Advertisement

ಎಲ್ಲರ ಗಮನ ಸೆಳೆಯುತ್ತಿದೆ ಅಪ್ಪು ಇರುವ ಗಣೇಶ ಮೂರ್ತಿ

05:59 PM Aug 26, 2022 | Nagendra Trasi |

ವಿಜಯಪುರ: ಕೊರೊನಾ ಹಿನ್ನೆಲೆ ಗಣೇಶ ಹಬ್ಬವನ್ನು 2 ವರ್ಷ ಸಂಭ್ರಮದಿಂದ ಆಚರಿಸಲು ಸಾಧ್ಯವಾಗಿಲ್ಲ. ಆದ್ದರಿಂದ, ಈ ಬಾರಿ ಎಲ್ಲೆಡೆ ಗಣೇಶೋತ್ಸವದ ಸಂಭ್ರಮ ಮನೆ ಮಾಡಿದ್ದು, ಗಣೇಶ ಮೂರ್ತಿಗಳಿಗೂ ಬೇಡಿಕೆ ಹೆಚ್ಚಿದೆ.

Advertisement

ಪುನೀತ್‌ ರಾಜ್‌ಕುಮಾರ್‌ ಜೊತೆಗಿರುವ ಗಣೇಶ ಮೂರ್ತಿಗಳಿಗೆ ಈ ಬಾರಿ ಹೆಚ್ಚಿನ ಡಿಮ್ಯಾಂಡ್‌ ಇದೆ. ಹಾಗಾಗಿ, ಈ ಬಾರಿ ಗಲ್ಲಿ ಗಲ್ಲಿಗಳಲ್ಲಿ ಅಪ್ಪು ಗಣೇಶನದ್ದೇ ಕಾರುಬಾರು. ಪಟ್ಟಣದಲ್ಲಿ ಸುಮಾರು 60 ವರ್ಷಗಳಿಂದ ಗಣೇಶ ತಯಾರಿಸೋ ಕಾಯಕವನ್ನು ರಾಜ್‌ ಗೋಪಾಲ್‌ ಕುಟುಂಬ ಮಾಡಿಕೊಂಡು ಬಂದಿದೆ. ಅದರಲ್ಲೂ ಈ ಕುಟುಂಬ ಎಂದಿಗೂ ಪಿಒಪಿ ಗಣೇಶನಿಗೆ ಆದ್ಯತೆ ನೀಡದೆ ಮಣ್ಣಿನ ಗಣಪನ ಮೂರ್ತಿಯನ್ನು ಮಾತ್ರ ತಯಾರಿಸುತ್ತಾರೆ. ಈ
ಬಾರಿ ಬಹಳಷ್ಟು ಜನ ಅಪ್ಪು ಗಣೇಶ ಮಾಡಲು ಆರ್ಡರ್‌ ನೀಡಿದ್ದಾರೆ.

ಈ ಬಾರಿ ವ್ಯಾಪಾರ ಭರ್ಜರಿ: ಗಣೇಶ ತಯಾರಕ ರಾಜ್‌ ಗೋಪಾಲ್‌ ಮಾತನಾಡಿ, ನಾವು ನಮ್ಮ ತಂದೆ ಕಾಲದಿಂದಲೂ ಗಣೇಶ ಮೂರ್ತಿ ತಯಾರಿಸುತ್ತಾ ಬಂದಿದ್ದೇವೆ. ಈಗ ಈ ಕಸುಬನ್ನು ನಮ್ಮ ಮಕ್ಕಳು ಸಹ ಮುಂದುವರಿಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊರೊನಾದಿಂದ ಎಲ್ಲಿಯೂ ಗಣೇಶೋತ್ಸವ ನಡೆಯದ ಕಾರಣ ಬಹಳ ನಷ್ಟ ಉಂಟಾಗಿತ್ತು. ಈ ವರ್ಷ ಎಲ್ಲರೂ ವಿಜೃಂಭಣೆಯಿಂದ ಗಣೇಶ ಹಬ್ಬ ಆಚರಿಸುತ್ತಿದ್ದು, ಈ ಸಲ ವ್ಯಾಪಾರ ಚೆನ್ನಾಗಿದೆ. ಅರ್ಧ ಅಡಿ ಗಣಪನಿಂದ 5 ಅಡಿ ಗಣಪನವರೆಗೂ ಮೂರ್ತಿ ತಯಾರು ಮಾಡಿದ್ದೇವೆ ಎಂದರು.

ಟಿಪ್ಪರ್‌ ಮಣ್ಣಿಗೆ 10 ಸಾವಿರ ರೂಪಾಯಿ: ಒಂದು ಟಿಪ್ಪರ್‌ ಮಣ್ಣಿಗೆ 10 ಸಾವಿರ ರೂ.ನೀಡುತ್ತೇವೆ. ಮಣ್ಣು ತಂದು ಹದ ಮಾಡಿ, ಮಿಷನ್‌ಗೆ ಹಾಕಿ ಕೂಲಿಯವರಿಗೆ ಕೂಲಿ ನೀಡಿ ಮೂರ್ತಿ ತಯಾರಿಕೆಗೆ ಮಣ್ಣನ್ನು ಸಂಪೂರ್ಣ ಅಣಿಗೊಳಿಸಿಕೊಳ್ಳುತ್ತೇವೆ. ಒಂದು ಟಿಪ್ಪರ್‌ಗೆ ಮಣ್ಣಿಗೆ 50 ಗಣೇಶ ಮೂರ್ತಿ ತಯಾರಿಸಬಹುದು. 200 ರೂ.ನಿಂದ 5 ಸಾವಿರ ರೂ.ವರೆಗೂ ಗಣೇಶ ಮೂರ್ತಿಗೆ ಬೆಲೆ ನಿಗದಿ ಮಾಡಿದ್ದೇವೆ ಎಂದರು.

ವೋಲ್‌ ಸೇಲ್‌ ವ್ಯಾಪಾರ: ಕಳೆದ ಬಾರಿ 400 ಗಣೇಶ ಮೂರ್ತಿ ತಯಾರಿಸಿದ್ದು, ಕೇವಲ 170 ಮೂರ್ತಿ ಮಾರಾಟವಾಗಿತ್ತು. ಈ ಬಾರಿ 1000 ಗಣೇಶ ಮೂರ್ತಿ ತಯಾರಿಸಿದ್ದು, ವ್ಯಾಪಾರ ಚೆನ್ನಾಗಿದೆ. ಮತ್ತಷ್ಟು ಬೇಡಿಕೆ ಬರುತ್ತಿದೆ. ಸಾಮಾನ್ಯವಾಗಿ ನಾವು ಗಣಪತಿ ಮೂರ್ತಿ ವೋಲ್‌ ಸೇಲ್‌ ವ್ಯಾಪಾರ ಮಾಡುತ್ತೇವೆ. ರಿಟೇಲ್‌ ಕೊಡುವುದಿಲ್ಲ ಎಂದು ತಿಳಿಸಿದರು.

Advertisement

50 ಅಪ್ಪು ಗಣೇಶ ಮೂರ್ತಿ ವ್ಯಾಪಾರ: ಗಣೇಶ ತಯಾರಕ ವರುಣ್‌ ಮಾತನಾಡಿ, ಅಪ್ಪು ಗಣೇಶನಿಗೆ ಬಹಳ ಬೇಡಿಕೆ ಇದ್ದು ಹಬ್ಬ ಇನ್ನು ಒಂದು ವಾರ ಇರುವಾಗಲೇ ಮಾಡಿಟ್ಟ 50 ಅಪ್ಪು ಗಣೇಶ ಮೂರ್ತಿ ವ್ಯಾಪಾರವಾಗಿದೆ. ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಯಾಗಿ ಅಪ್ಪು ಗಣೇಶ ಮಾಡಲು ಒಂದು ಕಡೆ ಖುಷಿಯಾದರೆ, ಮತ್ತೂಂದು ಕಡೆ ಅಪ್ಪು ನೆನೆದು ಬೇಸರವಾಗುತ್ತದೆ ಎಂದರು.

ಶೇ.80ರಷ್ಟು ಗಣೇಶ ಮೂರ್ತಿ ಮಾರಾಟ: ಎರಡು ವರ್ಷಗಳಿಂದ ಗಣೇಶ ತಯಾರಿಕೆಯಲ್ಲಿ ನಷ್ಟವನ್ನು ಕಂಡಿದ್ದ ಕುಟುಂಬ ಈಗ ತಯಾರಿಸಿದ ಶೇ.80ರಷ್ಟು ಭಾಗ ಈಗಾಗಲೇ ಮಾರಾಟ ವಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಇನ್ನು ಗಣೇಶ ಹಬ್ಬದ ಸಮಯಕ್ಕೆ ಬೇಡಿಕೆ ಇರುವ ಮತ್ತಷ್ಟು ಗಣೇಶ ಮೂರ್ತಿ ಮಾಡಿಕೊಡುವ ಉತ್ಸಾಹ ಕುಟುಂಬದ ಸದಸ್ಯರ ಮುಖದಲ್ಲಿ ತೃಪ್ತಿಯ ಮಂದಹಾಸ ಬೀರಿತ್ತು.

Advertisement

Udayavani is now on Telegram. Click here to join our channel and stay updated with the latest news.

Next