ಘಲ್ ಘಲ್ ಎಂದು ಸದ್ದು ಮಾಡುವ ಕಾಲ್ಗೆಜ್ಜೆ ಯಾರಿಗೆ ಇಷ್ಟವಿಲ್ಲ ಹೇಳಿ? ಮುದ್ದು ಮಕ್ಕಳು ಕಾಲ್ಗೆಜ್ಜೆ ತೊಟ್ಟು ಮನೆ ತುಂಬಾ ಓಡಾಡುವಾಗ ಕೇಳಿಸುವ ಆ ಸದ್ದು ಕಿವಿಗೆ, ಮನಸ್ಸಿಗೆ ಮುದ ನೀಡುತ್ತದೆ. ಹುಡುಗಿಯರ ಗೆಜ್ಜೆ ಸದ್ದು ಹುಡುಗರ ನಿದ್ದೆಯನ್ನೇ ಕಸಿದು ಬಿಡಬಲ್ಲದು. ಅದಕ್ಕೇ ಇರಬೇಕು, ಪ್ರೇಯಸಿಗೆ ಕೊಡುವ ಉಡುಗೊರೆಯಲ್ಲಿ ಕಾಲ್ಗೆಜ್ಜೆಗೆ ಮೊದಲ ಸ್ಥಾನ.
ಅನಾದಿಕಾಲದಿಂದಲೂ ಹೆಣ್ಮಕ್ಕಳ ಪ್ರೀತಿಗೆ ಪಾತ್ರವಾಗಿರುವ ಆಭರಣ ಈ ಕಾಲ್ಗೆಜ್ಜೆ. ಕೇವಲ ಚಿನ್ನ, ಬೆಳ್ಳಿಗೆ ಸೀಮಿತವಾಗಿದ್ದ ಗೆಜ್ಜೆಗಳು ಈಗ ಪ್ಲಾಸ್ಟಿಕ್, ಗಾಜು, ತಾಮ್ರ, ಕಂಚು, ವಜ್ರ, ಮುತ್ತು, ಹವಳ, ರತ್ನ ಹಾಗೂ ಮರದ ತುಂಡಿನಲ್ಲಿಯೂ ಲಭ್ಯ! ದಶಕದ ಹಿಂದೆ ಒಂದೆಳೆಯ ಚಿಕ್ಕ ಸರಪಳಿಯಂತೆ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಗೆಜ್ಜೆ ಇದೀಗ ಹೂವು, ಸೂರ್ಯ, ಚಂದ್ರ, ನಕ್ಷತ್ರದಂಥ ಆಕೃತಿಗಳಲ್ಲಿ ಮತ್ತು ಅಕ್ಷರಗಳು ಹಾಗೂ ಪದಗಳ ಆಕೃತಿಯಲ್ಲೂ ಮೂಡಿ ಬಂದಿದೆ.
ಕಾಲ್ಗೆಜ್ಜೆಯಲ್ಲಿ “ಪ್ರೀತಿ’: ತಮ್ಮ ಹೆಸರು, ಪ್ರೀತಿ ಪಾತ್ರರ ಹೆಸರು, ಜನ್ಮ ದಿನಾಂಕ ಮುಂತಾದವುಗಳನ್ನೂ ಈಗ ಗೆಜ್ಜೆಯಲ್ಲಿ ಕಾಣಬಹುದು. ಹುಡುಗಿಯರಯ ಇಂಥದ್ದೇ ಅಕ್ಷರ ಅಥವಾ ಪದಗಳ ವಿನ್ಯಾಸದ ಗೆಜ್ಜೆ ಬೇಕು ಎಂದು ಅಕ್ಕಸಾಲಿಗರಲ್ಲಿ ಹೇಳಿ ಮಾಡಿಸಿಕೊಳ್ಳುತ್ತಾರೆ. ಇಂಥ ಗೆಜ್ಜೆಗಳು ಆನ್‌ಲೈನ್‌ನಲ್ಲೂ ಲಭ್ಯ. ಲೆಟರ್ ಆ್ಯಂಕ್ಲೆಟ್ (ಅಂದರೆ ಅಕ್ಷರಗಳುಳ್ಳ ಕಾಲ್ಗೆಜ್ಜೆ) ಎಂದು ಗೂಗಲ್‌ನಲ್ಲಿ ಟೈಪ್ ಮಾಡಿದರೆ ಸಾಕು. ಹಲವಾರು ಬ್ರ್ಯಾಂಡ್‌ಗಳ ಲಿಂಕ್‌ಗಳು ನಿಮ್ಮ ಮುಂದೆ ಪ್ರತ್ಯಕ್ಷ. ಪರ್ಸನಲೈಜ್ಡ್ ಅಥವಾ ಕಸ್ಟಮೈಜ್ಡ್ ಕಾಲ್ಗೆಜ್ಜೆ ಮಾಡಿಕೊಡುವ ಅಂಗಡಿ ಮತ್ತು ಆನ್‌ಲೈನ್ ಸರ್ವಿಸ್‌ಗಳು ಲಭ್ಯ ಇರುವ ಕಾರಣ ಇಂಥ ಕಾಲ್ಗೆಜ್ಜೆಗಳನ್ನು ಉಡುಗೊರೆಯಾಗಿಯೂ ನೀಡಬಹುದು.
“ಪೆಟ್’ ಗೆಜ್ಜೆ: ನಿಮ್ಮ ಪೆಟ್ ನೇಮ್, ತಮ್ಮ ಹೆಸರಿನ ಮೊದಲ ಅಕ್ಷರ, ಸಾಕು ಪ್ರಾಣಿಗಳ ಹೆಸರನ್ನೂ ಕಾಲ್ಗೆಜ್ಜೆಗಳಲ್ಲಿ ಮೂಡಿಸಬಹುದು. ಅಲ್ಲದೆ ಇಂಥ ಬ್ರೇಸ್ಲೆಟ್‌ಗಳು ಹೇಗಿದ್ದರೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಅವುಗಳನ್ನೇ ಕಾಲಿಗೆ ಹಾಕಿಕೊಂಡರೆ ಆಂಕ್ಲೆಟ್ ಆಗುತ್ತವೆ. ಕೈಗೆ ತೊಡುವುದನ್ನೇ ಕಾಲಿಗೂ ತೊಟ್ಟರಾಯಿತು. ಇದೇ ರೀತಿ ಕೊರಳಿಗೆ ತೊಡುವ ಸರವನ್ನೂ ಕಾಲ್ಗೆಜ್ಜೆಯಂತೆ ತೊಡಬಹುದು!
ಚಿಕ್ಕವರಾಗಿ¨ªಾಗ ಮಾಡಿಸಿದ ಸರ ಈಗ ಧರಿಸಲು ಒಂದು ವೇಳೆ ಚಿಕ್ಕದಾಗುತ್ತದೆ ಎಂದಾದರೆ ಸ್ವಲ್ಪ ಬಿಗಿಯಾಗಿಸಿ ಕಾಲ್ಗೆಜ್ಜೆಯಂತೆ ತೊಡಬಹುದು. ಫ್ರೆಂಡ್‌ಶಿಪ್ ಡೇ ಬಂದಾಗ ಫ್ರೆಂಡ್‌ಶಿಪ್ ಬ್ಯಾಂಡ್‌ಗಳ ಹಾವಳಿ ಜೋರು. ಕೈಗೆ ಕಟ್ಟುವ ಆ ಬ್ಯಾಂಡ್‌ಗಳನ್ನು ಕಾಲಿಗೂ ಕಟ್ಟಿಕೊಳ್ಳಬಹುದು ಎಂದರೆ ನೀವು ನಂಬಲೇಬೇಕು. ಫ್ರೆಂಡ್‌ಶಿಪ್, ಲವ್ ಇತ್ಯಾದಿ ಪದಗಳುಳ್ಳ ಕಾಲ್ಗೆಜ್ಜೆಗಳನ್ನು ಬ್ಯಾಂಡ್‌ನಂತೆಯೇ ಉಡುಗೊರೆಯಾಗಿ ಗೆಳತಿಯರಿಗೆ ನೀಡುತ್ತಾರೆ!
ವ್ಯಕ್ತಿತ್ವಕ್ಕೆ ತಕ್ಕ ಗೆಜ್ಜೆ: ಗಂಟೆ, ಬೀಗ ಅಥವಾ ಬೀಗದ ಕೈ, ಜ್ಯಾಮಿತಿಯ ಆಕಾರಗಳು, ನೆಚ್ಚಿನ ಹಾಡಿನ ಸಾಲುಗಳು, ಘೋಷವಾಕ್ಯ, ಚಿತ್ರ ವಿಚಿತ್ರವಾದ ಆಕೃತಿಗಳು, ತಮ್ಮ ವ್ಯಕ್ತಿತ್ವ ಬಿಂಬಿಸುವ ಪದಗಳು ಅಥವಾ ಚಿಹ್ನೆಗಳು, ಹೀಗೆ ಗೆಜ್ಜೆಯಲ್ಲಿ ಊಹಿಸಲೂ ಸಾಧ್ಯವಿಲ್ಲದಷ್ಟು ಆಯ್ಕೆಗಳಿವೆ. ಯಾವ ರೀತಿ ಟ್ಯಾಟೂ (ಹಚ್ಚೆ) ಹಾಕಿಸಿಕೊಂಡು ಜನರು ತಮ್ಮ ವಿಚಾರಗಳನ್ನು ವ್ಯಕ್ತ ಪಡಿಸುತ್ತಾರೋ ಅದೇ ರೀತಿ ಉಡುಪಿಗೆ ಹೋಲುವಂತೆ ಅಥವಾ ಮೂಡ್‌ಗೆ ಅನುಗುಣವಾಗಿ ಕಾಲ್ಗೆಜ್ಜೆ ತೊಡಬಹುದು. ಇದು ಹೊಸ ಟ್ರೆಂಡ್ ಕೂಡ ಹೌದು.
* ಅದಿತಿಮಾನಸ ಟಿ.ಎಸ್