Advertisement

Thekkatte; ಮುಸುಕುಧಾರಿ ತಂಡದಿಂದ ಕಳವು ಯತ್ನ; 3 ತಿಂಗಳ ಬಳಿಕ ಆರೋಪಿಗಳ ಬಂಧನ

01:00 PM Apr 05, 2024 | Team Udayavani |

ತೆಕ್ಕಟ್ಟೆ: ಇಲ್ಲಿನ ರಾ.ಹೆ. 66ರ ಸಮೀಪ ಶಾನುಭಾಗ್‌ ಕಾಂಪ್ಲೆಕ್ಸ್‌ನಲ್ಲಿರುವ ಚಿನ್ನದ ಅಂಗಡಿಗೆ ಮುಸುಕುಧಾರಿ ಕಳ್ಳರ ತಂಡವೊಂದು ನುಗ್ಗಿ ಕಳವಿಗೆ ಯತ್ನ ನಡೆಸಿದ ಘಟನೆ ಕಳೆದ ಡಿಸೆಂಬರ್‌ ತಿಂಗಳಿನಲ್ಲಿ ನಡೆದಿತ್ತು.

Advertisement

ಈ ಕುರಿತು ಜ. 1ರಂದು “ಉದಯವಾಣಿ’ಯಲ್ಲಿ ಸಿಸಿ ಟಿವಿ ದೃಶ್ಯಾವಳಿಯ ಆಧಾರದಲ್ಲಿ ವರದಿ ಪ್ರಕಟಿಸಲಾಗಿತ್ತು. ಅನಂತರದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಅರುಣ್‌ ಕೆ. ಅವರ ಆದೇಶದಂತೆ ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಿದ ಕೋಟ ಪೊಲೀಸರು ಸುಮಾರು 3 ತಿಂಗಳ ಬಳಿಕ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದ ನಂತೂರಿನ ಅರ್ಷಿತ್‌ ಅವಿನಾಶ್‌ ದೋಡ್ರೆ ಯಾನೆ ಮಹಮ್ಮದ್‌ ಅರ್ಷದ್‌ (23), ಬೈಂದೂರು ಪಡುವರಿಯ ರಿಝ್ವಾನ್‌ (24) ಹಾಗೂ ಮಹಮ್ಮದ್‌ ಅರ್ಬಾಝ್ (23) ಬಂಧಿತರು.

ಘಟನೆಯ ವಿವರ
ಇಲ್ಲಿನ ರಾ.ಹೆ. 66ರ ಸಮೀಪ ತೆಕ್ಕಟ್ಟೆ ಕೆನರಾ ಬ್ಯಾಂಕ್‌ನ ಹತ್ತಿರದಲ್ಲಿದ್ದ ಸಮೃದ್ಧಿ ಕಾಂಪ್ಲೆಕ್ಸ್‌ನಲ್ಲಿರುವ ಮೀನಾಕ್ಷಿ
ಫರ್ನಿಚರ್‌ ಶೋ ರೂಮ್‌, ಗೋದಾಮು, ಟೈಲರ್‌ ಶಾಪ್‌ನ ಶಟರ್‌ ಬೀಗ ಮುರಿದು ಒಳ ಪ್ರವೇಶಿಸಿದ್ದ ಕಳ್ಳರು ಡಿ. 21ರಂದು ಕಳವಿಗೆ ವಿಫಲ ಯತ್ನ ನಡೆಸಿದ್ದರು. ಅನಂತರ ಡಿ. 29ರಂದು ಇಬ್ಬರು ಮುಸುಕುಧಾರಿ ಕಳ್ಳರು ಮಾರಕಾಸ್ತ್ರಗಳನ್ನು ಹಿಡಿದು ಶಾನುಭಾಗ್‌ ಕಾಂಪ್ಲೆಕ್ಸ್‌ನಲ್ಲಿರುವ ಚಿನ್ನದ ಅಂಗಡಿಯ ಬೀಗ ಮುರಿಯಲು ಪ್ರಯತ್ನಿಸಿ ಇನ್ನುಳಿದ ಅಂಗಡಿಗಳನ್ನು ವೀಕ್ಷಿಸಿ ಕಳವಿಗೆ ಯತ್ನ ನಡೆಸಿದ್ದರು.

ವೀಡಿಯೋ ವೈರಲ್‌ ಆಗಿತ್ತು
ಕಾಂಪ್ಲೆಕ್ಸ್‌ನಲ್ಲಿ ಅಳವಡಿಸಿದ್ದ ಸಿಸಿ ಕೆಮರಾದಲ್ಲಿ ಕಳ್ಳರ ಚಲನವಲನ ಸೆರೆಯಾಗಿದ್ದು, ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಆದರೂ ಅಂಗಡಿ ಮಾಲಕರು ಪೊಲೀಸರ ಗಮನಕ್ಕೆ ತರಲು ಹಿಂದೇಟು ಹಾಕಿದ್ದರು.

Advertisement

ಅಲ್ಲಲ್ಲಿ ಕಳವಿಗೆ ಯತ್ನ
ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯ ತೆಕ್ಕಟ್ಟೆಯ ಚಿನ್ನದ ಅಂಗಡಿ, ಹಳ್ಳಾಡಿಯ ರೆಸ್ಟೋರೆಂಟ್‌, ಬೇಕರಿ, ಕೋಟ ಮೂರುಕೈಯ ಮೆಡಿಕಲ್‌ ಶಾಪ್‌, ಸಾೖಬ್ರಕಟ್ಟೆ ಹೊಟೇಲ್‌ನಲ್ಲಿ ಕಳ್ಳತನಕ್ಕೆ ಯತ್ನ ನಡೆಸಿದ್ದರು. ಎ. 4ರಂದು ಘಟನ ಸ್ಥಳಕ್ಕೆ ಆರೋಪಿಗಳನ್ನು ಕರೆತಂದು ಮಹಜರು ನಡೆಸಲಾಗಿದೆ. ಕಾರ್ಯಾಚರಣೆಯಲ್ಲಿ ಕೋಟ ಪೊಲೀಸ್‌ ಠಾಣೆಯ ಪಿಎಸ್‌ಐ ಸುಧಾ ಪ್ರಭು, ಎಎಸ್‌ಐ ರವಿ ಕುಮಾರ್‌, ಸಿಬಂದಿ ಪ್ರಸನ್ನ ಮಾಲಾಡಿ, ವಿಜೇಂದ್ರ, ರಾಘವೇಂದ್ರ, ಗಣೇಶ್‌, ರೇವತಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next