾಸಾಯನಿಕ ವಿಭಾಗದ ಮುಖ್ಯಸ್ಥೆ ಡಾ| ಆರ್‌.ಜಯಲಕ್ಷ್ಮಿ, ಬೆಂಗಳೂರು ಪ್ರಸಿಡೆನ್ಸಿ ವಿಶ್ವವಿದ್ಯಾಲಯದ ಸಿವಿಲ್‌ ಇಂಜಿನೀಯರ್‌ ವಿಭಾಗದ ಪ್ರಾಧ್ಯಾಪಕ ಪ್ರೊ| ಅಮಿಯಾ ಗೋಸ್ವಾಮಿ, ಕಟ್ಟುವ ಸಿಲಿಕೇಟ್ ಪ್ರೈವೇಟ್ ಲಿಮಿಟೆಡ್‌ನ‌ ಸಿಇಒ ಕೆ.ಕೆ.ಜ್ಞಾನಪ್ರಕಾಶ ಸೇರಿ ಅನೇಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next