Advertisement

ಪ್ರಾಥಮಿಕ ಹಂತದಲ್ಲಿ ಎನ್‌ಇಪಿ ಈ ವರ್ಷವೇ ಜಾರಿ: ಸಚಿವ ಬಿ.ಸಿ. ನಾಗೇಶ್‌

12:49 AM Apr 28, 2022 | Team Udayavani |

ಮಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಈ ವರ್ಷದಿಂದಲೇ ಜಾರಿಗೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

Advertisement

ಅವರು ಬುಧವಾರ ಹಂಪನಕಟ್ಟೆ ಸರಕಾರಿ ಪದವಿ ಪೂರ್ವ ಕಾಲೇಜಿಗೆ (ಬೊಕ್ಕಪಟ್ಣದಿಂದ ಸ್ಥಳಾಂತರಗೊಂಡ ಕಾಲೇಜು) 4.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸ‌ಲಾಗುವ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಮಕ್ಕಳಿಗೆ ನೈಸರ್ಗಿಕವಾಗಿ ಕಲಿಯಲು ಅವಕಾಶ ಕಲ್ಪಿಸುತ್ತದೆ. ಎಲ್ಲ 20,000 ಶಾಲೆಗಳಲ್ಲಿ, ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಮತ್ತು ಮಾದರಿ ಶಾಲೆಗಳಲ್ಲಿ ಎನ್‌ಇಪಿ ಜಾರಿ ಗೊಳಿಸಲಾಗುವುದು ಎಂದರು.

1,000 ವಿದ್ಯಾರ್ಥಿಗಳಿಗೆ ವ್ಯವಸ್ಥೆ
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ. ವೇದವ್ಯಾಸ ಕಾಮತ್‌ ಮಾತನಾಡಿ, ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 4 ಸರಕಾರಿ ಪ.ಪೂ. ಕಾಲೇಜುಗಳಿದ್ದು, ನಾಲ್ಯಪದವು ಕಾಲೇಜಿಗೆ ಮಾತ್ರ ಹೊಸ ಕಟ್ಟಡ ನಿರ್ಮಾಣ ಬಾಕಿ ಇದೆ. ಇಲ್ಲಿನ ಸರಕಾರಿ ಶಾಲೆಗೆ 5 ಎಕರೆ ಜಾಗವಿದ್ದು, ಈ ಶಾಲೆಯ ಆವರಣದಲ್ಲಿಯೇ ಪ.ಪೂ. ಕಾಲೇಜು ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

ಬಲ್ಮಠ ಮತ್ತು ಕಾರ್‌ಸ್ಟ್ರೀಟ್‌ ಕಾಲೇಜುಗಳಿಗೆ ಕಟ್ಟಡ, 13 ಸರಕಾರಿ ಶಾಲೆಗಳಿಗೆ ತಲಾ 1 ಕೋಟಿ ರೂ. ವೆಚ್ಚದಲ್ಲಿ ಇ-ಸ್ಕೂಲ್‌, ಟ್ಯಾಬ್‌, ಕಂಪ್ಯೂಟರ್‌ ಇತ್ಯಾದಿ ಕಲ್ಪಿಸಲಾಗಿದೆ. ಹಂಪನಕಟ್ಟೆ ಪ.ಪೂ. ಕಾಲೇಜಿನಲ್ಲಿ 1,000 ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಲಾಗುವುದು ಎಂದರು.

Advertisement

ಲೈಬ್ರೇರಿ ಸೆಸ್‌ ಪಾಲಿಕೆಗೆ ಕೊಡಿ
ಗ್ರಂಥಾಲಯ ಕರವನ್ನು ಸರಕಾರಕ್ಕೆ ಪಾವತಿಸುವುದನ್ನು ನಿಲ್ಲಿಸಿ ಅದನ್ನು ಮಹಾನಗರ ಪಾಲಿಕೆಗೆ ಸಲ್ಲಿಸುವಂತಾಗ ಬೇಕು ಮತ್ತು ಸಾರಿಗೆ ಇಲಾಖೆಯು ಹೊಸ ವಾಹನ ನೋಂದಾಯಿಸುವಾಗ ಭಾಗಶಃ ಮೊತ್ತವನ್ನು ಮಹಾನಗರ ಪಾಲಿಕೆಗೆ ನೀಡುವಂತಾಗ ಬೇಕೆಂದು ಶಾಸಕರು ವಿನಂತಿಸಿದ‌ರು.

ಮೇಯರ್‌ ಪ್ರೇಮಾನಂದ ಶೆಟ್ಟಿ ಮಾತನಾಡಿ, ಮಹಾನಗರ ಪಾಲಿಕೆಗೆ ತೆರಿಗೆ ಮಾತ್ರ ಆದಾಯ ಮೂಲ ವಾಗಿದ್ದು, ವಿವಿಧ ಸೇವಾ ಸೌಲಭ್ಯಗಳನ್ನು ಒದಗಿಸುವ ಅವಕಾಶ ಕಲ್ಪಿಸಿಕೊಡ ಬೇಕೆಂದು ಮನವಿ ಮಾಡಿದರು.

ಮುಡಾ ಅಧ್ಯಕ್ಷ ರವಿಶಂಕರ ಮಿಜಾರು ಮಾತನಾಡಿದರು. ವಿವಿಧ ನಿಗಮಗಳ ಅಧ್ಯಕ್ಷರಾದ ನಿತಿನ್‌ ಕುಮಾರ್‌, ಸಂತೋಷ್‌ ಕುಮಾರ್‌ ಬೋಳಿಯಾರ್‌, ಕೆ. ರವೀಂದ್ರ ಶೆಟ್ಟಿ, ಸ್ಥಳೀಯ ಕಾರ್ಪೊರೇಟರ್‌ ಹಾಗೂ ಮಾಜಿ ಮೇಯರ್‌ ದಿವಾಕರ್‌ ಪಾಂಡೇಶ್ವರ, ಸರಕಾರಿ ಅಭ್ಯಾಸಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಡಾ| ಸಿಪ್ರಿಯನ್‌ ಮೊಂತೇರೊ, ಪ.ಪೂ. ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಯಣ್ಣ ಸಿ.ಡಿ., ಡಿಡಿಪಿಐ ಸುಧಾಕರ್‌, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎನ್‌.ಕೆ. ಗಂಗಾಧರ್‌, ಡಯೆಟ್‌ ಪ್ರಾಂಶು ಪಾಲೆ ರಾಜಲಕ್ಷ್ಮೀ, ಪಿಡಬ್ಲೂéಡಿ ಎಕ್ಸಿಕ್ಯೂಟಿವ್‌ ಎಂಜಿನಿಯರ್‌ ಯಶವಂತ್‌ ವೇದಿಕೆಯಲ್ಲಿದ್ದರು.

ಹಂಪನಕಟ್ಟೆ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ವಿನ್ಸೆಂಟ್‌ ಆ್ಯಂಟನಿ ಮಸ್ಕನೇನ್ಹಸ್‌ ಸ್ವಾಗತಿಸಿ, ಲತಾ ಡಿ. ವಂದಿಸಿದರು. ಉಮೇಶ್‌ ಕೆ.ಆರ್‌. ಮತ್ತು ಮಂಜುಳಾ ಶೆಟ್ಟಿ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next