Advertisement

ಸಚಿವಾಲಯದ ಮಾಜಿ ಗುತ್ತಿಗೆ ನೌಕರ ಸೆರೆ

06:37 AM Feb 15, 2019 | Team Udayavani |

ಬೆಂಗಳೂರು: ರಾಜ್ಯ ಸರ್ಕಾರದ ಪ್ರಭಾವಿ ಸಚಿವ ಎಂದು ಹೇಳಿಕೊಂಡು ತಮಿಳುನಾಡು ಮೂಲದ ಗೋಡಂಬಿ ಉದ್ಯಮಿ ರಮೇಶ್‌ ಎಂಬುವರಿಗೆ 1.12 ಕೋಟಿ ರೂ. ವಂಚಿಸಿದ ಪ್ರಕರಣ ಸಂಬಂಧ ಕಬ್ಬನ್‌ಪಾರ್ಕ್‌ ಪೊಲೀಸರು ವಿಧಾನ ಪರಿಷತ್‌ ಸಚಿವಾಲಯದ ಮಾಜಿ ಗುತ್ತಿಗೆ ನೌಕರನನ್ನು ಬಂಧಿಸಿದ್ದಾರೆ.

Advertisement

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮಹದೇವ್‌ (40) ಬಂಧಿತ. ಆರೋಪಿ 15 ವರ್ಷಗಳ ಕಾಲ ವಿಧಾನಸೌಧದಲ್ಲಿ ಗುತ್ತಿಗೆ ಆಧಾರದಲ್ಲಿ ಡಿ-ಗ್ರೂಪ್‌ ನೌಕರನಾಗಿ ಕೆಲಸ ಮಾಡುತ್ತಿದ್ದ ಆರೋಪಿ, ಮೈಸೂರು ರಸ್ತೆಯ ಕಸ್ತೂರಿನಗರದಲ್ಲಿ ವಾಸವಾಗಿದ್ದ. ಎರಡು ವರ್ಷಗಳ ಹಿಂದೆ ಕೆಲಸ ತೊರೆದು ಮನೆಯಲ್ಲೇ ಇದ್ದ. ಇತ್ತೀಚೆಗೆ ಹಣದಾಸೆಗೆ ವಂಚನೆ ಪ್ರಕರಣದ ಪ್ರಮುಖ ಆರೋಪಿ ಕಾರ್ತಿಕೇಯನ್‌ ಅಲಿಯಾಸ್‌ ಕೆ.ಕೆ.ಶೆಟ್ಟಿಗೆ ಸಹಾಯ ಮಾಡಿ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದರು.

ಕೋಟಿ ವಂಚನೆ ಪ್ರಕರಣ ಸಂಬಂಧ ಕಬ್ಬನ್‌ಪಾರ್ಕ್‌ ಪೊಲೀಸರು ಬುಧವಾರ ಶೇಷಾದ್ರಿಪುರ ನಿವಾಸಿ ಪಿ.ಕಾರ್ತಿಕೇಯನ್‌ ಅಲಿಯಾಸ್‌ ಕೆ.ಕೆ.ಶೆಟ್ಟಿ (60) ಸೇರಿ ಎಂಟು ಮಂದಿಯನ್ನು ಬಂಧಿಸಿದ್ದರು. ಆರೋಪಿ ಮಹದೇವ ಸುಮಾರು 20ಕ್ಕೂ ಹೆಚ್ಚು ಮಂದಿ ವಿಧಾನಸಭೆ ಮತ್ತು ಪರಿಷತ್‌ ಸದಸ್ಯರಿಗೆ ಆಪ್ತ ಸಹಾಯಕನಾಗಿದ್ದ. ಹೀಗಾಗಿ, ವಿಧಾನಸೌಧದ ಆಡಳಿತ ವಿಭಾಗದಿಂದ ಗುರುತಿನ ಚೀಟಿ ನೀಡಲಾಗಿತ್ತು. ಕೆಲಸ ಬಿಟ್ಟ ಬಳಿಕ ಗುರುತಿನ ಚೀಟಿ ವಾಪಸ್‌ ಮಾಡಿರಲಿಲ್ಲ.

ಈ ಮಧ್ಯೆ ಆರೋಪಿ ಕಾರ್ತಿಕೇಯನ್‌, ನಗರದ ಪ್ರಭಾವಿ ಸಚಿವರೊಬ್ಬರ ಜತೆ ಆಗಾಗ ವಿಧಾನಸೌಧಕ್ಕೆ ಬರುತ್ತಿದ್ದ. ಈ ವೇಳೆ ಮಹದೇವನ ಜತೆ ಆತ್ಮೀಯತೆ ಬೆಳೆದಿತ್ತು. ಅಲ್ಲದೆ, ಕಾರ್ತಿಕೇಯನ್‌ ವಿಧಾನಸೌಧಕ್ಕೆ ಬಂದಾಗ ಆತನಿಂದ 1000-2000 ರೂ. ಪಡೆಯುತ್ತಿದ್ದ  ಮಹದೇವ, ಸಚಿವಾಲಯದ ಖಾಲಿ ಕೊಠಡಿಗಳನ್ನು ವಿಶ್ರಾಂತಿ ಪಡೆಯಲು ಬಿಟ್ಟು ಕೊಡುತ್ತಿದ್ದ. ಈ ಬಗ್ಗೆ ಇತರೆ ಸಿಬ್ಬಂದಿ ಪ್ರಶ್ನಿಸಿದರೆ, ಜನಪ್ರತಿನಿಧಿಗಳ ಹೆಸರು ಹೇಳಿ ಸುಮ್ಮನಿರಿಸುತ್ತಿದ್ದ ಎಂದು ಪೊಲೀಸರು ಹೇಳಿದರು.

ಗುರುತಿನ ಚೀಟಿ ದುರ್ಬಳಕೆ: ಎರಡು ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದರೂ ಆರೋಪಿ ಗುರುತಿನ ಚೀಟಿಯನ್ನು ವಾಪಸ್‌ ನೀಡದೆ ದುರ್ಬಳಕೆ ಮಾಡಿಕೊಂಡು ಆಗಾಗ ವಿಧಾನಸೌಧಕ್ಕೆ ಬಂದು ಹೋಗುತ್ತಿದ್ದ. ಈ ನಡುವೆ ಕೆಲ ತಿಂಗಳ ಹಿಂದೆ ಕಾರ್ತಿಕೇಯನ್‌ ಆರೋಪಿಗೆ ಕರೆ ಮಾಡಿ ವಿಧಾನಸೌಧದ ಮೊದಲ ಮಹಡಿಯಲ್ಲಿ ಯಾರಾದರೂ ಸಚಿವರೊಬ್ಬರ ಕೊಠಡಿಯನ್ನು ಕೊಡಿಸುವಂತೆ ಕೇಳಿಕೊಂಡಿದ್ದ.

Advertisement

ಈ ಹಿನ್ನೆಲೆಯಲ್ಲಿ ಮೊದಲನೇ ಮಹಡಿಯಲ್ಲಿ  ಕೊಠಡಿಯೊಂದನ್ನು ಕಾಯ್ದಿರಿಸಿದ್ದ. ಬಳಿಕ ತಮಿಳುನಾಡಿನ ಉದ್ಯಮಿ ರಮೇಶ್‌ರನ್ನು ಕರೆಸಿಕೊಂಡ ಆರೋಪಿ, ಕಾರ್ತಿಕೇಯನ್‌ ವ್ಯವಹಾರ ಮುಗಿಸಿ, ಹೋಟೆಲ್‌ನಲ್ಲಿ ಹಣ ಕೊಡುವಂತೆ ಹೇಳಿ ಕಳುಹಿಸಿದ್ದ. ಕೊಠಡಿ ಕಾಯ್ದಿರಿಸಿದ್ದಕ್ಕೆ ಮಹದೇವ್‌ಗೆ ಮೂರು ಸಾವಿರ ರೂ. ಕೊಟ್ಟಿದ್ದ ಎಂದು ಪೊಲೀಸರು ಹೇಳಿದರು.

ವಾಹನ ಗುರುತು ಪತ್ತೆಯಾಗಿಲ್ಲ: ಆರೋಪಿ ಕಾರ್ತಿಕೇಯನ್‌ ಬಳಕೆ ಮಾಡಿಕೊಳ್ಳುತ್ತಿದ್ದ ಶಾಸಕರ ಭವನದ ಕಾರುಗಳ ಪತ್ತೆ ಕಾರ್ಯ ಮುಂದುವರಿದಿದ್ದು, ಆತನಿಗೆ ಸಹಾಯ ಮಾಡಿರುವ ಕೆಲ ವ್ಯಕ್ತಿಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕೃತ್ಯದಲ್ಲಿ ಭಾಗಿಯಾಗಿಲ್ಲ: ಮಹದೇವ್‌ ಪ್ರಾಥಮಿಕ ಹೇಳಿಕೆಯಲ್ಲಿ “ಕಾರ್ತಿಕೇಯನ್‌ ವಂಚನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆತ ತನಗೆ ಕರೆ ಮಾಡಿ ಕೊಠಡಿ ಕಾಯ್ದಿರಿಸುವಂತೆ ಸೂಚಿಸುತ್ತಿದ್ದ. ಅದರಂತೆ ಖಾಲಿಯಿದ್ದ ಕೊಠಡಿಗಳನ್ನು ಆತನಿಗೆ ತೋರಿಸುತ್ತಿದ್ದೆ. ಇದಕ್ಕೆ ಕಾರ್ತಿಕೇಯನ್‌ ಹಣ ಕೊಡುತ್ತಿದ್ದ’ ಎಂದು ಹೇಳಿಕೆ ನೀಡಿರುವುದಾಗಿ ಪೊಲೀಸರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next