ಕೆಂಗೇರಿ: ಹತ್ತು ವರ್ಷಗಳ ಹಿಂದೆ ಕೆಂಗೇರಿಯ ಸುತ್ತಮುತ್ತ ಬಿಡಿಎ ನಿರ್ಮಿಸಿರುವ ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆ, ಕಸ ವಿಲೇವಾರಿ ಕೇಂದ್ರವಾಗುತ್ತಿದೆ ಎಂದು ಬಡಾವಣೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಡಿಎ ನಿರ್ಮಿಸಿರುವ ಬಡಾವಣೆಯ 2, 3 ಮತ್ತು 4ನೇ ಬ್ಲಾಕ್‌ಗಳು ಸಮರ್ಪಕ ನಿರ್ವಹಣೆ ಇಲ್ಲದೆ ಕಸದ ತೊಟ್ಟಿಗಳಂತೆ ಕಾಣುತ್ತಿವೆ.
ಜತೆಗೆ ನಿವೇಶನ ಹಂಚಿಕೆ ಮಾಡಿದ ನಂತರ, ನಿವೇಶನ ಮಾಲೀಕರು ಇದುವರೆಗೂ ಮನೆ ಕಟ್ಟದೆ ಇರುವ ಕಾರಣ, ಗಿಡ, ಪೊದೆ ಬೆಳೆದು ಪಾಳು ಬಿದ್ದಂತಾಗಿವೆ. ಈ ನಡುವೆ ಕೆಲ ವಾರಗಳಿಂದ ಪಾಲಿಕೆಯಿಂದ ಕಸ ತೆಗೆದುಕೊಂಡು ಹೋಗಲು ಯಾರೂ ಬರುತ್ತಿಲ್ಲ. ಹೀಗಾಗಿ ಸಾರ್ವಜನಿಕರು ರಾತ್ರಿ ವೇಳೆ ಖಾಲಿ ನಿವೇಶನ ಸೇರಿ ರಸ್ತೆ ಬದಿಗಳಲ್ಲಿ ಕಸ ಎಸೆದು ಹೋಗುತ್ತಿದ್ದಾರೆ.
ಸರ್ ಎಂ.ವಿ ಬಡಾವಣೆಯು ಬಿಬಿಎಂಪಿ ಮತ್ತು ಸೂಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಇದರ ನಿರ್ವಹಣೆಯನ್ನು ಬಿಡಿಎ ಮಾಡಬೇಕೇ ಅಥವಾ ಗ್ರಾಮ ಪಂಚಾಯಿತಿ ಮಾಡಬೇಕೇ ಎಂಬ ಗೂಂದಲ ಏರ್ಪಟ್ಟಿದೆ. ಕಸದ ಸಮಸ್ಯೆ ಹೆಚ್ಚಾಗಲು ಸ್ಥಳೀಯ ಸಂಸ್ಥೆಗಳ ನಡುವಿನ ಈ ಗೊಂದಲವೂ ಪ್ರಮುಖ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸಮಸ್ಯೆಗೆ ಶೀಘ್ರ ಪರಿಹಾರ: ನಮ್ಮಲ್ಲಿ ಸಿಬ್ಬಂದಿ ಕೊರತೆಯಿ ಇರುವುದು ಬಡಾವಣೆ ನಿರ್ವಹಣೆಗೆ ತೊಡಕಾಗಿದೆ. ಈ ಹಿಂದೆ ರಾಮಸಂದ್ರ ಸುತ್ತಮುತ್ತ ಮತ್ತು ಕೆರೆಗೆ ರಾತ್ರಿ ವೇಳೆ ಕಸ, ರಾಸಾಯನಿಕ ತಂದು ಸುರಿಯುತ್ತಿದ್ದ ಕಿಡಿಗೇಡಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೆವು. ಪ್ರಸ್ತುತ ಸರ್ ಎಂ.ವಿ ಬಡಾವಣೆಯ ಕಸ ವಿಲೇವಾರಿ ಮಾಡಲು ಬಿಡಿಎ ಟೆಂಡರ್ ಕರೆದಿದೆ. ಕಸ ವಿಲೇವಾರಿ ಹೊಣೆಯನ್ನು ಗುತ್ತಿಗೆ ನೀಡಲಿದ್ದು, ಆದಷ್ಟು ಬೇಗ ಸಮಸ್ಯೆ ಪರಿಹಾರವಾಗಲಿದೆ ಎಂದು ಬಿಡಿಎ ಸಹಾಯಕ ಅಭಿಯಂತರ ಬಿ.ಟಿ.ರಾಜು ತಿಳಿಸಿದ್ದಾರೆ.
ಬಿಡಿಎ ನಿವೇಶನ ಸಿಕ್ಕ ಖುಷಿಯಲ್ಲಿ ನಾವು ಇಲ್ಲಿ ಮನೆ ಕಟ್ಟಿಸಿಕೊಂಡಿದ್ದೇವೆ. ಆದರೆ, ಇಲ್ಲಿ ಸರಿಯಾದ ರಸ್ತೆ, ಸಂರ್ಪಕವಿಲ್ಲ. ಬೀದಿ ದೀಪಗಳಿಲ್ಲ. ನೀರು ಸಹ ಬರುವುದಿಲ್ಲ. ಇನ್ನು ಕಸ ಕೊಂಡೊಯ್ಯಲು ಯಾರೂ ಬರುತ್ತಿಲ್ಲ.
-ಶಿವಕುಮಾರ್, ಸ್ಥಳೀಯ ನಿವಾಸಿ