ಶಬರಿಮಲೆ: ಮಹಿಳಾ ಪ್ರವೇಶ ವಿವಾದದ ನಡುವೆಯೇ, ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಸೋಮವಾರ ಸಂಜೆ 5 ಗಂಟೆಗೆ ತೆರೆಯಲಿದೆ. ಅದಕ್ಕೆ ಪೂರಕವಾಗಿ ಪಂಪಾ ನದಿ ತೀರ ಪ್ರದೇಶದಿಂದ ದೇಗುಲದ ಸನ್ನಿಧಾನದ ವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೀಗಾಗಿ ದೇಗುಲ ಆವರಣ ಈಗ ಭದ್ರತೆಯಿಂದ ಕೂಡಿದ ಕೋಟೆಯಂತೆ ಕಂಡುಬರುತ್ತಿದೆ.
ಇತ್ತೀಚೆಗೆ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಈ ಬಾರಿ ಕೇರಳ ಸರಕಾರ ಕಟ್ಟುನಿಟ್ಟಿನ ಬಂದೋಬಸ್ತ್ ಕ್ರಮಗಳನ್ನು ಕೈಗೊಂಡಿದೆ. 20 ಮಂದಿ ಕಮಾಂಡೋ ತಂಡ ಸೇರಿದಂತೆ 2,300ಕ್ಕೂ ಅಧಿಕ ಮಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಅಲ್ಲದೆ, 50 ವರ್ಷ ವಯಸ್ಸು ದಾಟಿದ 100 ಮಂದಿ ಮಹಿಳಾ ಪೊಲೀಸರನ್ನೂ ನಿಯೋಜಿಸಲಾಗಿದೆ. ದೇಗುಲದ ಸನ್ನಿಧಾನಕ್ಕೆ ಪಂಪಾದಿಂದ ನೀಲಿಮಲ- ಅಪ್ಪಚ್ಚಿಮೇಡು- ಶರಮುಕ್ತಿ ಮೂಲಕ ಭಕ್ತರಿಗೆ ತೆರಳಲು ಸೂಚಿಸಲಾಗಿದೆ.
ಪತ್ರಕರ್ತೆಯರು ಬೇಡ: ಶಬರಿಮಲೆ ಕರ್ಮಸಮಿತಿ ಎಲ್ಲಾ ಮಾಧ್ಯಮ ಸಂಸ್ಥೆಗಳ ಮುಖ್ಯಸ್ಥರಿಗೆ ಮನವಿಯನ್ನು ಕಳುಹಿಸಿ, ದೇಗುಲ ಆವರಣಕ್ಕೆ ಮಹಿಳಾ ಪತ್ರಕರ್ತರನ್ನು ವರದಿ ಮಾಡಲು ಕಳುಹಿಸುವುದು ಬೇಡ ಎಂದು ಒತ್ತಾಯಿಸಿದೆ. ಅದಕ್ಕೆ ಪೂರಕವಾಗಿ ಕೇರಳ ಡಿಜಿಪಿ ಲೋಕನಾಥ್ ಬೆಹಾರ ಸ್ಪಷ್ಟನೆ ನೀಡಿ ಮಾಧ್ಯಮದವ ರಿಗೆ ದೇಗುಲ ಪ್ರವೇಶಿಸದಂತೆ ನಿಷೇಧ ಹೇರಲಾಗಿಲ್ಲ ಎಂದಿದ್ದಾರೆ.
5 ಗಂಟೆಗೆ: ಸೋಮವಾರ ಸಂಜೆ 5 ಗಂಟೆಗೆ ತಂತ್ರಿ ಕಂದರಾರು ರಾಜೀವರಾರು ಮತ್ತು ಮುಖ್ಯ ಅರ್ಚಕ ಉಣ್ಣಿಕೃಷ್ಣನ್ ನಂಬೂದಿರಿ ಜಂಟಿಯಾಗಿ ಗರ್ಭಗುಡಿಯ ಬಾಗಿಲು ತೆರೆಯಲಿದ್ದಾರೆ. ಶ್ರೀ ಚೈತ್ರ ಅತ್ತ ತಿರುನಾಳ್ ಪ್ರಯುಕ್ತ ವಿಶೇಷ ಪೂಜೆ ಮಂಗಳವಾರ ನಡೆಯಲಿದೆ. ಒಟ್ಟು 30 ಗಂಟೆಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಅದಕ್ಕಾಗಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸೆ.28ರಂದು ದೇಗುಲಕ್ಕೆ ಎಲ್ಲಾ ವಯೋ ಮಿತಿಯ ಮಹಿಳೆಯರು ಪ್ರವೇಶಿಸಬಹುದು ಎಂದು ತೀರ್ಪು ನೀಡಿದ ಬಳಿಕ 2ನೇ ಬಾರಿಗೆ ದೇಗುಲದ ಬಾಗಿಲು ತೆರೆಯಲಾಗು ತ್ತಿದೆ. ತಿರುವಾಂಕೂರು ರಾಜಮನೆತನದ ಕೊನೆಯ ದೊರೆ ತಿರುವಾಂಕೂರು ಚಿತಿರ ತಿರುನಾಳ್ ಬಲರಾಮ ವರ್ಮ ಜನ್ಮದಿನ ಪ್ರಯುಕ್ತ ಪೂಜೆ ನಡೆಯಲಿದೆ. ಮಂಗಳವಾರ ರಾತ್ರಿ 10 ಗಂಟೆಗೆ ದೇಗುಲದ ಬಾಗಿಲು ಮುಚ್ಚಲಿದೆ. ನಂತರ ನ.17ರಿಂದ ಮೂರು ತಿಂಗಳ ಕಾಲ ದೀರ್ಘಾವಧಿಗೆ ಅದನ್ನು ತೆರೆಯಲಾಗುತ್ತದೆ.
ಹೋರಾಟ ಬಿರುಸು: ಕೇರಳದ ಬಿಜೆಪಿ ಘಟಕ ಮತ್ತು ಹಿಂದೂ ಪರ ಸಂಘಟನೆಗಳು ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶಿಸ ಬಾರದು ಎಂಬ ವಿಚಾರ ಪ್ರಧಾನವಾಗಿಟ್ಟುಕೊಂಡು ಹೋರಾಟ ತೀವ್ರಗೊಳಿಸಲು ನಿರ್ಧರಿಸಿವೆ. ಪಂದಳಂ ರಾಜಮನೆತನದ ಸದಸ್ಯರು ದೇಗುಲದ ಸುತ್ತಮುತ್ತ ಹೆಚ್ಚಿನ ಪ್ರಮಾಣದಲ್ಲಿ ಭದ್ರತಾ ಸಿಬಂದಿ ಪ್ರವೇಶಿಸಿದ್ದು ನೋವಿನ ವಿಚಾರ ಎಂದು ಹೇಳಿದ್ದಾರೆ.