Advertisement

ಹೂವು ಹೊನ್ನಾಯಿತು !

01:50 PM Dec 04, 2017 | |

ಮಲೆನಾಡಿನ ಗ್ರಾಮೀಣ ಯುವಕರು ಓದಿನ ನಂತರ ಉದ್ಯೋಗ ಅರಸುತ್ತಾ ನಗರವನ್ನು ಸೇರುವುದು ಸಾಮಾನ್ಯ ಸಂಗತಿ. ಆದರೆ ಈ  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಕೋಟೆಗದ್ದೆಯ ಯುವಕ  ಕೆ.ಬಿ.ಪ್ರವೀಣ ಉದ್ಯೋಗಕ್ಕಾಗಿ ಹೂವಿನ ಹಿಂದೆ ಬಂದಿದ್ದಾರೆ! ಕೊಣಂದೂರು-ತೀರ್ಥಹಳ್ಳಿ ಮಾರ್ಗದ ಹೆದ್ದಾರಿ ಸಮೀಪದಲ್ಲಿಯೇ ಇವರ ಮನೆ, ಜಮೀನು ಇದೆ. ಮನೆಯ ಬಲಭಾಗದ ಖಾಲಿ ಸ್ಥಳದಲ್ಲಿ ಪಾಲಿ ಹೌಸ್‌ ನಿರ್ಮಿಸಿ ಪುಷ್ಪ ಕೃಷಿ ನಡೆಸುತ್ತಿದ್ದಾರೆ.

Advertisement

 4 ವರ್ಷಗಳ ಹಿಂದೆ ಇವರ ಸಹೋದರ ಕೆ.ಬಿ.ವರುಣ ಹಾಗೂ ಚಿಕ್ಕಪ್ಪನ ಮಗ ಸಚಿನ್‌,  ಕೃಷಿಯನ್ನು ಲಾಭದಾಯಕವಾಗಿಸಲು ಪಾಲಿ ಹೌಸ್‌ ನಿರ್ಮಿಸುವ  ಯೋಜನೆ ರೂಪಿಸಿದರು. 10 ಲಕ್ಷ ವೆಚ್ಚದಲ್ಲಿ ಪಾಲಿ ಹೌಸ್‌ ನಿರ್ಮಿಸಿ ಪುಷ್ಪ ಕೃಷಿ ಆರಂಭಿಸಿದರು. ಆರಂಭದ 2 ವರ್ಷ  ಕಾರ್ನೇಯಾ ಫ್ಲವರ್‌ ಬೆಳೆದರು. ಇದರಿಂದ ಖರ್ಚೆಲ್ಲ ಕಳೆದು ರೂ.3 ಲಕ್ಷ ಲಾಭ ದೊರೆತಿತ್ತು. ನಂತರ 1 ವರ್ಷ ಕ್ರಷನ್‌ ಪ್ಲವರ್‌ (ರಬ್ಬರ್‌ ಬುಷ್‌)  ಬೆಳೆದಿದ್ದರು.ಇದರಿಂದ ಸುಮಾರು ರೂ.60 ಸಾವಿರ ಲಾಭ ಕೈಗೆ ಬಂತು. ಈ ವರ್ಷ ದೀಪಾವಳಿ ಮತ್ತು ಕಾರ್ತಿಕ ದೀಪೋತ್ಸವ ಹಬ್ಬಗಳನ್ನು  ದೃಷ್ಟಿಯಲ್ಲಿಟ್ಟುಕೊಂಡು ಚೆಂಡು ಹೂವಿನ ಕೃಷಿ ನಡೆಸಿ ಅದರಿಂದಲೂ ಲಾಭ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. 

5,000 ರೂಪಾಯಿ ಕೊಟ್ಟು 200 ಗ್ರಾಂ.ಬೀಜ ಖರೀದಿಸಿದ್ದರು. ಬೀಜ ಬಿತ್ತಿ ಮೊಳಕೆ ಬರಿಸಿ ಆಗಸ್ಟ್‌ ತಿಂಗಳಲ್ಲಿ ನಾಟಿ ಮಾಡಿದ್ದರು. ಇವುಗಳ ಪೈಕಿ ಸುಮಾರು 20,00 ಹಳದಿ, 500 ಕೇಸರಿ ಬಣ್ಣದ ಚೆಂಡು ಹೂವಿನ ಗಿಡ ಬೆಳೆಸಿದ್ದಾರೆ. ಪಾಲಿ ಹೌಸ್‌ ಒಳಗೆ ಮಲ್ಟಿಂಗ್‌ ವ್ಯವಸ್ಥೆ ಮಾಡಿದ್ದರಿಂದ  2 ದಿನಕ್ಕೊಮ್ಮೆ ನೀರು ಬಿಟ್ಟರೂ ತೊಂದರೆ ಇಲ್ಲ. ಪ್ರತಿ 15 ದಿನಕ್ಕೊಮ್ಮೆ ಜೀವಾಮೃತ ಮತ್ತು ಸಗಣಿ ಗೊಬ್ಬರವನ್ನು ದ್ರವರೂಪದಲ್ಲಿ ಗಿಡಗಳಿಗೆ ನೀಡುತ್ತಾರೆ. ಗಿಡದ ಸುಳಿಗಳಿಗೆ ರೋಗ ಬಾರದಂತೆ ಔಷಧ ಸಿಂಪಡಿಸುತ್ತಾರೆ. 

ಲಾಭ ಹೇಗೆ ?
ಇವರು ಒಟ್ಟು ಸುಮಾರು 2,500 ಚೆಂಡು ಹೂವಿನ ಗಿಡ ಬೆಳೆಸಿದ್ದಾರೆ. 60 ದಿನದಲ್ಲಿಯೇ ಹೂವಿನ ಮೊದಲ ಫ‌ಸಲು ಮಾರಾಟವಾಗಿದೆ.  ದೀಪಾವಳಿ ಹಬ್ಬದ ನಂತರ ತಿಂಗಳಿಡೀ ಕಾರ್ತಿಕ ದೀಪೋತ್ಸವ ಇತ್ಯಾದಿ ಹಬ್ಬಗಳು ಇರುವ ಕಾರಣ ಸ್ಥಳೀಯ ಗ್ರಾಮಗಳ ಜನರು ಇವರ ಹೂವು ಖರೀದಿಸಿದ್ದಾರೆ. ಕಿ.ಗ್ರಾಂ. ಒಂದಕ್ಕೆ ಸರಾಸರಿ ರೂ.60 ರಂತೆ 7 ಕ್ವಿಂಟಾಲ್‌ ಹಾಗೂ 1 ಕಿ.ಗ್ರಾಂ.ಗೆ ರೂ.100 ರಂತೆ 2 ಕ್ವಿಂಟಾಲ್‌ ಹೂವು ಮಾರಾಟವಾಗಿದೆ. ಹೀಗೆ ಒಟ್ಟು 9 ಕ್ವಿಂಟಾಲ್‌ ಚೆಂಡು ಹೂವಿನ ಫ‌ಸಲಿನಿಂದ  ಇವರಿಗೆ ರೂ.60 ಸಾವಿರ ಆದಾಯ ದೊರೆತಿದೆ. ಬೀಜ ಖರೀದಿ,ನಾಟಿ ಮಾಡುವಿಕೆ, ಗೊಬ್ಬರ,ಔಷಧ ಸಿಂಪಡನೆ, ಕೂಲಿ ನಿರ್ವಹಣೆ ಇತ್ಯಾದಿ ಎಲ್ಲ ಬಗೆಯ ಲೆಕ್ಕ ಹಾಕಿದರೂ 15 ಸಾವಿರ ಖರ್ಚಾಗಿದೆ. ಖರ್ಚುಗಳನ್ನೆಲ್ಲಾ ಕಳೆದು 45 ಸಾವಿರ ಲಾಭ ದೊರೆತಿದೆ. ಒಟ್ಟು 120 ದಿನದವರೆಗೆ ಚೆಂಡು ಹೂನ ಫ‌ಸಲು ಮಾರಾಟವಾಗಿದೆ. 

ಹೂವಿನ ಫ‌ಸಲು ಮುಗಿದ ನಂತರ ಇದೇ ಪಾಲಿ ಹೌಸ್‌ನಲ್ಲಿ ಅಡಿಕೆ,ಕಾಳು ಮೆಣಸು,ಕಾಫಿ ಇತ್ಯಾದಿ ನರ್ಸರಿ ಗಿಡ ಬೆಳೆಸಿ ಮಾರಾಟ ಮಾಡುವ ಯೋಜನೆ ರೂಪಿಸಿಕೊಂಡು ಕಾರ್ಯೋನ್ಮುಖರಾಗಿದ್ದಾರೆ. ಮಾತಿಗಾಗಿ ಇವರ ಮೊಬೈಲ್‌ ಸಂಖ್ಯೆ 9980021379 ನ್ನು ಸಂಪರ್ಕಿಸಬಹುದಾಗಿದೆ.

Advertisement

ಫೋಟೋ ಮತ್ತು ಲೇಖನ-ಎನ್‌.ಡಿ.ಹೆಗಡೆ ಆನಂದಪುರಂ

Advertisement

Udayavani is now on Telegram. Click here to join our channel and stay updated with the latest news.

Next