ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಐದು ದಿನ ನಡೆದ 11ನೇ ವೈಮಾನಿಕ ಪ್ರದರ್ಶನದಲ್ಲಿ “ಲೋಹದ ಹಕ್ಕಿಗಳ’ ಸ್ವತ್ಛಂದ ಹಾರಾಟಕ್ಕೆ 35ಕ್ಕೂ ಹೆಚ್ಚು ಜೀವಂತ ಹಕ್ಕಿಗಳು ಪ್ರಾಣ ತ್ಯಾಗ ಮಾಡಿವೆ.
ಅದೇ ರೀತಿ ಎಂಟು ನಾಯಿಗಳು “ಲೋಹದ ಹಕ್ಕಿಗಳ’ ಸುಗಮ ಹಾರಾಟಕ್ಕೆ ಜೀವತೆತ್ತಿವೆ. 5 ದಿನಗಳ ವೈಮಾನಿಕ ಪ್ರದರ್ಶನದಲ್ಲಿ ಯಲಹಂಕ ವಾಯುನೆಲೆಯ ರನ್‌ವೇ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ 35ಕ್ಕೂ ಹೆಚ್ಚು ಪಕ್ಷಿ ಮತ್ತು ಎಂಟು ನಾಯಿಗಳನ್ನು ಗುಂಡಿಟ್ಟು ಸಾಯಿಸಲಾಗಿದೆ.
ವೈಮಾನಿಕ ಪ್ರದರ್ಶನದ ವಾಯುನೆಲೆ ಹಾಗೂ ರನ್‌ವೇ ಪ್ರದೇಶದಲ್ಲಿ ಪಕ್ಷಿಗಳ ಹಾರಾಟ ಮತ್ತು ಪ್ರಾಣಿಗಳು ಬರುವುದನ್ನು ತಡೆಗಟ್ಟಲು ಸಾಕಷ್ಟು ಮುನ್ನೆಚ್ಚರಿಕಾ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತಾದರೂ ದಿಢೀರ್ ಕೆಲವು ಪಕ್ಷಿ-ಪ್ರಾಣಿ ಅಡ್ಡ ಬಂದಾಗ ಗುಂಡು ಹಾರಿಸಿ ಕೊಲ್ಲುವುದು ಮೊದಲಿನಿಂದಲೂ ನಡೆದುಬಂದಿರುವ ರೂಢಿ. ಅದರಂತೆ ಐದು ದಿನಗಳಲ್ಲಿ ತೀರಾ ಅನಿವಾರ್ಯ ಹಾಗೂ ಅತ್ಯಂತ ತುರ್ತು ಸಂದರ್ಭದಲ್ಲಿ 35ಕ್ಕೂ ಹೆಚ್ಚು ಪಕ್ಷಿಗಳನ್ನು ಹಾಗೂ ಎಂಟು ನಾಯಿಗಳನ್ನು “ಶೂಟರ್’ಗಳು ಗುಂಡಿಟ್ಟು ಕೊಂದಿದ್ದಾರೆ ಎಂದು ಭಾರತೀಯ ವಾಯುಸೇನೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಸಾಮಾನ್ಯವಾಗಿ ಪಕ್ಷಿಗಳು ಹಾರಾಡುವ ಸಂದರ್ಭದಲ್ಲಿ ವಿಮಾನಗಳ ಹಾರಾಟ ನಡೆಸಲಾಗುವುದಿಲ್ಲ. ನಮ್ಮ ಅನುಭವ ಮತ್ತು ಅಂದಾಜಿನಂತೆ ಹಕ್ಕಿಗಳು ಒಂದೇ ಜಾಗದಲ್ಲಿ ಸುಮಾರು 15 ನಿಮಿಷದಿಂದ ಅರ್ಧ ಗಂಟೆ ತನಕ ಹಾರಾಟ ನಡೆಸುತ್ತವೆ. ವೈಮಾನಿಕ ಪ್ರದರ್ಶನವಿರಲಿ ಅಥವಾ ದಿನನಿತ್ಯದ ತರಬೇತಿ ಮತ್ತು ವಿಶೇಷ ಹಾರಾಟವಿರಲಿ, ಪಕ್ಷಿಗಳು ಅಲ್ಲಿಂದ ಕದಲುವ ತನಕ ಕಾಯುತ್ತೇವೆ.
ಪ್ರಾಣಿ-ಪಕ್ಷಿಗಳನ್ನು ಕೊಲ್ಲಬಾರದೆಂದು ಕಾನೂನು ಇರುವುದು ನಿಜ. ಒಂದು ಪ್ರಾಣಿ ಅಥವಾ ಪಕ್ಷಿ ಬಗ್ಗೆ ಯೋಚಿಸಿದರೆ ಕೋಟ್ಯಂತರ ರೂ. ನಷ್ಟ ಹಾಗೂ ಮಾನವ ಪ್ರಾಣ ಹಾನಿ ಸಂಭವಿಸುತ್ತದೆ. ಹೀಗಾಗಿ, ಅಂತಹ ಕ್ರಮ ಅನಿವಾರ್ಯ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾಯೊಬ್ಬರು ಹೇಳುತ್ತಾರೆ. ಮಾಂಸ ಮಾರಾಟ ನಿಷೇಧ: ವೈಮಾನಿಕ ಪ್ರದರ್ಶನ ಆರಂಭವಾಗುವ ಒಂದು ವಾರ ಮುಂಚಿತವಾಗಿ ವಾಯುನೆಲೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾಂಸ ಮಾರಾಟ ಸಂಪೂರ್ಣ ನಿಷೇಧ ಮಾಡಲಾಗಿತ್ತು. ಮಾಂಸಹಾರಿ ಹೊಟೇಲ್‌ಗಳಿಗೂ ಕೆಲವೊಂದು ಸೂಚನೆ ನೀಡಲಾಗಿತ್ತು ಎಂದು ವಾಯು ಸೇನೆ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಅನಿವಾರ್ಯವಾದಲ್ಲಿ ಮಾತ್ರ ಶೂಟರ್ ಬಳಕೆ
ಪ್ರಾಣಿ-ಪಕ್ಷಿಗಳನ್ನು ಗುಂಡಿಟ್ಟು ಕೊಲ್ಲಬಾರದೆಂಬ ಕಾನೂನಿನ ಬಗ್ಗೆ ನಮ್ಮ ವಾದವಿಲ್ಲ. ಆದರೆ, ವಾಯು ನೆಲೆಗಳು ಹಾಗೂ ರನ್‌ವೇ ಪ್ರದೇಶಕ್ಕೆ ಅದರಿಂದ ವಿನಾಯಿತಿ ನೀಡಬೇಕು. ನಮಗೆ ಪ್ರಾಣಿ-ಪಕ್ಷಿಗಳ ಜೀವ ಎಷ್ಟೋ ಮುಖ್ಯವೋ, ಅದಕ್ಕಿಂತ ವಿಮಾನಗಳ ಸುರಕ್ಷಿತ ಹಾರಾಟವೂ ಅಷ್ಟೇ ಮುಖ್ಯ. ನಾವೇನು ಬೇಕಾಬಿಟ್ಟಿ,ಮನಬಂದಂತೆ ಅಗತ್ಯ ಇಲ್ಲದಿದ್ದರೂ ಪ್ರಾಣಿ-ಪಕ್ಷಿಗಳ ಮೇಲೆ ಗುಂಡು ಹಾರಿಸುವುದಿಲ್ಲ.ತೀರಾ ಅನಿವಾರ್ಯವಾದಲ್ಲಿ ಮಾತ್ರ ಶೂಟರ್‌ಗಳನ್ನು ಬಳಸುತ್ತೇವೆ. ರನ್‌ವೇಗಳ ರಡಾರ್ ಸ್ಟೇಷನ್ ಹಾಗೂ ವಾಯುನೆಲೆಯ ಆಯಕಟ್ಟಿನ ಜಾಗದಲ್ಲಿ ಶೂಟರ್‌ಗಳನ್ನು ನಿಯೋಜಿಸಲಾಗಿರುತ್ತದೆ. ನಮಗೆ ಪ್ರಾಣಿ-ಪಕ್ಷಿಗಳ ಜೀವನದ ಬಗ್ಗೆ ಕನಿಕರ ಇರುವುದರಿಂದಲೇ ಬಹುತೇಕ ಸಂದರ್ಭಗಳಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಬಳಸಿ ಅವುಗಳನ್ನು ಓಡಿಸಲಾಗುತ್ತದೆ.
ಅಡುಗೆ ಅನಿಲ ಸಿಲಿಂಡರ್‌ನಿಂದ ಅನಿಲ ಹೊರ ಬರುವ ಮಾರ್ಗದಲ್ಲಿ ವಿಶೇಷ ಉಪಕರಣ ಅಳವಡಿಸಲಾಗಿರುತ್ತದೆ. ಅದರಲ್ಲಿ ಅನಿಲ ಶೇಖರಣೆ ಆಗಿ ಸಿಲಿಂಡರ್ ಸ್ಫೋಟ ಆದಂತಹ ಭಾರಿ ಸದ್ದು ಬರುತ್ತದೆ. ಅದರಿಂದ ಪ್ರಾಣಿ-ಪಕ್ಷಿಗಳು ದೂರ ಹೋಗುತ್ತವೆ. ಈ ಸಿಲಿಂಡರ್ “ಸ್ಫೋಟ’ದಿಂದ ದೊಡ್ಡ ಹಾನಿ ಆಗುವುದಿಲ್ಲ ಎಂದು ವಾಯುಸೇನೆ ಅಧಿಕಾರಿಯೊಬ್ಬರು ವಿವರಿಸಿದರು.
– ರಫೀಕ್ ಅಹ್ಮದ್