ಶಹಾಪುರ: ಕರ್ನಾಟಕದ ಜಾನಪದ ಸಂಸ್ಕೃತಿ ಭಾರತದಲ್ಲಿಯೇ ವಿಶಿಷ್ಟ ಸ್ಥಾನಮಾನ ಪಡೆದುಕೊಂಡಿದೆ. ಇಲ್ಲಿನ ಗ್ರಾಮೀಣ ಭಾಗದ ಜನರ ಬದುಕಿನಲ್ಲಿ ಜಾನಪದ ಹಾಸುಹೊಕ್ಕಾಗಿದೆ. ಹೀಗಾಗಿ ಜಾನಪದ ಕರುನಾಡಿನ ಮೂಲ ಜೀವಾಳವಾಗಿದೆ ಎಂದು ಸ್ಥಳೀಯ ಹಿರೇಮಠದ ವೀರಮಹಾಂತ ಶಿವಾಚಾರ್ಯರು ಹೇಳಿದರು.
ತಾಲೂಕಿನ ದೋರನಹಳ್ಳಿ ಹಿರೇಮಠ ಜಾತ್ರಾ ಮಹೋತ್ಸವ ಅಂಗವಾಗಿ ಬಸಂತಪುರದ ಅನಿಕೇತನ ಟ್ರಸ್ಟ್ ಆಯೋಜಿಸಿದ್ದ
ಜಾನಪದ ಜಾತ್ರೆ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮದ ರೈತಾಪಿ ಜನರು, ಮದುವೆ, ಮುಂಜಿ, ಮಗುವಿನ ತೊಟ್ಟಿಲು, ಜವಳ ಇತರೆ ಸಮಾರಂಭ ಸೇರಿದಂತೆ ಹೊಲದಲ್ಲಿ ಬೀಜ ಬಿತ್ತುವಾಗ, ಪೈರು ಕೊಯ್ಯುವಾಗ ಮತ್ತು ರಾಶಿ ಮಾಡುವಾಗ ಹೀಗೆ ವಿವಿಧ ಸಂದರ್ಭದಲ್ಲಿ ಜಾನಪದ ಗೀತೆ ಹಾಡುವುದು ತಿಳಿಯುತ್ತದೆ. ಪ್ರತಿಯೊಂದು ಸಂದರ್ಭ ಬೀಸುವ, ಧಾನ್ಯಗಳನ್ನು ಹಸನುಗೊಳಿಸುವ ಮತ್ತು ಅರಿಶಿಣಿ ಹಚ್ಚುವ ಸಮಾರಂಭ, ಮನೆ ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ಹಾಗೂ ಕೌದಿ ಲ್ಯಾವಿ ಮಾಡುವಾಗ ಹಲವಾರು ಸಂದರ್ಭಕ್ಕನುಗುಣವಾಗಿ ಪದಗಳನ್ನು ಕಟ್ಟುತ್ತಾರೆ ಮತ್ತು ಲಯಬದ್ಧವಾಗಿ ಹಾಡುತ್ತಾರೆ. ಹೀಗಾಗಿ ಜಾನಪದ ಈ ಭಾಗದ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿದೆ ಎಂದರು.
ಪ್ರಸ್ತುತ ಜೀವನ ಶೈಲಿ ಬದಲಾಗುತ್ತಿದೆ. ಬೆಳಗ್ಗೆ ಮೊಬೈಲ್ ರಿಂಗ್ ಆದರೆ ಬೆಳಗಾಗುತ್ತದೆ. ಆಧುನಿಕ ಯುಗದ ಭರಾಟೆಯಲ್ಲಿ ಟಿವಿ ಮೊಬೈಲ್‌ಗಳಿಂದ ನಮ್ಮ ಸಂಸ್ಕೃತಿ ಹಾಳಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಹಾರಣಗೇರ, ಬಸವರಾಜು ಸಿನ್ನೂರ, ಈಶ್ವರಪ್ಪಗೌಡ, ವೀರಸಂಗಣ್ಣ ದೇಸಾಯಿ, ಸಂಗಣ್ಣ ಮಲಗೊಂಡ, ಭಗವಂತರಾಯ ಮಲ್ಲಗೊಂಡ, ಗೊಲ್ಲಾಳಪ್ಪಗೌಡ ಗೋಲಗೇರಿ ಸೇರಿದಂತೆ ಇತರರಿದ್ದರು.