Advertisement

ಕಸ ವಿಲೇವಾರಿ ಘಟಕ ಸಮಸ್ಯೆ ಕೇಳ್ಳೋರಿಲ್ಲ

04:46 PM Jul 19, 2018 | |

ತುಮಕೂರು: ನಮ್ಮ ಗ್ರಾಮದಲ್ಲಿ ಕಸ ವಿಲೇವಾರಿ ಘಟಕ ಬೇಡ ತುಮಕೂರು ಕಸ ಇಲ್ಲಿ ಏಕೆ? ಎಂದೆಲ್ಲಾ ಹೋರಾಟ ಮಾಡಿದೆವು. ಇಡೀ ದೇಶದಲ್ಲೇ ಎಲ್ಲೂ ಇಲ್ಲದ ರೀತಿಯ ಮಾದರಿ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡುವುದಾಗಿ ಹೇಳಿ ಇಲ್ಲಿ ಕಸ ವಿಲೇವಾರಿ ಘಟಕ ಮಾಡಿ ನಮನ್ನು ಅನಾರೋಗ್ಯರನ್ನಾಗಿ ಮಹಾನಗರ ಪಾಲಿಕೆ ಮಾಡುತ್ತಿದೆ. ಈಗ ಘಟಕ ಪ್ರಾರಂಭವಾಗಿದೆ. ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಿ ಎಂದರೂ ಇದಕ್ಕೆ ಗಮನ ನೀಡದೆ ನಮಗೆ ಸಂಕಷ್ಟ ತಂದೊಡ್ಡಿದ್ದಾರೆ. ಈಗ ಯಾವ ಅಧಿಕಾರಿಗಳು ನಮ್ಮ ಸಂಕಷ್ಟ ಆಲಿಸುತ್ತಿಲ್ಲ, ನಮ್ಮ ಕಷ್ಟ ಕೇಳ್ಳೋರಾದರೂ ಯಾರು ಎಂದು ಈ ಭಾಗದ ನೊಂದ ಗ್ರಾಮಸ್ಥರ ನುಡಿಯಾಗಿದೆ.

Advertisement

ಸ್ಮಾರ್ಟ್‌ ಸಿಟಿಯಾಗಿ ಬೆಳವಣಿಗೆಯಾಗುವ ಲಕ್ಷಣ ಹೊಂದಿರುವ ತುಮಕೂರು ನಗರದಲ್ಲಿ ಪ್ರತಿದಿನ ಉತ್ಪತ್ತಿಯಾಗುವ ನೂರಾರು ಟನ್‌ ಘನ ತ್ಯಾಜ್ಯವನ್ನು ವಿಲೇವಾರಿ ಮಾಡಲು ತುಮಕೂರು ಸಮೀಪದ ಅಜ್ಜಗೊಂಡನಹಳ್ಳಿಯಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಿದ್ದು ಈ ಘಟಕದಲ್ಲಿ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಿ ಈ ಭಾಗದ ಜನರಿಗೆ, ಪರಿಸರಕ್ಕೆ ಹಾನಿಯಾಗದಂತೆ ಗಮನ ಹರಿಸಿ, ರಾಜ್ಯದಲ್ಲೇ ಮಾದರಿ ಕಸ ವಿಲೇವಾರಿ ಘಟಕ ಮಾಡುವುದಾಗಿ ಹೇಳಿದ್ದ ಮಹಾನಗರ ಪಾಲಿಕೆ ಎಲ್ಲವನ್ನೂ ಮರೆತು ಈಗ ಅವೈಜ್ಞಾನಿಕವಾಗಿ ಈ ಭಾಗದಲ್ಲಿ ಕಸ ವಿಲೇವಾರಿ ಮಾಡುತ್ತಿದ್ದು ಇದರಿಂದ ಈ ಭಾಗದ ಪರಿಸರಕ್ಕೆ ಹಾನಿಯಾಗುತ್ತಿದ್ದು, ಈ ಭಾಗದ ರೈತರು ಘಟಕದಿಂದ ಸಂಕಷ್ಟ ಎದುರಿಸುತ್ತಿದ್ದಾರೆ.

ಘಟಕ ಆರಂಭಗೊಂಡಿದ್ದು ಹೇಗೆ ?: ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಿರುವ ತುಮಕೂರು ನಗರದಲ್ಲಿ 3.80 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು ನಗರದಲ್ಲಿ ನಿತ್ಯವೂ ನೂರಾರು ಟನ್‌ ಕಸ ಉತ್ಪತ್ತಿಯಾಗುತ್ತಿದೆ. ಈ ಕಸವನ್ನು ವಿಲೇವಾರಿ ಮಾಡಲು ಜಾಗವಿಲ್ಲದೇ ಮಹಾನಗರ ಪಾಲಿಕೆ ಕಸ ವಿಲೇವಾರಿ ಘಟಕದ ಅಗತ್ಯ ಇತ್ತು. ಅದಕ್ಕಾಗಿ ಅಂದಿನ ತುಮಕೂರು ನಗರ ಸಭೆ, ತುಮಕೂರು-ಶಿರಾ ರಾಷ್ಟ್ರೀಯ ಹೆದ್ದಾರಿ-4 ರ ಕೋರಾ ಗ್ರಾಮಕ್ಕೆ ಹತ್ತಿರವಾಗಿರುವ ಅಜ್ಜಗೊಂಡನಹಳ್ಳಿಯ ಅರಳೀಕಟ್ಟೆ ಗ್ರಾಮದ ಹುಳುಕು ಮನೆ ಸಮೀಪ 40 ಎಕರೆ ಜಮೀನನ್ನು ಘನತ್ಯಾಜ್ಯ ನಿರ್ವಹಣೆ ಯೋಜನೆಯ ಅನುಷ್ಠಾನಕ್ಕಾಗಿ 2001 ರಲ್ಲಿ ಖರೀದಿಸಿತ್ತು.

 ಈ ಜಮೀನಿಗೆ ಸಂಬಂಧಿಸಿದಂತೆ ಹಲವು ವಿವಾದಗಳು ನಡೆದು ಅಂತಿಮವಾಗಿ 2007 ರಲ್ಲಿ ತೀರ್ಪು ನಗರಸಭೆ ಪರವಾಗಿ ಬಂದಿದೆ ಎನ್ನುವ ಕಾರಣದಿಂದ ಅಂದಿನಿಂದಲೂ ನಗರಸಭೆ ಅಜ್ಜಗೊಂಡನಹಳ್ಳಿಯಲ್ಲಿ ಕಸವಿಲೇವಾರಿ ಘಟಕ ಸ್ಥಾಪನೆ ಮಾಡಬೇಕೆಂದು ಮುಂದಾಗಿತ್ತು. 

 ಅಂದಿನಿಂದಲೂ ರೈತರು ಈ ಘಟಕವನ್ನು ಇಲ್ಲಿ ಸ್ಥಾಪನೆ ಮಾಡಲೇ ಕೂಡದು ಎಂದು ತಮ್ಮ ಹೋರಾಟವನ್ನೂ ತೀವ್ರಗೊಳಿಸಿದ್ದರು. ನಂತರದ ದಿನಗಳಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆದಿತ್ತು. ಜಿಲ್ಲಾಡಳಿತ ಮತ್ತು ನಗರ ಪಾಲಿಕೆ ಕಸ ವಿಲೇವಾರಿ ಘಟಕ ಸ್ಥಾಪನೆ ಮಾಡಲು ಪೋಲೀಸ್‌ ಭದ್ರತೆಯಲ್ಲಿ ಕಾಂಪೌಂಡ್‌ ಗೋಡೆ ನಿರ್ಮಿಸಿ, ಯಂತ್ರೋಪಕರಣಗಳನ್ನು ತಂದರೂ ಘಟಕ ಸ್ಥಾಪನೆ
ಮಾಡಲು ಸಾಧ್ಯವಾಗಿರಲಿಲ್ಲ. ತುಮಕೂರಿನಲ್ಲಿ ಕಸ ಉತ್ಪತ್ತಿ ಹೆಚಾಗಿದ್ದ ವೇಳೆಯಲ್ಲಿ ಕಸವನ್ನು ವಿಲೇವಾರಿ ಮಾಡಲೇ ಬೇಕಾದ ಹಿನ್ನೆಲೆಯಲ್ಲಿ ಜಿಲ್ಲಾ ನ್ಯಾಯಾಧೀಶರೇ ಆಸಕ್ತಿವಹಿಸಿ ಕಸ ವಿಲೇವಾರಿ ಘಟಕವನ್ನು ಆರಂಭಿಸಿದರು.

Advertisement

ಹುಸಿಯಾದ ಭರವಸೆ: ಈ ಕಸ ವಿಲೇವಾರಿ ಘಟಕ ಪ್ರಾರಂಭ ಮಾಡುವಾಗ ಇಲ್ಲಿಯ ಜನರಿಗೆ ಮಾಧ್ಯಮದವರಿಗೆ ಮಹಾನಗರ ಪಾಲಿಕೆ ಆಯುಕ್ತರು ಮತ್ತು ಅಂದಿನ ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತೋರಿಕೆಗಾಗಿ ಅಜ್ಜಗೊಂಡನಹಳ್ಳಿಯಲ್ಲಿ ಮಾದರಿ ಕಸವಿಲೇವಾರಿ ಘಟಕ ಮಾಡುತ್ತೇವೆ. ಯಾವುದೇ ರೀತಿಯ ವಾಸನೆ ಬರದಂತೆ ಪರಿಮಳ ದ್ರವ್ಯ ಹಾಕುತ್ತೇವೆ ಎಂದೆಲ್ಲಾ ಆಶ್ವಾಸನೆ ನೀಡಿ ಅದರಂತೆ ಕೆಲ ದಿನಗಳ ಕಾಲ ಅಜ್ಜಗೊಂಡನಹಳ್ಳಿಯಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಆಯಿತು.

ಅವೈಜ್ಞಾನಿಕ ಕಸ ವಿಲೇವಾರಿ: ಆದರೆ ಇಂದು ಅಜ್ಜಗೊಂಡನಹಳ್ಳಿಯಲ್ಲಿ ನಡೆಯುತ್ತಿರುವ ಕಸ ವಿಲೇವಾರಿ ಘಟಕ ಅವೈಜ್ಞಾನಿಕವಾಗಿ ವಿಲೇವಾರಿ ಆಗುತ್ತಿದ್ದು ಹಸಿ ಕಸ, ಒಣ ಕಸ ಬೇರ್ಪಡಿಸುತ್ತಿಲ್ಲ. ಲೋಡುಗಟ್ಟಲೆ ಕಸವನ್ನು ತಂದು ಅವೈಜ್ಞಾನಿಕವಾಗಿ ಸುರಿಯುತ್ತಿದ್ದಾರೆ. ಇಲ್ಲಿ ಯಾವುದೇ ಪರಿಮಳ ದ್ರವ್ಯ ಇಲ್ಲ. ಇದರ ಒಳಗಡೆ ಹೋದವರಿಗೆ, ಸುತ್ತಮುತ್ತಲ ಗ್ರಾಮಸ್ಥರಿಗೆ ಇಲ್ಲಿಯ ನಿಜ ಸ್ಥಿತಿ ಅರಿವಿಗೆ ಬರುತ್ತದೆ.

ಮುಗಿದ ಗುತ್ತಿಗೆ ಅವಧಿ: ಈವರೆಗೆ ಗುತ್ತಿಗೆ ಪಡೆದಿದ್ದರವರ ಗುತ್ತಿಗೆ ಮುಗಿದು ಹಲವು ದಿನಗಳಾಗಿದೆ ಈಗ ಮತ್ತೆ ಬೇರೆಯವರಿಗೆ ಗುತ್ತಿಗೆ ನೀಡಲು ಜಿಲ್ಲಾಧಿಕಾರಿಗಳಿಂದ ಅನುಮೋದನೆ ದೊರತಿದೆ ಬೆರಳಣಿಕೆಯಷ್ಟು ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಜೆಸಿಬಿ ಯಿಂದ ಕಸವನ್ನು ಅತ್ತಿತ್ತ ದೂಕಿಸುತ್ತಿದ್ದಾರೆ. ಅಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮರಾಗಳಾಗಲಿ ಕೆಲ ಯಂತ್ರೋಪಕರಣಗಳಾಗಲಿ
ಕೆಲಸ ಮಾಡುತ್ತಿಲ್ಲ. ಇಲ್ಲಿ ಬರುತ್ತಿರುವ ವಾಸನೆಯನ್ನು ನಿಲ್ಲಿಸುವಲ್ಲಿ ಪಾಲಿಕೆ ವಿಫ‌ಲವಾಗಿದೆ. ಇಲ್ಲಿಯ ಕಾರ್ಮಿಕರ ಕೈಗಳಿಗೆ ಸರಿಯಾಗಿ ಗ್ಲೌಸ್‌ಗಳಿಲ್ಲ, ಶೂಗಳಿಲ್ಲ, ನೌಕರರು ಇಲ್ಲಿಯ ದುರ್ವಾಸನೆ ಮತ್ತು ನೊಣಗಳ ಕಾಟದಿಂದ ನಲುಗಿಹೋಗುತ್ತಿದ್ದಾರೆ.

ಹೋರಾಟಕ್ಕೆ ಹೆದರುವ ರೈತರು: ಕಸ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಿ ಎಂದು ಪಾಲಿಕೆ ಒತ್ತಾಯಿಸಲು ಪ್ರತಿಭಟನೆ ನಡೆಸಲು ಇಲ್ಲಿಯ ರೈತರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಇಲ್ಲಿ ನಡೆದ ಪ್ರತಿಭಟನೆ ವೇಳೆಯಲ್ಲಿ ನಡೆದ ಕಹಿ ಘಟನೆಗಳಿಂದ ಪೊಲೀಸರು ಮತ್ತು ರೈತರ ನಡುವಿನ ಪ್ರಕರಣಕ್ಕೆ ಹೆದರಿರುವ ರೈತರು ತೊಂದರೆ ಆಗುತ್ತಿದ್ದರೂ ಸಹಿಸಿಕೊಂಡಿದ್ದಾರೆ. 

ತುಮಕೂರಿನಿಂದ ಸಂಗ್ರಹಿಸುವ ಕಸವನ್ನು ನೇರವಾಗಿ ತೆಗೆದುಕೊಂಡು ಹೋಗಿ ಘಟಕದಲ್ಲಿ ಡಂಪ್‌ ಮಾಡುತ್ತಿದ್ದಾರೆ ಯಾವುದೇ ವೈಜ್ಞಾನಿಕವಾಗಿ ವಿಲೇವಾರಿ ಆಗುತ್ತಿಲ್ಲ. ಕಸ ಮಳೆಯಲ್ಲಿ ನೆನೆದು ಅದರ ಕೊಳಕು ರಸ ನೀರಿನಲ್ಲಿ ಸೇರಿ ಹೆಬ್ಟಾಕ ಕೆರೆಗೆ ಸೇರುತ್ತಿದೆ ಈ ಬಗ್ಗೆ ಜಿಲ್ಲಾಧಿಕಾರಿ ಗಳು ತಮ್ಮ ಅಧಿಕಾರ ಬಳಸಿ ಅಗತ್ಯ ಕ್ರಮ ಕೈಗೊಳ್ಳಬೇಕು.
 ಜಿ.ಬಿ.ಜ್ಯೋತಿಗಣೇಶ್‌ ಶಾಸಕ.

ಅಜ್ಜಗೊಂಡನಹಳ್ಳಿಯಲ್ಲಿ ಕಸ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುತ್ತಿದೆ ದಿನವೂ 120 ಟನ್‌ ಕಸ ಉತ್ಪತ್ತಿಯಾಗುತ್ತದೆ ಟೆಂಡರ್‌ ಆಗಿದ್ದವರ ಅವಧಿ ಮುಗಿದಿದೆ ಪುನಃ ಟೆಂಡರ್‌ ಟೆಂಡರ್‌ ಕರೆಯಲು ಜಿಲ್ಲಾಧಿಕಾರಿ ಅನುಮೋದನೆ ನೀಡಿದ್ದಾರೆ .
 ಮಂಜುನಾಥಸ್ವಾಮಿ ಪಾಲಿಕೆ ಆಯುಕ್ತ.

ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next