Advertisement

ಅಂತ್ಯ ಕಾಣದ ಮಾರ್ಕೊಪೊಲೊ ಹಗರಣ

04:40 PM Aug 27, 2021 | Team Udayavani |

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಸಾಲದ ಸುಳಿಯಲ್ಲಿ ಸಿಲುಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಟಾಟಾ
ಮಾರ್ಕೊಪೊಲೊ ಬಸ್‌ ಖರೀದಿ ಹಗರಣ ಸದ್ದಿಲ್ಲದೆ ನೇಪಥ್ಯಕ್ಕೆ ಸರಿದಿದೆ. ಕೋಟ್ಯಂತರ ರೂ. ಹಗರಣವೊಂದನ್ನು ಈಗ ಕೇಳುವವರೂ
ಇಲ್ಲದಂತಾಗಿದೆ!

Advertisement

ಸುಮಾರು ಒಂದು ದಶಕದ ಹಿಂದೆ ನಡೆದಿತ್ತು ಎನ್ನಲಾದ ಈ ಹಗರಣ ಬೆಳಕಿಗೆ ಬಂದ ನಂತರ ಐವರು ಸಾರಿಗೆ ಸಚಿವರು ಬಂದು ಹೋದರು. ಬಿಳಿ ಆನೆಯಾಗಿ ಪರಿಣಮಿಸಿದ್ದ ಮಾರ್ಕೊಪೊಲೊ ಬಸ್‌ಗಳು ಮೂಲೆ ಸೇರಿದವು. ಈಗಲೂ ಹೊಸದಾಗಿ ನಿರ್ಮಿಸಿದ ಡಿಪೋಗಳಲ್ಲಿ ಈ ಬಸ್‌ಗಳು ಧೂಳು ತಿನ್ನುತ್ತಿವೆ. ಹಗರಣದ ತನಿಖೆ ನಡೆಸಿ ಸಲ್ಲಿಸಿದ ಕಡತಗಳೂ ಧೂಳು ತಿನ್ನುತ್ತಿವೆ. ಆದರೆ, ಇದುವರೆಗೆ ಈ ಬಗ್ಗೆ ಆಡಳಿತ ಪಕ್ಷವಾಗಲಿ ಹಾಗೂ ಪ್ರತಿಪಕ್ಷಗಳಾಗಲಿ ಚಕಾರ ಎತ್ತುತ್ತಿಲ್ಲ. ಇನ್ನು ತಪ್ಪಿತಸ್ಥರಿಗೆ ಶಿಕ್ಷೆ ದೂರದ ಮಾತು. ಹಗರಣದ ತನಿಖೆಗೆ ಸದನ ಸಮಿತಿ ರಚಿಸಿತ್ತು. ಅದು ವರದಿ ಸಲ್ಲಿಸಿದ ನಂತರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಯಿತು. ನಂತರ ಹಗರಣವೇ ಕಣ್ಮರೆ ಆಯಿತು. ಇದೆಲ್ಲದರ ನಡುವೆ ಆರೋಪಿಗಳು ಮಾತ್ರ “ಕಂಫ‌ರ್ಟ್‌ ಝೋನ್‌’ನಲ್ಲಿ ನಿಶ್ಚಿಂತವಾಗಿದ್ದಾರೆ.

ಮತ್ತೊಂದೆಡೆ ಬಿಎಂಟಿಸಿ ಇದುವರೆಗೆ ಖರೀದಿಯಿಂದಾದ ಸಾಲದ ಮೇಲಿನ ಬಡ್ಡಿಯನ್ನು ಪಾವತಿಸುತ್ತಲೇ ಇದೆ! “ಈಗ ಸಾರಿಗೆ ಇಲಾಖೆಗೆ
ಡೈನಾಮಿಕ್‌ ಸಚಿವರು ಬಂದಿದ್ದಾರೆ’ ಎಂದು ಅವರ ಅಭಿಮಾನಿಗಳು ಹೇಳುತ್ತಾರೆ. ಈಗಲಾದರೂ ಹಗರಣವು ತಾರ್ಕಿಕ ಅಂತ್ಯ ಕಾಣಬಹುದು ಎಂಬ ನಿರೀಕ್ಷೆಗಳು ಸಾರಿಗೆ ನೌಕರರಲ್ಲಿ ಚಿಗುರೊಡೆದಿವೆ.

ನಿಗಮಗಳ ತಾಂತ್ರಿಕ ತಂಡದ ಆಕ್ಷೇಪಣೆ ನಡುವೆಯೂ ಕೇಂದ್ರದ ಜೆ-ನರ್ಮ್ ಯೋಜನೆ ಅಡಿ142 ಟಾಟಾ ಮಾರ್ಕೊಪೊಲೊಬಸ್‌ಗಳನ್ನು
2008-09ರಲ್ಲಿ ಖರೀದಿಸಲಾಗಿತ್ತು. ಇದರಲ್ಲಿ ಬಿಎಂಟಿಸಿಯ 98 ಹಾಗೂ ಕೆಎಸ್‌ಆರ್‌ಟಿಸಿಯ ಮೈಸೂರು ಘಟಕ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು
ಬಸ್‌ಗಳನ್ನುಕಾರ್ಯಾಚರಣೆಗಿಳಿಸಲಾಗಿತ್ತು. ಪ್ರತಿ ಬಸ್‌ಗೆ ಅಂದಾಜು 75ರಿಂದ 80 ಲಕ್ಷ ರೂ. ಪಾವತಿಸಲಾಗಿತ್ತು. ಇದರಲ್ಲಿಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಬಿಎಂಟಿಸಿಯ ಪಾಲು ಕ್ರಮವಾಗಿ ಶೇ.50 ಹಾಗೂ ತಲಾ ಶೇ. 25ರಷ್ಟಿತ್ತು. ಟೆಂಡರ್‌ನಲ್ಲಿ ಬಸ್‌ ಪೂರೈಸಿದ ಕಂಪನಿಗೆ ಪೂರಕ ವಾಗುವಂತೆ ಮಾಡಲಾಗಿತ್ತು ಎಂಬ ಆರೋಪಇದೆ.

ಈ ಬಸ್‌ಗಳು ರಸ್ತೆಗಿಳಿದ ತಿಂಗಳುಗಳಲ್ಲಿ ಅವುಗಳ ಬಣ್ಣ ಬಯಲಾಯಿತು. ತಾಂತ್ರಿಕ ದೋಷ ಹೊಂದಿದ್ದ ಬಸ್‌ಗಳು ಕಪ್ಪು ಹೊಗೆ ಉಗುಳಲು ಪ್ರಾರಂಭಿಸಿದವು. ಪ್ರತಿ ಲೀಟರ್‌ಗೆ ಮೈಲೇಜ್‌ ಒಂದೂವರೆಯಿಂದ ಎರಡು ಕಿ.ಮೀ. ಮಾತ್ರ ಇತ್ತು. ಆದರೆ, ವೋಲ್ವೋ ಬಸ್‌ಗಳು ಲೀ.ಗೆ 2.5ರಿಂದ 3 ಕಿ.ಮೀ. ಓಡುತ್ತಿದ್ದವು. ಇನ್ನು ಸಾಮಾನ್ಯಬಸ್‌ಗಳ ಮೈಲೇಜ್‌ 4 ರಿಂದ 5 ಕಿ.ಮೀ. ಆಗಿದೆ. ಜತೆಗೆ ಉಳಿದ ಬಸ್‌ಗಳಿಗೆ ಹೋಲಿಸಿದರೆ,ಮಾರ್ಕೊಪೊಲೊ ಬಸ್‌ಗಳ ನಿರ್ವಹಣಾ ವೆಚ್ಚ ದುಬಾರಿ ಆಗಿತ್ತು. ಇದರಿಂದ ಬಿಎಂಟಿಸಿಗೆ ಆರ್ಥಿಕ ಹೊರೆಯಾಗಿ ಪರಿಣಮಿಸಿದವು.

Advertisement

ಲಕ್ಷ ಕಿ.ಮೀ. ಕೂಡ ಓಡದೆ ಗುಜರಿ ಸೇರಿದವು
ಚಾಲಕರಿಂದಲೂ “ಪಿಕ್‌ಅಪ್‌’ ಇಲ್ಲ, ಏರ್‌ ಸಸ್ಪ್ಯಾನನ್‌ನಲ್ಲಿ ದೋಷ ಸೇರಿದಂತೆ ಸಾಕಷ್ಟು ದೂರುಗಳು ಕೇಳಿಬಂದವು. ಈ ಹಿನ್ನೆಲೆಯಲ್ಲಿ ಆ
ಬಸ್‌ಗಳನ್ನು ಒಂದೊಂದಾಗಿ ಮೂಲೆ ಸೇರಿಸುವ ಪ್ರಕ್ರಿಯೆ ಶುರುವಾಯಿತು.ಕೇವಲ 50 ಸಾವಿರದಿಂದ ಒಂದು ಲಕ್ಷ ಕಿ.ಮೀ.ಕಾರ್ಯಾಚರಣೆ
ಮಾಡುವಷ್ಟರಲ್ಲಿ ಅವುಗಳು ಗುಜರಿಗೆ ತಳ್ಳಲ್ಪಟ್ಟವು. ಸಾಮಾನ್ಯವಾಗಿ ಬಸ್‌ಗಳು ಕನಿಷ್ಠ 10 ರಿಂದ11 ಲಕ್ಷಕಿ.ಮೀ.ಕಾರ್ಯಾಚರಣೆ ಮಾಡಿದ ನಂತರ ಗುಜರಿ ಪಟ್ಟಿಗೆ ಸೇರುತ್ತವೆ. ಈ ನಿಟ್ಟಿನಲ್ಲೂ ಸಂಸ್ಥೆಗೆ ನಷ್ಟ ಉಂಟಾಯಿತು. ಈಗ ಅವುಗಳನ್ನು ತಲಾ ಒಂದು ಲಕ್ಷ ರೂಪಾಯಿಗೆ ಕೇಳುತ್ತಿದ್ದಾರೆ. ಏನು ಮಾಡುವುದು ಎಂದು ಬಿಎಂಟಿಸಿ ಹಿರಿಯ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.

“ಹಗರಣಕ್ಕೆ ಸಂಬಂಧಪಟ್ಟ ತನಿಖೆ ಮತ್ತು ಅದರ ವರದಿ ಸರ್ಕಾರದ ಹಂತದಲ್ಲಿದೆ. ಅದು ಸೂಕ್ತ ನಿರ್ಣಯ ಕೈಗೊಳ್ಳಬಹುದೆ ಹೊರತು, ಸಾರಿಗೆ
ನಿಗಮಗಳ ಪಾತ್ರ ಇಲ್ಲಿ ಏನೂ ಇಲ್ಲ. ನಷ್ಟ ಭರಿಸಲು ಸಾಧ್ಯವಿಲ್ಲ; ಕಳೆದುಹೋದ ಹಣವೂ ವಾಪಸ್‌ ಬರುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಕೊನೆ ಪಕ್ಷ ತಪ್ಪಿತಸ್ಥರಿಗೆ ಶಿಕ್ಷೆಯಾದರೂ ಆದರೆ ಮುಂದಿನ ದಿನಗಳಲ್ಲಿ ಪುನರಾವರ್ತನೆಯಾಗದಂತೆ ತಡೆಯಬಹುದು’ ಎಂದು ಮತ್ತೂಬ್ಬ ಅಧಿಕಾರಿ ಸ್ಪಷ್ಟಪಡಿಸುತ್ತಾರೆ.

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next