Advertisement

ಮಂಗಳೂರಿಗೂ ಕಾಲಿಟ್ಟಿದೆ ಪೊಲೀಸರೆಂದು ನಂಬಿಸಿ ಒಡವೆ ದೋಚುವ ಗ್ಯಾಂಗ್‌

12:19 PM Dec 26, 2018 | |

ಮಂಗಳೂರು: ಸಿಐಡಿ ಪೊಲೀಸ್‌ ಅಧಿಕಾರಿಯೆಂದು ಹೇಳಿಕೊಂಡು ಪಾದಚಾರಿಗಳನ್ನು ನಂಬಿಸಿ ಅನಂತರ ಒಡವೆಗಳನ್ನು ದೋಚುವ ಹೈಟೆಕ್‌ ಕಳ್ಳರ ಗ್ಯಾಂಗ್‌ ಮಂಗಳೂರು ನಗರಕ್ಕೂ ಪ್ರವೇಶಿಸಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ 72 ವರ್ಷದ ವೃದ್ಧರೊಬ್ಬರು ಧರಿಸಿದ್ದ ಚಿನ್ನಾಭರಣ ದೋಚಿರುವ ಘಟನೆ ಮಂಗಳವಾರ ನಡೆದಿದೆ. ಉಡುಪಿ ಜಿಲ್ಲೆಯಲ್ಲಿಯೂ ಇದೇ ಮಾದರಿಯಲ್ಲಿ ಕೈಚಳಕ ತೋರಿಸಿ ಮೈಮೇಲೆ ಹಾಕಿರುವ ಚಿನ್ನಾಭರಣ ಪಡೆದು ನಾಪತ್ತೆಯಾಗುವ ಕಳ್ಳರ ಗ್ಯಾಂಗ್‌ ತಲೆಯೆತ್ತಿದೆ.  

Advertisement

ಚೈನ್‌ ದೋಚಿದರು !
ನಗರದ ಕಾರ್‌ಸ್ಟ್ರೀಟ್‌ ಬಿಇಎಂ ಸ್ಕೂಲ್‌ನ ಬಳಿ ಮಂಗಳವಾರ ಬೆಳಗ್ಗೆ ಸುಮಾರು 11.45ರ ವೇಳೆಗೆ  ಅಳಕೆಯ ನಿವಾಸಿ ಭಗವಾನ್‌ (72) ಅವರು ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಹಿಂದಿಯಲ್ಲಿ ಮಾತನಾಡುತ್ತಾ “ನಾವು ಸಿಐಡಿ ಪೊಲೀಸರು, ನಗರದಲ್ಲಿ ಚಿನ್ನಾಭರಣ ದರೋಡೆ ಮಾಡುವ ತಂಡವಿದೆ. ನೀವು ನಿಮ್ಮ ಚಿನ್ನಾಭರಣವನ್ನು ಜೋಪಾನವಾಗಿ ಕಿಸೆಯಲ್ಲಿ ಕಟ್ಟಿಡಿ’ ಎಂದು ಹೇಳಿದ್ದರು. ಆದರೆ  ಭಗವಾನ್‌ ಅವರು ಅದಕ್ಕೆ ಗಮನ ನೀಡದೆ ಮುಂದಕ್ಕೆ ಸಾಗಿದ್ದರು. ಹಿಂಬಾಲಿಸಿಕೊಂಡು ಬಂದ  ಆ ಯುವಕರು ಮತ್ತೆ ಅವರನ್ನು ಅಡ್ಡಗಟ್ಟಿ, ಅದೇರೀತಿ ಹೇಳಿ ನಂಬಿಸಿದರು. ಅವರ ಮಾತುಗಳನ್ನು ನಂಬಿದ ಭಗವಾನ್‌ ಅವರು ಕೂಡಲೇ ತಮ್ಮ ಕನ್ನಡಕ, ಮೊಬೈಲ್‌, ವಾಚ್‌, ನಗದು, ಉಂಗುರ, ಚಿನ್ನದ ಸರವನ್ನು ಟವಲ್‌ನಲ್ಲಿ  ಕಟ್ಟಲು ಆರಂಭಿಸಿದ್ದರು. ಆಗ, ಆ ಇಬ್ಬರು ಯುವಕರು “ನಾವೇ ಕಟ್ಟಿಕೊಡುತ್ತೇವೆ’ ಎಂದು ಹೇಳಿ ಅವರಿಗೆ ಸಹಾಯ ಮಾಡುವ ನಾಟಕವಾಡಿದ್ದಾರೆ. ಅನಂತರ ಭಗವಾನ್‌ ಬಳಿಯಿದ್ದ ಬೆಲೆಬಾಳುವ ವಸ್ತುಗಳು ಹಾಗೂ ಟವೆಲ್‌ ಅನ್ನು ಪಡೆದುಕೊಂಡ ಆ ಯುವಕರು, ಸ್ವಲ್ಪ ಹೊತ್ತಿನಲ್ಲೇ ಆ ಟವಲ್‌ನಲ್ಲಿ ವಸ್ತುಗಳನ್ನೆಲ್ಲ ಇಟ್ಟು ಕಟ್ಟಿ ವಾಪಾಸ್‌ ನೀಡಿದವರಂತೆ ಮಾಡಿದ್ದಾರೆ. ಅನಂತರ ಇಬ್ಬರು ಕೂಡ ತಾವು ಬಂದಿದ್ದ ಬೈಕ್‌ನಲ್ಲಿ ಕುಳಿತು ನಾಪತ್ತೆಯಾದರು.

ಸ್ವಲ್ಪ ಸಮಯದ ಬಳಿಕ ಭಗವಾನ್‌ ಅವರಿಗೆ  ಸಂಶಯ ಬಂದು ಟವಲ್‌ ಕಟ್ಟು ಬಿಡಿಸಿ ನೋಡಿದಾಗ ಚಿನ್ನದ ಉಂಗುರ ಮತ್ತು ಸರ ಕಳವಾಗಿತ್ತು. ಉಳಿದ ವಸ್ತುಗಳು ಹಾಗೆಯೇ ಇದ್ದವು. ಭಗವಾನ್‌ ಅವರಿಗೆತಾನು ಮೋಸ ಹೋಗಿರುವುದು ಸ್ಪಷ್ಟವಾಯಿತು.  ವಂಚಕರು ದೋಚಿದ ಸೊತ್ತಿನ ಮೌಲ್ಯ ಸುಮಾರು 70 ಸಾವಿರ ರೂ. ಎಂದು ಅಂದಾಜಿಸಲಾಗಿದೆ. 

ಸಾರ್ವಜನಿಕರಿಗೆ ಮಾಹಿತಿ
ಉಡುಪಿಯಲ್ಲಿ ಇರಾನಿ ತಂಡವೊಂದು  ಇದೇ ಮಾದರಿ ಎರಡು ಕಡೆ ಕೃತ್ಯ ನಡೆಸಿ ಮಂಗಳೂರಿನತ್ತ ಪ್ರಯಾಣ ಬೆಳೆಸಿರುವ ಬಗ್ಗೆ  ಉಡುಪಿ ಜಿಲ್ಲಾ ಪೊಲೀಸರು ಮಂಗಳೂರು ಪೊಲೀಸರಿಗೆ ಮಂಗಳವಾರ ಮಾಹಿತಿ ನೀಡಿದರು. ಕೂಡಲೇ ಅಲರ್ಟ್‌ ಆದ ಮಂಗಳೂರು ನಗರ ಪೊಲೀಸರು ಠಾಣೆಗಳ ಸಾಗರ ವಾಹನದಲ್ಲಿ ಧ್ವನಿವರ್ಧಕ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯ ನಡೆಸಿದ್ದರು. ಪೊಲೀಸರು ಧ್ವನಿವರ್ಧಕದಲ್ಲಿ ಮಾಹಿತಿ ನೀಡಿದರೂ ವಂಚಕರ ತಂಡ ನಗರದಲ್ಲಿ ತಮ್ಮ ಕೈಚಳಕ ತೋರಿಸಿ ಒಡವೆಗಳನ್ನು ದೋಚುವಲ್ಲಿ ಯಶಸ್ವಿಯಾಗಿತ್ತು.

ಪೊಲೀಸರು ಎಂದು ನಂಬಿಸಿ ಸಾರ್ವಜನಿಕರ ಗಮನ ಬೇರೆಡೆಗೆ  ಸೆಳೆದು ಒಡವೆ  ದೋಚುವ ತಂಡವೊಂದು ಕಾರ್ಯಾಚರಿಸುತ್ತಿರುವ ಮಾಹಿತಿ ಬಂದಿದೆ.  ಈ ಬಗ್ಗೆ ಎಚ್ಚರದಲ್ಲಿರುವಂತೆ ನಾಗರಿಕರನ್ನು ಪೊಲೀಸ್‌ ಇಲಾಖೆ ಜಾಗೃತಿ ಮೂಡಿಸುತ್ತಿದೆ. ಯಾವುದೇ  ಈ  ರೀತಿ  ಮೋಸಗೊಳಿಸುವ ಕೃತ್ಯ ಗಮನಕ್ಕೆ ಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರನ್ನು ಕೋರಲಾಗಿದೆ.
 ಉಮಾ ಪ್ರಶಾಂತ್‌, ಉಪ ಪೊಲೀಸ್‌ ಆಯುಕ್ತೆ 

Advertisement
Advertisement

Udayavani is now on Telegram. Click here to join our channel and stay updated with the latest news.

Next