Advertisement

ನವೆಂಬರ್ 16ರಿಂದ ತಾಯಿ –ಮಗನ ಆಟ

03:51 PM Oct 10, 2018 | Team Udayavani |

ಶಶಾಂಕ್‌ ನಿರ್ದೇಶನದ ಅಜೇಯ್ ರಾವ್ ಅಭಿನಯದ “ತಾಯಿಗೆ ತಕ್ಕ ಮಗ’ ಚಿತ್ರದ ಫಸ್ಟ್ ಲುಕ್, ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸೌಂಡು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ ರಿಲೀಸ್​ ಡೇಟ್​​ ಅನೌನ್ಸ್ ಮಾಡಿದೆ. ಹೌದು! “ತಾಯಿಗೆ ತಕ್ಕ ಮಗ’ ಸಿನಿಮಾ ನವೆಂಬರ್ 16 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, “ಕೃಷ್ಣನ್ ಲವ್ ಸ್ಟೋರಿ’, “ಕೃಷ್ಣ ಲೀಲಾ’ ಬಳಿಕ ಮತ್ತೆ ಶಶಾಂಕ್ ಹಾಗೂ ಅಜೇಯ್ ರಾವ್ ಜೋಡಿ ಒಂದಾಗಿದೆ.

Advertisement

ಸಿನಿಪ್ರಿಯರ ನಡುವೆ ಲವ್ವರ್ ಬಾಯ್ ಆಗಿ ನೆಲೆ ನಿಂತ ಅಜೇಯ್ ರಾವ್ ಇದೀಗ ಮಾಸ್ ಲುಕ್ಕಿನಲ್ಲಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಅಲ್ಲದೇ “ಎಕ್ಸ್​​ಕ್ಯೂಸ್ ಮಿ’ ಚಿತ್ರದ ಬಳಿಕ ಸುಮಲತಾ ಅಂಬರೀಶ್ ಮತ್ತೆ ಅಜೇಯ್ ರಾವ್‍ಗೆ ತಾಯಿ ಆಗಿ ತೆರೆಮೇಲೆ ಬರುತ್ತಿರುವುದು ಚಿತ್ರದ ಮೇಲೆ ಮತ್ತಷ್ಟು ಕುತೂಹಲ ಮೂಡಿಸಿದೆ. ಇನ್ನು ಅಜೇಯ್ ರಾವ್‍ರ 25 ಸಿನಿಮಾವಾಗಿ ತೆರೆಗೆ ಬರುತ್ತಿರುವ ಚಿತ್ರವು ಶಶಾಂಕ್ ನಿರ್ಮಾಣದಲ್ಲಿ ಮೂಡಿಬರುತ್ತಿದ್ದು, ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. 

ಚಿತ್ರವು ಎರಡು ಟ್ರ್ಯಾಕ್‌ನಲ್ಲಿ ಸಾಗುವ ಕಥೆಯಾಗಿದ್ದು, ತಾಯಿ-ಮಗನ ಎಪಿಸೋಡ್‌ ಒಂದು ಕಡೆಯಾದರೆ, ಹೀರೋ ಲವ್‌ ಎಪಿಸೋಡ್‌ ಇನ್ನೊಂದು ಕಡೆ ಸಾಗುತ್ತದೆಯಂತೆ. “ಚಿತ್ರದಲ್ಲಿ ತಾಯಿ-ಮಗನ ಒಂದು ಕಥೆಯಾದರೆ, ಅವರನ್ನು ವಿರೋಧಿಸುವ ತಂದೆ-ಮಗನ ಮತ್ತೊಂದು ಕಥೆ ಇದೆ. ಇವರ ನಡುವೆ ಪೇಚಿಗೆ ಸಿಲುಕುವ ಅಪ್ಪ-ಮಗಳು ಇನ್ನೊಂದು ಕಡೆ’ಯಲ್ಲಿ ಕಥೆ ಸಾಗುತ್ತದೆ. ಚಿತ್ರದಲ್ಲಿ ಅಜೇಯ್‌ ರಾವ್‌ ಎದುರಿಗೆ ನಾಯಕಿಯಾಗಿ ಆಶಿಕಾ ನಟಿಸಿದ್ದಾರೆ. ಮುಖ್ಯವಾಗಿ ಚಿತ್ರಕ್ಕೆ ಕಿಚ್ಚ ಸುದೀಪ ಧ್ವನಿ ನೀಡಿದ್ದು, ಈ ಮೂಲಕ ಅಜೇಯ್‌ ರಾವ್‌ ಸಿನಿಮಾಕ್ಕೆ ಸುದೀಪ್‌ ಸಾಥ್‌ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next