Advertisement

ಶಾಹೂ ಮಹಾರಾಜ ಕಾರ್ಯ ಸ್ಮರಣೀಯ

05:22 PM Jun 21, 2018 | |

ಗದಗ: ಛತ್ರಪತಿ ಶಾಹೂ ಮಹಾರಾಜರು ಸಮಾಜದಲ್ಲಿ ಬೇರೂರಿದ್ದ ಅಸಮಾನತೆಗಳ ವಿರುದ್ಧ ಹೋರಾಡಿ, ಸಮಾನತೆಯ ತತ್ವದಡಿ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ಮಾಡಿದರು. ಮಹಿಳೆಯರು, ದಮನಿತರ ಆಶಾಕಿರಣರಾಗಿ, ತಳಸಮುದಾಯದಲ್ಲಿ ಜೀವನೋತ್ಸಾಹ ತುಂಬಿದರು. ಪುರೋಹಿತ ಶಾಹಿ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿ, ವ್ಯಕ್ತಿ ಸ್ವಾತಂತ್ರ್ಯ  ಕಾಪಾಡಿದ ವ್ಯಕ್ತಿಗಳು ಸ್ಮರಣೀಯರು ಎಂದು ಡಾ| ತೋಂಟದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

Advertisement

ನಗರದ ಎಡೆಯೂರು ಜಗದ್ಗುರು ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಡೆದ 2385ನೇ ಶಿವಾನುಭವದಲ್ಲಿ ಅವರು ಮಾತನಾಡಿದರು. ಶಾಹೂ ಮಹಾರಾಜರಂತೆ ರಾಣಿ ಅಹಲ್ಯಾಬಾಯಿ ಕೂಡ ಛಲದಿಂದ ರಾಜ್ಯ ಕಟ್ಟಿದ ಪರಿ ಬೆರಗುಗೊಳಿಸುವಂತಹದ್ದು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುವ ಮತ್ತು ಪ್ರಗತಿಪರ ಚಿಂತನೆ ಹತ್ತಿಕ್ಕುವ ಪ್ರಯತ್ನಗಳ ವಿರುದ್ಧ ಹೋರಾಡುವ ಅಗತ್ಯವಿದೆ ಎಂದರು.

ನೃಪತುಂಗ ಪ್ರಶಸ್ತಿ ಪುರಸ್ಕೃತ ಕುಂ. ವೀರಭದ್ರಪ್ಪ ಅವರು ಪ್ರಾಧ್ಯಾಪಕ ಡಾ| ಜೆ.ಪಿ. ದೊಡಮನಿ ಅವರು ಅನುವಾದಿಸಿದ ರಾಜರ್ಷಿ ಶಾಹೂ ಛತ್ರಪತಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಇಂದು ನಿರುಪದ್ರವಿ ಮತ್ತು ಹೊಂದಾಣಿಕೆ ಲೇಖಕರಿಗಿಂತ ಉಪದ್ರವಿ ಮತ್ತು ಪ್ರಗತಿಪರ ಚಿಂತನೆಯುಳ್ಳ ಲೇಖಕರ ಅಗತ್ಯವಿದೆ. ಪ್ರಗತಿಪರರ ಮೇಲೆ ದಾಳಿ ನಡೆಸುವವರನ್ನು ಪತ್ತೆ ಶಿಕ್ಷಿಸಬೇಕು. ಸಂವಿಧಾನದ ಆಶಯಗಳಿಗೆ ತಕ್ಕಂತೆ ಸಮಾನತೆ ಮತ್ತು ಭಾರತದ ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳುವ ಅಗತ್ಯವಿದೆ. ಇಂತಹ ಆಶಯಗಳನ್ನು ಹೊತ್ತು ಶಾಹೂ ಛತ್ರಪತಿ ರಾಜನಾಗಿದ್ದರೂ ಜನಸಾಮಾನ್ಯರ ಬದುಕಿಗೆ ಸ್ಪಂದಿಸಿದ ರೀತಿಯನ್ನು ಇಂದಿನವರು ಅರ್ಥಮಾಡಿಕೊಳ್ಳಬೇಕು ಎಂದರು.

ಡಾ| ಹೇಮಾ ಪಟ್ಟಣಶೆಟ್ಟಿ ಮಾತನಾಡಿ, ಇತಿಹಾಸದಲ್ಲಿ ಮಹಿಳೆಯರ ಸಾಧನೆಯನ್ನು ಗುರುತಿಸುವ ಕಾರ್ಯ ವಿರಳ. ಪ್ರಥಮಬಾರಿಗೆ ಮಹಿಳಾ ಸೈನ್ಯವನ್ನು ಸ್ಥಾಪಿಸಿ, ಜನಕಲ್ಯಾಣಕ್ಕಾಗಿ ವೀರ ಮಹಿಳೆ ಅಹಲ್ಯಾಬಾಯಿ ಹೋಳಕರ ತಮ್ಮ ಜೀವನವನ್ನೇ ಸಮರ್ಪಿಸಿದರು. ಇಂದಿನ ಮಹಿಳೆಯರು ಇಂತಹ ಸಾಧಕರ ಜೀವನವನ್ನು ಅರ್ಥೈಸಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದರು.

ಮಾಸ್ತಿ ಪ್ರಶಸ್ತಿ ಪುರಸ್ಕೃತ ಡಾ| ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಸಾಹಿತಿಗಳು ಸಮಾಜಕ್ಕೆ ಸ್ಪಂದಿಸುವ ಅಗತ್ಯವಿದೆ. ಪೂಜ್ಯರು ಸಾಹಿತ್ಯದ ಮಹಾಪೋಷಕರ ಕಾರ್ಯನಿರ್ವಹಿಸುತ್ತಿದ್ದಾರೆ. ಅನೇಕ ಲೇಖಕರನ್ನು ಬೆಳಕಿಗೆ ತಂದಿದ್ದಾರೆ. ಅಧ್ಯಯನ ಸಂಸ್ಥೆಯ ಪ್ರಕಟಣೆಗಳು ಜನಮಾನಸವನ್ನು ತಿದ್ದುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು. ಪ್ರಭಾ ಬೋರಗಾಂವಕರ ಅವರು ಅನುವಾದಿಸಿದರುವ ರಾಣಿ ಅಹಲ್ಯಾಬಾಯಿ ಹೋಳಕರ ಗ್ರಂಥವನ್ನು ಉಮಾದೇವಿ ಕಲಬುರ್ಗಿ ಲೋಕಾರ್ಪಣೆಗೊಳಿಸಿದರು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. 

Advertisement

ವಿವೇಕಾನಂದಗೌಡ ಪಾಟೀಲ, ಜಿ.ಪಿ. ಕಟ್ಟಿಮನಿ, ಶಿವಕುಮಾರ ರಾಮನಕೊಪ್ಪ, ಪ್ರೊ| ಎಸ್‌.ಯು. ಸಜ್ಜನಶೆಟ್ಟರ, ಮಂಜುನಾಥ ಅಸುಂಡಿ, ವಿಜಯಕುಮಾರ ಹಿರೇಮಠ, ಶರಣಬಸಪ್ಪ ಅಂಗಡಿ, ಶಿವನಗೌಡ ಗೌಡರ ಇದ್ದರು. ಶೇಖಣ್ಣ ಕವಳಿಕಾಯಿ ಸ್ವಾಗತಿಸಿದರು. ರಮೇಶ ಕಲ್ಲನಗೌಡರ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next