ಲೋಕಾಪುರ: ಭಾರತ ಯುವ ಜನಾಂಗದ ಕೌಶಲ್ಯದ ಜ್ಞಾನದ ತಳಹದಿ ಮೇಲೆ ನಿಂತಿದ್ದು, ದೇಶದ ಭವಿಷ್ಯ ಯುವ ಜನಾಂಗ ನಿರ್ಧರಿಸಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಧೋಳ ಯೋಜನಾಧಿಕಾರಿ ಧನಂಜಯಕುಮಾರ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೆಹರು ಯುವ ಕೇಂದ್ರ ಬಾಗಲಕೋಟೆ ಮತ್ತು ಅನಸಾರ ವಿವಿಧೋದ್ದೇಶಗಳ ಹಾಗೂ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಆತ್ಮ ನಿರ್ಭರ ಭಾರತ ಯುವ ಜನ ಸ್ವಯಂ ಅವಲಂಬಿತ ಯೋಜನೆ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವ ಶಕ್ತಿಯನ್ನು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಲು ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದೆ. ಎಲ್ಲ ಯುವಕ, ಯುವತಿಯರು ಯೋಜನೆಗಳ ಸದುಪಯೋಗ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು. ಕಸಾಪ ವಲಯ ಘಟಕದ ಅಧ್ಯಕ್ಷ ಎಸ್.ಎಂ. ರಾಮದುರ್ಗ ಮಾತನಾಡಿ, ದೇಶದ ಆರ್ಥಿಕ ವ್ಯವಸ್ಥೆ ಸದೃಢವಾಗಿಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದಾರೆ. ಎಲ್ಲ ವರ್ಗಗಳ ಹಿತರಕ್ಷಣೆ ಗಮನದಲ್ಲಿಟ್ಟುಕೊಂಡು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಇದು ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಉತ್ತೇಜನಕ್ಕೆ ಸಹಾಯಕಾರಿಯಾಗಲಿದೆ. ಎಂದರು.
ಇದೇ ಸಂದರ್ಭದಲ್ಲಿ ಮುಧೋಳ ಯೋಜನಾಧಿಕಾರಿ ಧನಂಜಯಕುಮಾರ, ಕಸಾಪ ವಲಯ ಘಟಕದ ನೂತನ ಅಧ್ಯಕ್ಷ ಎಸ್.ಎಂ. ರಾಮದುರ್ಗ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಗುರುಮಾತೆ ಬಿ.ಎಲ್, ಮಂಟೂರ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಸಂಸ್ಥೆ ಅಧ್ಯಕ್ಷ ಸಲೀಂ ಕೊಪ್ಪದ, ವೆಂಕಟೇಶ ತುಳಸಿಗೇರಿ, ಹಸನ ಮಹಾಲಿಂಗಪುರ, ಶಂಕರ ಸೊಲ್ಲಾಪುರ, ಮಹೇಶ ಗಾಣಿಗೇರ, ಲೋಕಾಪುರ ಮೇಲ್ವಿಚಾರಕಿ ಶೃತಿ ಪೂಜಾರಿ, ಅನ್ನಪೂರ್ಣ ಕಗ್ಗೊಡ, ಸಾವಿತ್ರಿ ತುಪ್ಪದ ಇತರರಿದ್ದರು.