Advertisement

ವಿದೇಶಿ ಎಡಪಂಥೀಯರು ನಿಲುವುಗಳನ್ನು ನಮ್ಮವರು ನಕಲು ಮಾಡುತ್ತಾರೆ

07:26 AM Jan 20, 2019 | Team Udayavani |

ಮೈಸೂರು: ನಗರದ ಕಲಾಮಂದಿರದಲ್ಲಿ ನಡೆದ ಭೈರಪ್ಪ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಎಸ್‌. ಎಲ್‌. ಭೈರಪ್ಪ ಅವರನ್ನು ಲೇಖಕಿ ಶೆಫಾಲಿ ವೈದ್ಯ ಸಂದರ್ಶಿಸುವ ಕಾರ್ಯಕ್ರಮವಿತ್ತು. ಆ ಸಂದರ್ಶನದ ಕಿರು ನೋಟ ಇಲ್ಲಿದೆ.

Advertisement

* ಪ್ರಶ್ನೆ: ತಾವು ಯಾವುದೇ ಇಸಂಗಳಿಗೆ ಸಿಲುಕದೇ ಇಷ್ಟೊಂದು ವೈವಿಧ್ಯಮಯವಾಗಿ ಬರೆದದ್ದು ಹೇಗೆ? 
ಭೈರಪ್ಪ: 
ನಾನು ತತ್ವಶಾಸ್ತ್ರವನ್ನು ಅಧ್ಯಯನ ಮಾಡಿರುವುದರಿಂದ, ಅದರ‌ ಶಾಖೆಗಳಾದ ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮನೋವಿಜ್ಞಾನ ಎಲ್ಲವೂ ಸ್ಪಷ್ಟವಾಗಿ ಅರ್ಥವಾಗಿದ್ದರಿಂದ ದ್ವಂದ್ವಗಳಾಗಲಿಲ್ಲ. ಹಾಗಾಗಿ ನಾನು ಯಾವುದೇ ಇಸಂಗಳಿಗೆ ಒಳಗಾಗಲಿಲ್ಲ.

* ಪ್ರಶ್ನೆ: ಮಹಿಳಾ ಒಳತೋಟಿಗಳನ್ನು ಸಮರ್ಥವಾಗಿ ವಿವರಿಸುತ್ತೀರಲ್ಲ ಅದು ಹೇಗೆ?
ಭೈರಪ್ಪ: 
ಜೀವನಾನುಭವ, ಓದಿ ಆರ್ಥಮಾಡಿಕೊಂಡಿದ್ದರಿಂದ ಇದು ಸಾಧ್ಯವಾಯಿತು. ನನ್ನನ್ನು ಕಾದಂಬರಿಕಾರನ್ನಾಗಿ ಮಾಡಿದ್ದು, ಅನ್ವೇಷಣೆ . ತಂತ್ರಗಳ ಮೇಲೆ ಹಿಡಿತ ಸಾಧಿಸಿಕೊಟ್ಟಿದ್ದು, ಪರ್ವ ಕಾದಂಬರಿ. ಪರ್ವದ ನಂತರ ಬಂದ ಕೃತಿಗಳೆಲ್ಲವೂ, ಪ್ರತಿಯೊಂದಕ್ಕೂ ಬೇರೆ ಬೇರೆ ತಂತ್ರಗಳನ್ನು ಬಳಸಿಕೊಂಡಿದ್ದೇನೆ. ಇದರಲ್ಲಿ ಕೆಲವು ಪುನರಾವರ್ತಿತವಾಗಿರಬಹುದು.

* ಪ್ರಶ್ನೆ: ಕಾದಂಬರಿಯ ಅಂತ್ಯವನ್ನು ಮೊದಲೇ ನಿರ್ಧರಿಸಿರುತ್ತೀರಾ?
ಭೈರಪ್ಪ:
ಬರೆಯುವಾಗಲೇ ಹೀಗೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಒಂದೊಂದು ಪಾತ್ರಗಳು ತಂತಾನೇ ತೆರೆದುಕೊಳ್ಳುತ್ತಾ ಹೋಗುತ್ತವೆ. ಯಾವುದೇ ಕಾದಂಬರಿ ನನಗೆ ಅರಿವಿಲ್ಲದಂತೆ ತಾನಾಗೇ ನಿಲ್ಲುತ್ತದೆ. ಪ್ರಪಂಚವನ್ನೂ ಸುತ್ತಿದ್ದೇನೆ. ನಾನು ಇಡೀ ಭಾರತವನ್ನು ಸುತ್ತಿದ್ದೇನೆ. ವೈವಿಧ್ಯತೆಗಳ ನಡುವೆಯೂ ಇಡೀ ಭಾರತ ಒಂದೇ ಎಂದು ಅನಿಸುತ್ತದೆ. ಪಾತ್ರಗಳು ತಾವಾಗೇ ತೆರೆದುಕೊಳ್ಳುತ್ತವೆ. ಸಮಾಜವನ್ನು ತಿದ್ದುವ ಕೆಲಸ ನಾನು ಮಾಡುವುದಿಲ್ಲ. ಓದುಗನ ಸಂವೇದನೆಗಳನ್ನು ಇನ್ನಷ್ಟು ಸೂಕ್ಷ್ಮಗೊಳಿಸಬಲ್ಲೆ.

* ಪ್ರಶ್ನೆ: ನಿಮ್ಮನ್ನು ವಿರೋಧಿಸುತ್ತಲೇ ಇರುವವರ ಬಗ್ಗೆ ನಿಮ್ಮ ಅಭಿಪ್ರಾಯವೇನು? 
ಭೈರಪ್ಪ: 
ಅಂಥವರನ್ನು ನಿರ್ಲಕ್ಷ್ಯ ಮಾಡುತ್ತೇನೆ. 

Advertisement

* ಪ್ರಶ್ನೆ: ಯಾರಾದರೂ ನಿಮ್ಮನ್ನು ಟೀಕಿಸಿದಾಗ, ಅವರನ್ನು ಪ್ರತಿ ದೂಷಿಸುವ ಕೆಲಸವನ್ನು ನೀವು ಮಾಡಲಿಲ್ಲ, ಇದು ಹೇಗೆ?
ಭೈರಪ್ಪ: 
ಅವರನ್ನು ನಾನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ನಾನು ಕೇವಲ ಭಾರತದಲ್ಲಿ ಎಡಪಂಥೀಯ ಚಿಂತನೆ ಬೆಳೆಯಿತು ಎಂಬುದನ್ನು ಮಾತ್ರ ಅಧ್ಯಯನ ಮಾಡಿಲ್ಲ. ಅದರ ಮೂಲಗಳನ್ನೆಲ್ಲ ತಿಳಿದಿದ್ದೇನೆ. ವಿದೇಶಗಳಲ್ಲಿ ಎಡಪಂಥೀಯರು ಏನು ಮಾಡುತ್ತಾರೋ ಅದನ್ನು ನಮ್ಮ ಜನ ನಕಲು ಮಾಡಿದ್ದಾರೆ. ಸ್ತ್ರೀವಾದಗಳನ್ನು ಓದಿದ್ದೇನೆ.

ಎಪ್ಪತ್ತು ಎಂಬತ್ತರದ ದಶಕದವರೆಗೂ ಅವುಗಳನ್ನು ಓದಿದೆ. ಆಮೇಲೆ ಈ ಕೃತಿಗಳನ್ನು ಓದುವುದು ನನ್ನ ಸಮಯ ವ್ಯರ್ಥ ಮಾಡಿದಂತೆ ಎಂದನಿಸಿ ಬಿಟ್ಟೆ. ಅವು ನನ್ನ ಸೃಜನಶೀಲತೆಯನ್ನು ಕೆಡಹುವಂತಿವೆ. ಯಾವುದೇ ಸೃಜನಶೀಲ ಲೇಖಕ ಒಡೆಯುವ ಕ್ರಿಯೆಗೆ ಇಳಿದರೆ ಆತನ ಸೃಜನಶೀಲತೆ ಅಳಿಯುತ್ತದೆ.

* ಪ್ರಶ್ನೆ: ನೀವೇಕೆ ಪ್ರವಾಸ ಕಥನ ಬರೆಯುವುದಿಲ್ಲ? ನಿಮ್ಮ ಕಾದಂಬರಿಗಳಲ್ಲಿ ನಿಮ್ಮ ಪ್ರವಾಸ ಕಾಣುತ್ತದೆಯಲ್ಲ?
ಭೈರಪ್ಪ: 
ಪ್ರವಾಸ ಕಥನ ಬರೆದರೆ ನನ್ನ ಕಲ್ಪನೆಗಳಿಗೆ ಅವಕಾಶ ದೊರಕುವುದಿಲ್ಲ. ನಾನು ಕಲ್ಪನೆಗೆ ಆದ್ಯತೆ ನೀಡುವ ಮನುಷ್ಯ. ಯಾರಾದರೂ ಉತ್ತಮ ಪತ್ರಕರ್ತರು ಪ್ರವಾಸ ಕಥನ ಬರೆಯಬಹುದು.

* ಪ್ರಶ್ನೆ: ಒಂದು ಪದದ ಹೆಸರನ್ನು  ಮಾತ್ರ ನಿಮ್ಮ ಕಾದಂಬರಿಗೆ ನೀಡುವುದು ಹೇಗೆ? 
ಒಂದು ಪದವಾದಾಗ ಅದು ವಿವಿಧ ದಿಕ್ಕಿನಲ್ಲಿ ಚಲಿಸುವ ಗುಣ ಹೊಂದಿರುತ್ತದೆ. ಒಂದು ಕೃತಿಯನ್ನು ಆಯ್ಕೆ ಮಾಡಿದ ಮೇಲೆ ನನ್ನಲ್ಲಿ ಒಂದು ಪದ ಹೊಳೆಯುತ್ತದೆ. 

ತಮ್ಮ ಪ್ರವಾಸಗಳ ಕುರಿತು ಮಾತನಾಡಿದ ಅವರು, ಟಿರ್ಕಿಗೆ ಭೇಟಿ ನೀಡಿದಾಗ ಓದಿದ ಒಂದು ಕೃತಿ ಕುರಿತು ಮಾತನಾಡಿದ ಎಸ್‌.ಎಲ್‌.ಭೈರಪ್ಪ ಅವರು, ಟರ್ಕಿಯ ಕೆಮಲ್‌ಪಾಷಾ ಕ್ರಾಂತಿಕಾರಿ ಧೋರಣೆ ಉಳ್ಳವನಾಗಿದ್ದನು. ಅವನಿಗೆ ಸುತ್ತಲಿನ ಮುಸ್ಲಿಂ ರಾಷ್ಟ್ರಗಳು ವಿರೋಧವಾಗಿದ್ದವು. ಕೆಮಲ್‌ 7 ಮಂದಿ ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದ. ಅವರಿಗೆ ಆಧುನಿಕ ಶಿಕ್ಷಣ ನೀಡಿದ್ದ.

ಇಸ್ಲಾಮ್‌ನಲ್ಲಿ ದತ್ತು ಪಡೆಯುವುದಿಲ್ಲ. ಆತ ಕ್ರಾಂತಿಕಾರಿ ಮನುಷ್ಯ. ಅವನನ್ನು ಭಾರತದಲ್ಲಿನ ಮುಸ್ಲಿಮರೂ ವಿರೋಧಿಸಿದ್ದರು. ಗಾಂಧೀಜಿ ಇದಕ್ಕೆ ಅನುಗುಣವಾಗಿ ಖೀಲಾಫ‌ತ್‌ ಚಳವಳಿ ನಡೆಸಿದರು. ಕೆಮಲ್‌ನನ್ನು ಟೀಕಿಸಿದ ಗಾಂಧೀಜಿ ಸಂತರೇ? ಹೋಲಿಕೆ ಮಾಡಿದರೆ ಗಾಂಧೀಜಿ, ನೆಹರೂಗಿಂತ ಕೆಮಲ್‌ಪಾಷಾ ದೊಡ್ಡ ಮನುಷ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next